ADVERTISEMENT

ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಬಿಜೆಪಿ ನೀತಿಯೇ ಕಾರಣ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 14:00 IST
Last Updated 16 ಜೂನ್ 2024, 14:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ವಿಜಯಪುರ: ‘ಪೆಟ್ರೋಲ್, ಡೀಸೆಲ್‌ ದರ ಏರಿಕೆಗೂ ಚುನಾವಣೆಗೂ ಸಂಬಂಧವಿಲ್ಲ, ದರ ಏರಿಕೆಗೆ ಬಿಜೆಪಿ ನೀತಿಯೇ ಕಾರಣ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ವಿಜಯಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2021 ರಲ್ಲಿ ಪೆಟ್ರೋಲ್ ದರದಲ್ಲಿ ಶೇ 35 ರೂಪಾಯಿ ತೆರಿಗೆ, ಡೀಸೆಲ್‌ಗೆ ಶೇ 24ರಷ್ಟು ತೆರಿಗೆ ಇತ್ತು. ಇದಕ್ಕೆ ಬಿಜೆಪಿಯೇ ಕಾರಣ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಪೆಟ್ರೋಲ್ ₹102.86 ಪೈಸೆ ಇದೆ, ಆಂಧ್ರ ಪ್ರದೇಶದಲ್ಲಿ ₹109.06, ಮಹಾರಾಷ್ಟ್ರದಲ್ಲಿ ₹104, ಮಧ್ಯಪ್ರದೇಶದಲ್ಲಿ ₹106.47 ರಷ್ಟಿದೆ. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ತೈಲ ಬೆಲೆ ಏರಿಕೆ ಮಾಡಿದ್ದರು. ಅದಕ್ಕೂ ಚುನಾವಣೆಗೆ ಸಂಬಂಧವೇ ಇಲ್ಲ’ ಎಂದರು.

ADVERTISEMENT

‘ಪೆಟ್ರೋಲ್, ಡೀಸೆಲ್‌ ದರ ಹೆಚ್ಚಳ ಮಾಡಿದ್ದು ಲೋಕಸಭಾ ಚುನಾವಣೆಯಲ್ಲಿನ ಸೇಡು’ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಕಳೆದ ಚುನಾವಣೆಯಲ್ಲಿ ಒಂದೇ ಸ್ಥಾನ ನಾವು ಗಳಿಸಿದ್ದೆವು. 2024ರ ಚುನಾವಣೆಯಲ್ಲಿ  9 ಸ್ಥಾನಕ್ಕೆ ಬಂದಿದ್ದೇವೆ. ಅವರು 25 ಸ್ಥಾನದಿಂದ ರಿಂದ  17 ಸ್ಥಾನಕ್ಕೆ ಕುಸಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಸೋತಿಲ್ಲ, ಬಿಜೆಪಿಯವರು ಸೋತಿದ್ದಾರೆ’ ಎಂದು ಕುಟುಕಿದರು.

ಕೇಂದ್ರ ಸರ್ಕಾರ ದೇಶದಲ್ಲಿ ಬೆಲೆ ನಿಯಂತ್ರಣ ಮಾಡಿದರೆ ರಾಜ್ಯ ಸರ್ಕಾರ ಕೃತಕವಾಗಿ ಬೆಲೆ ಏರಿಕೆ ಸನ್ನಿವೇಶ ಸೃಷ್ಟಿಸಿದೆ. ಇದು ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ. ಲೋಕಸಭಾ ಚುನಾವಣೆಯಲ್ಲಿ ಜನರು ತಿರಸ್ಕಾರ ಮಾಡಿದ್ದಕ್ಕೆ ದ್ವೇಷ ಸಾಧಿಸುತ್ತಿದೆ
–ಪ್ರಲ್ಹಾದ ಜೋಶಿಕೇಂದ್ರ ಸಚಿವ
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ಸರ್ಕಾರವು ಜನರ ಕಿಸೆಗೆ ಕೈಹಾಕುತ್ತಿದೆ. ಜನಸಾಮಾನ್ಯರ ಮೇಲೆ ಹೊರೆ ಹಾಕುವ ಬದಲು ಗ್ಯಾರಂಟಿ ಯೋಜನೆಗಳನ್ನೇ ನಿಲ್ಲಿಸಲಿ’
– ಜಗದೀಶ ಶೆಟ್ಟರ್‌ ಸಂಸದ
‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಜಾಹೀರಾತು ನೀಡಿದ್ದ ಕಾಂಗ್ರೆಸ್‌ ಇದೀಗ ಬೆಲೆ ಏರಿಕೆ ಮೂಲಕ ರಾಜ್ಯದ ಜನರ ಕೈಗೆ ‘ಚೊಂಬು’ ನೀಡಿದೆ.
–ಅರವಿಂದ ಬೆಲ್ಲದ ಉಪನಾಯಕ ವಿಧಾನಸಭೆ ವಿರೋಧ ಪಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.