ADVERTISEMENT

ಎಚ್‌.ಎಸ್. ದೊರೆಸ್ವಾಮಿ: ಧರೆಯ ಮಡಿಲಿಗೆ ಹೋರಾಟದ ದೊರೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 19:41 IST
Last Updated 26 ಮೇ 2021, 19:41 IST
ಎಚ್.ಎಸ್. ದೊರೆಸ್ವಾಮಿ (10-4-1918 – 26-5-2021)
ಎಚ್.ಎಸ್. ದೊರೆಸ್ವಾಮಿ (10-4-1918 – 26-5-2021)   

ಬೆಂಗಳೂರು: ನಾಡಿನ ಶತಮಾನದ ಸಾಕ್ಷಿಪ್ರಜ್ಞೆಯಂತಿದ್ದ, ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಸದಾ ಪ್ರತಿರೋಧ ತೋರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ (103) ಅವರು ಹೃದಯಾಘಾತದಿಂದ ಬುಧವಾರ ನಿಧನರಾದರು.

ಶಾಲಾದಿನಗಳಲ್ಲಿ ಗಾಂಧಿಯ ಪ್ರಭಾವಕ್ಕೆ ಒಳಗಾದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಗಣಿಲೂಟಿ ವಿರೋಧಿಸುವುದರಿಂದ ಹಿಡಿದು ಭೂರಹಿತರಿಗೆ ಭೂಮಿ ದೊರಕಿಸಿಕೊಡಿಸುವ ಹೋರಾಟದವರೆಗೆ, ದಲಿತರ ದೇವಾಲಯ ಪ್ರವೇಶದಿಂದ ಕೋಮುಸಂಘರ್ಷದ ಬೆಂಕಿ ಆರಿಸಿ ಶಾಂತಿ ನೆಲೆಸುವ ಪ್ರಯತ್ನಗಳವರೆಗೆ – ಎಲ್ಲ ಜನಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ಇದ್ದರು. ಎಂಟು ದಶಕಗಳ ಸುದೀರ್ಘ ಅವಧಿಯಲ್ಲಿ ಕಿಂಚಿತ್ತೂ ರಾಜಿಗೆ ಒಪ್ಪದೆ ಹೋರಾಟದಲ್ಲಿ ತೊಡಗಿದ್ದ ಅವರು, ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತಿದ್ದರು.

ರಾಜ್ಯದ ಹಿತಕ್ಕೆ ಮಾರಕವಾಗುವ ಯೋಜನೆಗಳು, ನೀತಿಗಳನ್ನು ನಿಷ್ಠುರವಾಗಿ ಯಾರ ಹಂಗಿಗೂ ಒಳಗಾಗದಂತೆ ಟೀಕಿಸುತ್ತಿದ್ದ ಅವರು, ತಮ್ಮ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಜಾಗೃತಗೊಳಿಸುತ್ತಿದ್ದರು. ತಮ್ಮ 98ನೇ ವಯಸ್ಸಿನಲ್ಲಿ ‘ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ’ ಎಂಬ ಪುಸ್ತಕ ಬರೆದಿದ್ದರು.

ADVERTISEMENT

ಹೃದಯ ಸಮಸ್ಯೆ ಎದುರಿಸುತ್ತಿದ್ದ ಅವರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರಿಗೆ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ವಯೋಸಹಜ ಅನಾರೋಗ್ಯ ಸಮಸ್ಯೆಗಳು ಇದ್ದವು. ಕೊರೊನಾ ಸೋಂಕು ಕೂಡ ತಗುಲಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮಧ್ಯಾಹ್ನ 1.30ಕ್ಕೆ ಮೃತಪಟ್ಟರು. ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. 2019ರಲ್ಲಿ ಅವರ ಪತ್ನಿ ಲಲಿತಮ್ಮ ನಿಧನರಾಗಿದ್ದರು.

ಚಾಮರಾಜಪೇಟೆಯಲ್ಲಿರುವ ಟಿ.ಆರ್. ಮಿಲ್‌ ಚಿತಾಗಾರದಲ್ಲಿ ಸಂಜೆ 6.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅವರು ತಮ್ಮ ದೇಹವನ್ನು ಸೇಂಟ್‌ ಜಾನ್ಸ್ ಆಸ್ಪತ್ರೆಗೆ ದಾನ ಮಾಡಿದ್ದರು. ಆದರೆ, ಕೋವಿಡ್‌ ಕಾರಣದಿಂದ ಅದು ಸಾಕಾರವಾಗಲಿಲ್ಲ.

ಮೇ 6ರಂದು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ, ನೆಗಡಿ ಹಾಗೂ ಕೆಮ್ಮಿನ ಲಕ್ಷಣಗಳು ಇದ್ದ ಕಾರಣ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆಗ ಕೊರೋನಾ ಸೋಂಕು ಖಚಿತಪಟ್ಟಿತ್ತು. 12ರಂದು ಚೇತರಿಸಿಕೊಂಡು ನಿವಾಸಕ್ಕೆ ತೆರಳಿದ್ದರು.

‘103 ವರ್ಷದ ನನಗೇಕೆ ಚಿಕಿತ್ಸೆ’
‘ನನಗೆ 103 ವರ್ಷ. ಈ ಇಳಿವಯಸ್ಸಿನಲ್ಲಿ ನನಗೇಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೀರಿ. ಇದೇ ಹಾಸಿಗೆಯನ್ನು ಅಗತ್ಯ ಇರುವ ಯುವ ರೋಗಿಗೆ ಬಳಸಿಕೊಳ್ಳಬಹುದು. ಅವರು ದೇಶದ ಆಸ್ತಿ’– ದೊರೆಸ್ವಾಮಿ ಅವರು ಕಡೆಯ ಬಾರಿ ಜಯದೇವ ಹೃದ್ರೋಗ ಸಂಸ್ಥೆಗೆ ದಾಖಲಾದಾಗ ವೈದ್ಯರ ಜತೆಗೆ ಹಂಚಿಕೊಂಡ ಮಾತುಗಳಿವು ಎಂದು ಡಾ.ಸಿ.ಎನ್. ಮಂಜುನಾಥ್ ನೆನಪಿಸಿಕೊಂಡರು.

ಎಚ್‌.ಎಸ್. ದೊರೆಸ್ವಾಮಿ
ಶ್ರೀನಿವಾಸ್ ಅಯ್ಯರ್ ಮತ್ತು ಲಕ್ಷ್ಮಮ್ಮ ದಂಪತಿಗೆ ನಾಲ್ಕನೇ ಮಗನಾಗಿ 1918ರ ಏ.10ರಂದು ದೊರೆಸ್ವಾಮಿ ಜನಿಸಿದರು. ‌ಹಾರೋಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬಳಿಕ ಬೆಂಗಳೂರಿಗೆ ಬಂದರು. ಅವರು 5ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಕೋಟೆ ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಅವರು, ‘ಕಿರಿಯ ತರುಣರ ಸಂಘ’ ಸ್ಥಾಪಿಸಿದ್ದರು. ಈ ಮೂಲಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಗಾಂಧೀಜಿ ಅವರ ‘ಮೈ ಅರ್ಲಿ ಲೈಫ್’ ಪುಸ್ತಕದಿಂದ ಅವರು ಪ್ರಭಾವಿತರಾಗಿದ್ದರು. ಕಾಲೇಜು ಶಿಕ್ಷಣದ ಅವಧಿಯಲ್ಲಿ ಬೆಂಗಳೂರಿನ ಕಬ್ಬನ್ ಪೇಟೆ ಬಳಿಯ ಬನಪ್ಪ ಉದ್ಯಾನದಲ್ಲಿ ನಡೆದ ಸ್ವಾತಂತ್ರ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1942ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದರು. 1942ರ ಆಗಸ್ಟ್‌ನಲ್ಲಿ ದೇಶವ್ಯಾಪಿ ಕ್ವಿಟ್ ಇಂಡಿಯಾ ಚಳವಳಿ ತೀವ್ರಗೊಂಡಿತು. ಇದರಲ್ಲಿ ಪಾಲ್ಗೊಂಡಿದ್ದ ಅವರನ್ನು ಬಾಂಬ್ ಪ್ರಕರಣವೊಂದರ ಆರೋಪದ ಮೇಲೆ 14 ತಿಂಗಳುಗಳ ಕಾಲ ಸ್ಥಾನ ಬದ್ದತೆಯ ಮೇಲೆ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಯಿತು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಪೌರವಾಣಿ’ ಪತ್ರಿಕೆಯ ಮೂಲಕ ಸರಣಿ ಲೇಖನಗಳನ್ನು ಬರೆದಿದ್ದರು. ‘ಪೌರವೀರ’, ‘ಪೌರ ಮಾರ್ತಾಂಡ’, ‘ಪೌರದೂತ’ ಹಾಗೂ ‘ಪೌರಭಾಸ್ಕರ‘ ಪತ್ರಿಕೆಗಳ ಸಂಪಾದಕರಾಗಿದ್ದರು. 1975ರಲ್ಲಿ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕೆ ಅವರನ್ನು ಬಂಧಿಸಲಾಗಿತ್ತು. 4 ತಿಂಗಳು ಸೆರೆವಾಸ ಅನುಭವಿಸಿದ್ದರು.

ಅವರಿಗೆ ಗಾಂಧಿ ಸೇವಾ ಪುರಸ್ಕಾರ, ಬಸವ ಪುರಸ್ಕಾರ, ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪುರಸ್ಕಾರ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.