ADVERTISEMENT

ಪೂರ್ಣ ಪ್ರಮಾಣದ ಉಪನ್ಯಾಸಕಿ: ನೇಮಕಕ್ಕೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 16:04 IST
Last Updated 19 ಜೂನ್ 2024, 16:04 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಎಚ್.ಎಸ್.ವಿಜಯಲಕ್ಷ್ಮೀ ಅವರನ್ನು ಪೂರ್ಣ ಪ್ರಮಾಣದ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು’ ಎಂದು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಆಡಳಿತ ಮಂಡಳಿಗೆ ಆದೇಶಿಸಿರುವ ಹೈಕೋರ್ಟ್‌, ‘ಮೂರು ತಿಂಗಳಲ್ಲಿ ಈ ಆದೇಶವನ್ನು ಜಾರಿಗೊಳಿಸಬೇಕು. ಇಲ್ಲವಾದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎಚ್‌.ಎಸ್.ವಿಜಯಲಕ್ಷ್ಮೀ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ರಾಜ್ಯ ಸರ್ಕಾರ ತುಂಬಾ ಜಾಗರೂಕ ಹೆಜ್ಜೆ ಇರಿಸಬೇಕು’ ಎಂದು ಕಿವಿಮಾತು ಹೇಳಿದೆ.

ADVERTISEMENT

‘ಶಿವಶಂಕರ್ ಭಟ್ ಅವರ ನಿವೃತ್ತಿಯಿಂದ ಹಿಂದಿ ಭಾಷೆಯ ಉ‍ಪನ್ಯಾಸಕ ಹುದ್ದೆ ಖಾಲಿ ಇತ್ತು. ಆ ಹುದ್ದೆಗೆ ವಿಜಯಲಕ್ಷ್ಮೀ 1996ರ ಜೂನ್‌ 1ರಂದು ಅರೆಕಾಲಿಕ ಉಪನ್ಯಾಸಕಿಯಾಗಿ ನೇಮಕಗೊಂಡು ವಾರದಲ್ಲಿ 16 ಗಂಟೆಗಳ ಕಾಲ ಪಾಠ ಮಾಡುತ್ತಿದ್ದರು. ಆದರೆ, ಏಕಸದಸ್ಯ ನ್ಯಾಯಪೀಠ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕಾಲೇಜು ಶಿಕ್ಷಣ) ನಿಯಮ 2003 ಅನ್ನು ಸರಿಯಾಗಿ ಗ್ರಹಿಸದೆ ಅರ್ಜಿದಾರರನ್ನು ಪೂರ್ಣಕಾಲಿಕ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ಸರಿಯಲ್ಲ. ನಿಯಮ 3ರಂತೆ ಸುದೀರ್ಘ ಅವಧಿಯವರೆಗೆ ಅರ್ಜಿದಾರರು ಸಲ್ಲಿಸಿರುವ ಸೇವೆಯನ್ನು ಅನುದಾನಿತ ಸಂಸ್ಥೆಗಳಲ್ಲಿ ಬಳಸಿಕೊಳ್ಳಲು ಅವಕಾಶವಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.