ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿರುವ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಮೂವರು ಯುವತಿಯರ ಮೃತದೇಹವನ್ನು ಸೋಮವಾರ ಮೈಸೂರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು, ಮೃತರ ಕುಟುಂಬದವರಿಗೆ ಶವ ಹಸ್ತಾಂತರಿಸಿದರು. 11 ಗಂಟೆಯ ಹೊತ್ತಿಗೆ ಮೂರು ಶವಗಳನ್ನು ಮೈಸೂರಿಗೆ ತಂದ ಕುಟುಂಬವರು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಿ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಿದರು.
ಪಾರ್ವತಿ ಅವರ ಅಂತಿಮ ದರ್ಶನಕ್ಕೆ ಅಗ್ರಹಾರದ ಮನೆ ಬಳಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಚಾಮುಂಡಿ ಬೆಟ್ಟದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮೃತ ಪಾರ್ವತಿ ತಂದೆ ಶ್ರೀನಿವಾಸ್ ಮಾಧ್ಯಮದೊಂದಿಗೆ ಮಾತನಾಡಿ, ‘ಇಬ್ಬರು ಸ್ನೇಹಿತೆಯರನ್ನು ಕಾಪಾಡಲು ತೆರಳಿ ನನ್ನ ಮಗಳೂ ಹೋದಳು, ಮೂವರು ನೀರಿನಲ್ಲಿ ಮುಳುಗಿ ಕುಟುಂಬದವರನ್ನು ಅನಾಥರನ್ನಾಗಿ ಮಾಡಿದರು. ರೆಸಾರ್ಟ್‌ನಲ್ಲಿನ ಬೇಜಾವಬ್ದಾರಿಯಿಂದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳನ್ನು ಹೊರಗೆ ಕಳಿಸುವ ಮುನ್ನ ಪೋಷಕರು ಯೋಚಿಸಿ’ ಎಂದು ಕಣ್ಣೀರಾದರು.
ಎಂ.ಡಿ.ನಿಶ್ಚಿತಾ ಮೃತದೇಹವನ್ನು ಜೆಸಿ ಬಡಾವಣೆಯಲ್ಲಿನ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಬನ್ನಿಮಂಟಪದ ಜೋಡಿ ತೆಂಗಿನ ಮರದ ಸ್ಮಶಾನದಲ್ಲಿ ಹೆಬ್ಬಾಳು 2 ನೇ ಹಂತದ ನಿವಾಸಿ ಎನ್. ಕಿರ್ತನಾ ಅಂತ್ಯಸಂಸ್ಕಾರ ನಡೆಸಲಾಯಿತು.
ವೀಕೆಂಡ್‌ಗಾಗಿ ಈ ಮೂವರು ಸ್ನೇಹಿತೆಯರು ಮಂಗಳೂರಿಗೆ ತೆರಳಿದ್ದು, ರೇಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಿಗ್ಗೆ ಈಜುಕೊಳದಲ್ಲಿ ಈಜಲು ತೆರಳಿದ್ದು, ಮುಳುಗುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ತೆರಳಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.