ADVERTISEMENT

ಸಂಘ, ಸಂಸ್ಥೆಗಳಿಗೆ ಅನುದಾನ ಸ್ಥಗಿತ

ಪ್ರತಿ ತಾಲ್ಲೂಕಿನಲ್ಲೂ ‘ಕರ್ನಾಟಕ ಸಂಸ್ಕೃತಿ’ ಹೆಸರಿನಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:15 IST
Last Updated 3 ಜುಲೈ 2019, 20:15 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ   

ಬೆಂಗಳೂರು: ಕಲೆ, ಸಂಸ್ಕೃತಿ, ಸಾಹಿತ್ಯದ ಹೆಸರಿನಲ್ಲಿ ಅನುದಾನ ಪಡೆದು ವಂಚಿಸುತ್ತಿರುವುದನ್ನು ತಡೆಯುವ ಸಲುವಾಗಿ ಸಂಘ, ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿರುವ ಆರ್ಥಿಕ ನೆರವು ಸ್ಥಗಿತಗೊಳಿಸಲು ಮುಂದಾಗಿದೆ.

ಸಂಘಗಳಿಗೆ ಅನುದಾನ ನೀಡುವ ಬದಲು ‘ಕರ್ನಾಟಕ ಸಂಸ್ಕೃತಿ’ ಎಂಬ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ಧಗೊಳ್ಳಲಿದೆ. ಈವರೆಗೆ ಇದ್ದ ಸಾಂಪ್ರದಾಯಿಕ ಕ್ರಮಗಳನ್ನು ಕೈಬಿಟ್ಟು, ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ತಿಳಿಸಿದರು.

ಸಾಕಷ್ಟು ಸಂಘ, ಸಂಸ್ಥೆಗಳು ಕೇವಲ ಲೇಟರ್‌ಹೆಡ್‌ನಲ್ಲಿ ಮಾತ್ರ ಇವೆ. ಇಂತಹ ಸಂಘಗಳು ಯಾವುದೇ ಕಾರ್ಯಕ್ರಮ ಮಾಡದೆ ಅರ್ಜಿ ಸಲ್ಲಿಸಿ ಅನುದಾನ ಪಡೆದುಕೊಳ್ಳುತ್ತಿವೆ. ಕೆಲವು ಸಂಘಗಳು ಎರಡು–ಮೂರು ಇಲಾಖೆಗಳಲ್ಲಿ ಆರ್ಥಿಕ ನೆರವು ಪಡೆಯುತ್ತಿವೆ. ಅನುದಾನ
ದುರುಪಯೋಗ ತಡೆಯುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ವರ್ಷಗಳಲ್ಲಿ ಆಗಿರುವ ದುರುಪಯೋಗದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಕರ್ನಾಟಕ ಸಂಸ್ಕೃತಿ’ ಹೆಸರಿನಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸಾಂಸ್ಕೃತಿಕಕಾರ್ಯ‌ಕ್ರಮಗಳನ್ನು ಏರ್ಪಡಿಸಿ, ಸ್ಥಳೀಯ ಕಲಾವಿದರಿಗೆ ಅವಕಾಶನೀಡಲಾಗುವುದು’ಎಂದರು.

ಪ್ರತಿಭಾನ್ವಿತ ಯುವ ಕಲಾವಿದರನ್ನು ತಾಲ್ಲೂಕು ಮಟ್ಟದಿಂದಲೇ ಗುರುತಿಸುವುದು, ಹಂತಹಂತವಾಗಿ ಸ್ಪರ್ಧಿಸಿ ರಾಜ್ಯಮಟ್ಟದಲ್ಲಿ ಆಯ್ಕೆಯಾದವರನ್ನು ವಾರ್ಷಿಕ ಪ್ರಶಸ್ತಿಗೆ ಪರಿಗಣಿಸಲಾಗುವುದು. ಹಣಕ್ಕೆ ಅರ್ಜಿ ಹಾಕುವ ಬದಲು ತಾಲ್ಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕಲಾವಿದರು, ಸಂಘಗಳು ಪಾಲ್ಗೊಳ್ಳಬಹುದು. ಆದರೆ ನಿಜವಾಗಿಯೂ ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘಗಳಿಗೆ ಅನುದಾನ ನೀಡುವುದನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೂರು ದಾಖಲು: ‘ಕಾರ್ಯಕ್ರಮ ಮಾಡದಿದ್ದರೂ ಅರ್ಜಿ ಸಲ್ಲಿಸಿ ಹಣ ನೀಡುವಂತೆ ಕೆಲ ಸಂಘ, ಸಂಸ್ಥೆಗಳು ಒತ್ತಾಯಿಸುತ್ತಿವೆ. ಇಂತಹ ಸಂಘಗಳು ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ನನ್ನ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಬ್ಲಾಕ್‌ಮೇಲ್‌ ಮಾಡುತ್ತಿವೆ’ ಎಂದು ಸಚಿವರು ಆರೋಪಿಸಿದರು.

ಸಾರ್ವಜನಿಕರಿಂದ ಸಲಹೆಗೆ ಆಹ್ವಾನ

‘ಕರ್ನಾಟಕ ಸಂಸ್ಕೃತಿ’ ಕಾರ್ಯಕ್ರಮ ರೂಪಿಸುವ ಬಗ್ಗೆ ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಕೆಳಗಿನ ವಿಳಾಸಕ್ಕೆ 15 ದಿನಗಳಲ್ಲಿ ತಿಳಸಬಹುದು.

ವಿಳಾಸ: ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು. ವಾಟ್ಸ್ಆಪ್ 9886670864– 7899664101. ಇ–ಮೇಲ್ developkanaja@gmail.com, dkc.kanaja@gmail.com

ಸರ್ಕಾರದಿಂದ ಒಡೆಯರ್ ಜಯಂತಿ

ಮೈಸೂರು ರಾಜಮನೆತನದ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಜೂನ್ 18ಕ್ಕೆ ಒಡೆಯರ್ ಜನಿಸಿ (18–6–1919) ನೂರು ವರ್ಷಗಳಾಗಿದ್ದು, ಶಿಕ್ಷಣ, ನೀರಾವರಿ, ಕೈಗಾರಿಕೆಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಸರ್ಕಾರವೇ ಕಾರ್ಯಕ್ರಮ ರೂಪಿಸಿ, ಆಚರಣೆ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.