ADVERTISEMENT

ರೆಬೆಲ್‌ ಶಾಸಕರ ಭವಿಷ್ಯ: ಮುಂದಿರುವ ಏಳು ಹಾದಿಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 14:08 IST
Last Updated 12 ಫೆಬ್ರುವರಿ 2019, 14:08 IST
   

ಬೆಂಗಳೂರು: ವಿಪ್‌ (ಪಕ್ಷದ ನಿರ್ದೇಶನ) ಉಲ್ಲಂಘಿಸಿದ ತಮ್ಮ ಪಕ್ಷದ ನಾಲ್ವರು ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಕುರಿತು ನಿರ್ಣಯ ಕೈಗೊಳ್ಳುವಾಗ ಸ್ಪೀಕರ್‌ ಮುಂದಿನ ಆಯ್ಕೆಗಳೇನು? ಶಾಸಕರ ನಡೆ ಏನಿರಬಹುದು? ಕಾನೂನು ಸಚಿವರಾಗಿ ಕೆಲಸ ಮಾಡಿದ್ದ ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರ ಪ್ರಕಾರ ಇಲ್ಲಿವೆ ಕೆಲವು ಸಾಧ್ಯಾಸಾಧ್ಯತೆಗಳು:

1. ಪಕ್ಷಾಂತರ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಆರೋಪಿಸಿರುವ ನಾಲ್ವರು ಶಾಸಕರಾದ ರಮೇಶ ಜಾರಕಿಹೊಳಿ, ಉಮೇಶ್‌ ಜಾಧವ್‌, ಮಹೇಶ್‌ ಕುಮಟಳ್ಳಿ ಹಾಗೂ ಬಿ.ನಾಗೇಂದ್ರ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಬಹುದು.

2. ಪಕ್ಷಾಂತರ ನಿಷೇಧ ಕಾಯ್ದೆಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನೋಟಿಸ್‌ ಜಾರಿಯಾಗುವ ಮುನ್ನವೇ ನಾಲ್ವರೂ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು.

ADVERTISEMENT

3. ಶಾಸಕರು ರಾಜೀನಾಮೆ ಸಲ್ಲಿಸಲು ಮುಂದಾದರೆ, ಅದಕ್ಕಿಂತ ಮುಂಚೆಯೇ ತಾವು ಸ್ವೀಕರಿಸಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರ ಅರ್ಜಿಯನ್ನು ಇತ್ಯರ್ಥಗೊಳಿಸುವವರೆಗೆ ರಾಜೀನಾಮೆ ಸ್ವೀಕರಿಸದಿರುವ ನಿರ್ಧಾರವನ್ನು ಕೈಗೊಳ್ಳಬಹುದು.

4. ವಿಪ್‌ ಸದನದೊಳಗೆ ಮಾತ್ರ ಅನ್ವಯವಾಗುತ್ತದೆ. ಸದನದೊಳಗಿನ ಯಾವುದೇ ವಿಪ್‌ಅನ್ನು ನಾವು ಉಲ್ಲಂಘಿಸಿಲ್ಲ ಎಂದು ನಾಲ್ವರೂ ಶಾಸಕರು ವಾದ ಮಂಡಿಸಬಹುದು.

5. ಆಡಿಯೊ ಹಗರಣದ ಬಳಿಕ ‘ಆಪರೇಷನ್‌ ಕಮಲ’ದ ಆಸೆ ಕೈಬಿಟ್ಟು, ಕಾರಣಾಂತರಗಳಿಂದ ಶಾಸಕಾಂಗ ಸಭೆಗೆ ಬರಲು ಆಗಿರಲಿಲ್ಲ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಎಂದು ಹೇಳಿ ನಾಲ್ವರೂ ಶಾಸಕರು ಕಾಂಗ್ರೆಸ್‌ ಪಕ್ಷದಲ್ಲೇ ಉಳಿಯಬಹುದು.

6. ಸ್ಪೀಕರ್‌ ಕೊಟ್ಟ ನೋಟಿಸ್‌ಗೆ ಶಾಸಕರು ಉತ್ತರ ಕೊಟ್ಟ ಬಳಿಕ, ಅದು ಸ್ಪೀಕರ್‌ಗೆ ಸಮಂಜಸವಾಗಿ ತೋರದಿದ್ದರೆ ಅನರ್ಹಗೊಳಿಸಬಹುದು.

7. ಸ್ಪೀಕರ್‌ ಆದೇಶದ ವಿರುದ್ಧ ನಾಲ್ವರೂ ಶಾಸಕರು ಕೋರ್ಟ್‌ ಮೆಟ್ಟಿಲೇರಬಹುದು.

ಏನಿದು ಪಕ್ಷಾಂತರ ನಿಷೇಧ ಕಾಯ್ದೆ?

1985ರ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿ ಜಯ ದಾಖಲಿಸಿದ ತಕ್ಷಣ ರಾಜೀವ್ ಗಾಂಧಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವಂತೆ ಮಾಡಿದರು. ಈ ಕಾಯ್ದೆಯ ಆಶಯ ಹೀಗಿದೆ: ‘ಪಕ್ಷದ ನಿರ್ದೇಶನವನ್ನು ಮತದಾನದ ವೇಳೆ ಉಲ್ಲಂಘಿಸುವ ಶಾಸಕ (ಅಥವಾ ಸಂಸದ) ಪಕ್ಷಾಂತರಿ ಎಂದು ಪರಿಗಣಿತನಾಗುತ್ತಾನೆ. ಆತ ಅನರ್ಹ ಆಗುತ್ತಾನೆ'.

ಅಂದರೆ, ಪಕ್ಷ ತನ್ನ ಸದಸ್ಯರಿಗೆ ಒಮ್ಮೆ ವಿಪ್‌ (ಮತದಾನದ ಸಮಯದಲ್ಲಿ ಹಾಜರಿರಬೇಕು ಎಂಬ ಸೂಚನೆ ಇರುವ ಲಿಖಿತ ನೋಟಿಸ್) ಜಾರಿಗೊಳಿಸಿದ ನಂತರ ಅವರು ತಮಗೆ ಇಷ್ಟಬಂದಂತೆ ಮತ ಚಲಾಯಿಸುವಂತೆ ಇಲ್ಲ; ಅವರು ಪಕ್ಷದ ಸೂಚನೆಗೆ ಅನುಸಾರವಾಗಿಯೇ ಮತ ಚಲಾಯಿಸಬೇಕು. ಶಾಸಕ ಮತದಾನದಿಂದ ದೂರ ಉಳಿದರೂ ಆತನನ್ನು ಅನರ್ಹಗೊಳಿಸಬಹುದು. ಇಲ್ಲಿ ಮತದಾನ ಅಂದರೆ, ಒಂದು ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸುವ ವಿಶ್ವಾಸಮತಕ್ಕೆ ಸಂಬಂಧಿಸಿದ್ದೇ ಆಗಬೇಕಿಲ್ಲ. ಪಕ್ಷ ತೀರ್ಮಾನಿಸಿದರೆ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾವುದೇ ಮತದಾನಕ್ಕಾದರೂ ಅನ್ವಯ ಮಾಡಬಹುದು.

ಕನಿಷ್ಠ ಮೂರನೆಯ ಒಂದರಷ್ಟು ಶಾಸಕರು ತಮ್ಮ ಪಕ್ಷದ ಸೂಚನೆ ಉಲ್ಲಂಘಿಸಿದ್ದರೆ, ಆಗ ಅವರ ವಿರುದ್ಧ ಈ ಕಾಯ್ದೆ ಅನ್ವಯ ಆಗುತ್ತಿರಲಿಲ್ಲ. ಆದರೆ, 2004ರಲ್ಲಿ ಈ ಅಂಶವನ್ನು ತೆಗೆಯಲಾಯಿತು. 'ಮೂರನೆಯ ಒಂದರಷ್ಟು' ಎನ್ನುವ ನಿಯಮವು 'ಸಾಮೂಹಿಕ ಪಕ್ಷಾಂತರ'ಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದು ಈ ಅಂಶವನ್ನು ತೆಗೆದಿದ್ದರ ಹಿಂದಣ ತರ್ಕವಾಗಿತ್ತು.

ಈ ಕಾಯ್ದೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಇತರ ಯಾವುದೇ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ (ಕಿಹೊಟೊ ಹೊಲ್ಲೊಹಾನ್ ಮತ್ತು ಝಚಿಲ್ಹು ನಡುವಣ ಪ್ರಕರಣದಲ್ಲಿ) 1992ರಲ್ಲಿ ಹೇಳಿತು. 'ರಾಜಕೀಯ ಮತ್ತು ವೈಯಕ್ತಿಕ ನಡವಳಿಕೆಗಳಲ್ಲಿ ಕಾಯ್ದುಕೊಳ್ಳಬೇಕಾದ ಶಿಸ್ತಿನ ವಾಸ್ತವಿಕ ಅಗತ್ಯವು ಕೆಲವು ಕಲ್ಪಿತ ಸಿದ್ಧಾಂತಗಳಿಗಿಂತ ಮೇಲು ಎಂಬುದು ಈ ಕಾಯ್ದೆ ಹೇಳುವ ಮಾತು' ಎಂದು ಕೋರ್ಟ್‌ ಹೇಳಿತು.

* ಅನರ್ಹಗೊಳಿಸಲು ಯಾರಿಗೆ ಅಧಿಕಾರ?

ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವ ಪೂರ್ಣ ಅಧಿಕಾರ ಸ್ಪೀಕರ್‌ ಅವರಿಗಿದೆ. ಅವರ ನಿರ್ಧಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ಸದಸ್ಯರಿಗೆ ಅವಕಾಶವಿದೆ.

* ಅನರ್ಹಗೊಂಡ ಶಾಸಕರಿಗೆ ಏನು ಶಿಕ್ಷೆ?

ಅನರ್ಹಗೊಂಡ ದಿನದಿಂದ ಆರು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.