ADVERTISEMENT

ಉಚಿತ ವಿದ್ಯುತ್‌: ಹಲವು ಷರತ್ತು | 75 ಯೂನಿಟ್‌ವರೆಗೆ ಶುಲ್ಕರಹಿತ

ಎಸ್‌ಸಿ–ಎಸ್‌ಟಿ ಬಡ ಕುಟುಂಬಗಳಿಗೆ 75 ಯೂನಿಟ್‌ವರೆಗೆ ಶುಲ್ಕರಹಿತ

​ಪ್ರಜಾವಾಣಿ ವಾರ್ತೆ
Published 14 ಮೇ 2022, 0:47 IST
Last Updated 14 ಮೇ 2022, 0:47 IST
   

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಬಡ ಕುಟುಂಬಗಳಿಗೆ ಗೃಹ ಬಳಕೆಗೆ 75 ಯೂನಿಟ್‌ಗಳವೆರೆಗೆ ಉಚಿತ ವಿದ್ಯುತ್‌ ಪೂರೈಕೆಗೆ ಇಂಧನ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಈ ಸೌಲಭ್ಯ ಪಡೆಯುವವರಿಗೆ ಹಲವು ಷರತ್ತುಗಳನ್ನೂ ವಿಧಿಸಿದೆ.

ಇಂಧನ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ 75 ಯೂನಿಟ್‌ವರೆಗೆ ಗೃಹಬಳಕೆಗೆ ವಿದ್ಯುತ್‌ ಬಳಸುತ್ತಿರುವ ಒಟ್ಟುಕುಟುಂಬಗಳ ಸಂಖ್ಯೆ 1.46 ಕೋಟಿ ಇದೆ. ಅವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ 39,26,065 ಕುಟುಂಬಗಳಿವೆ. ಈ ಎಲ್ಲಬಡ ಕುಟುಂಬಗಳೂ 75 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಪಡೆದರೆ ಇಂಧನ ಇಲಾಖೆಯಿಂದ ₹ 979 ಕೋಟಿ ಸಹಾಯಧನ ಪಾವತಿಸಬೇಕಾಗುತ್ತದೆ.

ಈವರೆಗೆ ಗ್ರಾಮೀಣ ಪ್ರದೇಶದ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಗೃಹ ಬಳಕೆಗೆ 40 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ ಒದಗಿಸಲಾಗುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 40 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿರುವ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಪೂರೈಸುವುದಾಗಿ ಡಾ. ಬಾಬು ಜಗಜೀವನರಾಂ ಜಯಂತಿ (ಏಪ್ರಿಲ್‌ 5) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು.

ADVERTISEMENT

ಈ ಸೌಲಭ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಎಲ್ಲ ಕುಟುಂಬಗಳಿಗೂ 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸುವುದಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮದಿನಾಚರಣೆ (ಏಪ್ರಿಲ್‌ 14) ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತೊಮ್ಮೆ ಘೋಷಣೆ ಮಾಡಿದ್ದರು. ಅದರಂತೆ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಮೇ 1 ರಿಂದಲೇ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೆ ಬಂದಿದೆ.

ಷರತ್ತುಗಳೇನು?: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದು, 75 ಯೂನಿಟ್‌ಗಳವರೆಗೆ ಗೃಹಬಳಕೆಗೆ ವಿದ್ಯುತ್‌ ಬಳಸುತ್ತಿರುವ ಕುಟುಂಬಗಳಷ್ಟೇ ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.

ಏಪ್ರಿಲ್‌ 30 ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್‌ ಬಿಲ್‌ ಅನ್ನು ಸಂಪೂರ್ಣವಾಗಿ ಪಾವತಿಸುವವರಿಗೆ ಮಾತ್ರ ಉಚಿತವಿದ್ಯುತ್‌ ಸೌಲಭ್ಯ ದೊರಕಲಿದೆ. ಯೋಜನೆವ್ಯಾಪ್ತಿಗೆ ಬರುವ ಎಲ್ಲ ಕುಟುಂಬಗಳೂ ತಮ್ಮ ವಿದ್ಯುತ್‌ ಸಂಪರ್ಕಕ್ಕೆ ಮೀಟರ್‌ ಅಳಪಡಿಸುವುದು ಕಡ್ಡಾಯ. ಮೀಟರ್‌ ಓದಿ ವಿದ್ಯುತ್‌ ಬಳಕೆಯ ಪ್ರಮಾಣವನ್ನು ದಾಖಲಿಸುವುದೂ ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೇರ ನಗದು ವರ್ಗಾವಣೆ: ಫಲಾನುಭವಿಗಳು ತಮ್ಮ ಆಧಾರ್‌ ಕಾರ್ಡ್‌ ಹಾಗೂ ಜಾತಿ ಪ್ರಮಾಣಪತ್ರವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಲ್ಲಿಸಬೇಕು. ತಮ್ಮ ಬ್ಯಾಂಕ್‌ ಖಾತೆಯ ಮಾಹಿತಿಯನ್ನೂ ಒದಗಿಸಬೇಕು. ಪ್ರತಿ ತಿಂಗಳು ಬಿಲ್‌ ಆದಾಗ ಗ್ರಾಹಕರು ಪೂರ್ಣ ಮೊತ್ತವನ್ನು ಪಾವತಿ ಮಾಡಬೇಕು. ನೇರ ನಗದು ವರ್ಗಾವಣೆ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಬಿಲ್‌ ಮೊತ್ತವನ್ನು ಫಲಾನುಭವಿಗಳಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ಇಂಧನ ಇಲಾಖೆ ತಿಳಿಸಿದೆ.

75 ಯೂನಿಟ್‌ ಮೀರಿದರೆ ಪೂರ್ಣ ಬಿಲ್‌

ಗ್ರಾಮೀಣ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್‌ ಕುಟುಂಬಗಳ ವಿದ್ಯುತ್‌ ಬಳಕೆ 75 ಯೂನಿಟ್‌ ಮೀರಿದರೆ ಅಂತಹ ಗ್ರಾಹಕರಿಗೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ನಿಗದಿಪಡಿಸಿದ ದರದಲ್ಲಿ ಪೂರ್ಣ ಬಿಲ್‌ ಮಾಡಬೇಕಾಗುತ್ತದೆ. ಬಿಲ್‌ ಮೊತ್ತವನ್ನು ಗ್ರಾಹಕರೇ ಪಾವತಿಸಬೇಕು’ ಎಂದು ಆದೇಶದಲ್ಲಿ ಷರತ್ತು ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.