ADVERTISEMENT

ದಕ್ಷಿಣದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ತೈಲ ದರ ಕಡಿಮೆ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2024, 12:57 IST
Last Updated 16 ಜೂನ್ 2024, 12:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕರ್ನಾಟಕವು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶನಿವಾರ(ಜೂನ್‌ 15) ಆದೇಶ ಹೊರಡಿಸಿದ್ದು, ಇದರಿಂದಾಗಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹3.02ರಷ್ಟು ಹಾಗೂ ಡೀಸೆಲ್‌ ದರ ಲೀಟರ್‌ಗೆ ₹ 3ರಷ್ಟು ಹೆಚ್ಚಾಗಿದೆ. ಮಧ್ಯರಾತ್ರಿ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದರ ವಿರುದ್ಧ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗೂ ಕರೆ ನೀಡಿವೆ.

ಈ ಕುರಿತಂತೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ‘ಮೌಲ್ಯವರ್ಧಿತ ತೆರಿಗೆ ಹೆಚ್ಚಳದ ಹೊರತಾಗಿಯೂ ರಾಜ್ಯದಲ್ಲಿ ಡೀಸೆಲ್‌ ಬೆಲೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಿಗಿಂತ ಕಡಿಮೆಯಿದೆ’ ಎಂದಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 29.84% ಗೆ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು 18.44% ಗೆ ಹೆಚ್ಚಳ ಮಾಡಿದೆ. ಈ ಏರಿಕೆಯ ನಂತರವೂ ಕರ್ನಾಟಕವು ತೈಲೋತ್ಪಾನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಕಡಿಮೆಯಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಶೇ 25 ಜೊತೆಗೆ ಹೆಚ್ಚುವರಿ ತೆರಿಗೆ ₹5.12 ಇದೆ. ಡೀಸೆಲ್‌ ಮೇಲೆ ಶೇ 21ರಷ್ಟು ತೆರಿಗೆ ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದ ಪರಿಷ್ಕೃತ ದರ ಕೂಡ ಜನರಿಗೆ ಹೊರೆಯಾಗದಂತಿದೆ’ ಎಂದು ಹೇಳಿದರು.

‘ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ರಾಜ್ಯದ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ ದರವನ್ನು ಕಡಿತಗೊಳಿಸುವಂತೆ ಮಾಡಿ, ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡುವ ಮೂಲಕ ಲಕ್ಷಾಂತರ ಕೋಟಿ ಸಂಗ್ರಹಿಸಿತ್ತು. ಈ ಅನರ್ಥ ನೀತಿಯಿಂದಾಗಿ ರಾಜ್ಯದ ರಾಜಸ್ವ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದರೆ, ಇದೇ ವೇಳೆ ಕೇಂದ್ರವು ಕನ್ನಡಿಗರಿಗೆ ದ್ರೋಹ ಬಗೆದು ಭರಪೂರ ತೆರಿಗೆ ಸಂಗ್ರಹಿಸಿತ್ತು’ ಎಂದು ಕಿಡಿಕಾರಿದರು.

‘ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ₹9.21ರಿಂದ ₹32.98ಕ್ಕೆ ಹಾಗೂ ಡೀಸೆಲ್‌ ಮೇಲೆ ₹3.45 ರಿಂದ ₹31.84 ಕ್ಕೆ ಹೆಚ್ಚಳ ಮಾಡಿತ್ತು. ಇದು ನಿಜವಾಗಿಯೂ ಜನರ ಮೇಲಿನ ಹೊರೆ’ ಎಂದರು.

‘ಆಗಾಗ್ಗೆ ಕೇಂದ್ರ ಸರ್ಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ ₹19.9 ಹಾಗೂ ಡೀಸೆಲ್‌ ಮೇಲೆ ₹15.8 ಇದೆ. ನರೇಂದ್ರ ಮೋದಿ ಅವರ ಸರ್ಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆಯನ್ನು ಇಳಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರದ ಮೌಲ್ಯವರ್ಧಿತ ತೆರಿಗೆಯಲ್ಲಾದ ಬದಲಾವಣೆಯಿಂದ ಸಂಗ್ರಹವಾಗುವ ಹಣವು ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸಲ್ಪಡುತ್ತದೆ ಎಂಬ ಗ್ಯಾರಂಟಿಯನ್ನು ನಾನು ನೀಡುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.