ADVERTISEMENT

ಸಕಲ ಸರ್ಕಾರಿ ಗೌರವಗಳೊಂದಿಗೆ ಜಿ.ಮಾದೇಗೌಡರ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 14:08 IST
Last Updated 18 ಜುಲೈ 2021, 14:08 IST
ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರು ಗೌರವ ಸಲ್ಲಿಸಿದರು
ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರು ಗೌರವ ಸಲ್ಲಿಸಿದರು   

ಭಾರತೀನಗರ (ಮಂಡ್ಯ ಜಿಲ್ಲೆ): ಸಮೀಪದ ಹನುಮಂತನಗರದಲ್ಲಿ ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ. ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನೆರವೇರಿತು.

ಆತ್ಮಲಿಂಗೇಶ್ವರ ದೇವಾಲಯದ ಪಕ್ಕದ ಜಾಗದಲ್ಲಿ ಮಾದೇಗೌಡರ ಪುತ್ರರಾದ ವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಹಾಗೂ ಮಿಮ್ಸ್‌ನ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಅವರು ಅಗ್ನಿಸ್ಪರ್ಶ ಮಾಡಿದರು.

ಅಂತಿಮ ನಮನ

ಇದಕ್ಕೂ ಮುನ್ನ ಮಾದೇಗೌಡರ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜವನ್ನೊದಿಸಿ, ಐದು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪೊಲೀಸ್‌ ವಾದ್ಯವೃಂದದ ಸದಸ್ಯರು ರಾಷ್ಟ್ರಗೀತೆ ನುಡಿಸಿ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಡಾ.ಅಶ್ವಿನಿ ರಾಷ್ಟ್ರಧ್ವಜವನ್ನು ಜಿ.ಮಾದೇಗೌಡರ ಪತ್ನಿ ಜೆ.ಸಿ.ಪದ್ಮಾ ಅವರಿಗೆ ಹಸ್ತಾಂತರಿಸಿದರು.

ADVERTISEMENT

ಬೆಳಿಗ್ಗೆ ಮಂಡ್ಯದ ಬಂದೀಗೌಡ ನಗರದ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ನಂತರ ವಿವಿ ರಸ್ತೆಯ ಗಾಂಧಿಭವನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಮದ್ದೂರು ಮಾರ್ಗದಲ್ಲಿ ಹನುಮಂತನಗರಕ್ಕೆ ಮೆರವಣಿಗೆ ಮೂಲ ತರಲಾಯಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಮುಖಂಡ ಕೆ.ಎಚ್. ಮುನಿಯಪ್ಪ, ಸಂಸದ ಡಿ.ಕೆ.ಸುರೇಶ್‌, ಬಿಜೆಪಿ ಮುಖಂಡ ಬಿ.ಸೋಮಶೇಖರ್‌, ಚಿತ್ರ ನಿರ್ದೇಶಕ ಪ್ರೇಮ್‌ ಅಂತಿಮ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.