ADVERTISEMENT

ಮುಸ್ಲಿಂ ಮೀಸಲು ರದ್ದು | ಅಮಿತ್ ಶಾ ಹೇಳಿಕೆಗೆ ಜಿ.ಪರಮೇಶ್ವರ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 11:18 IST
Last Updated 22 ಏಪ್ರಿಲ್ 2024, 11:18 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ತುಮಕೂರು: ಮುಸ್ಲಿಂರಿಗೆ ಕೊಡುತ್ತಿರುವ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಗೃಹ ಸಚಿವ ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ ನೀಡುತ್ತಿರುವ ಶೇ 4ರಷ್ಟು ಮೀಸಲಾತಿ ರದ್ದುಪಡಿಸಲಾಗುವುದು ಎಂದು ಅಮಿತ್ ಶಾ ಇಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿಗೆ ಮುಸ್ಲಿಂರ ವೋಟು ಬೇಡವಾಯಿತು. ಈಗ ಅವರೂ ಬೇಡವಾಗಿದ್ದಾರೆ. ಒಂದು ಸಮುದಾಯವನ್ನೇ ವಿರೋಧಿಸುವುದು ಸರಿಯಲ್ಲ’ ಎಂದರು.

‘ಸಬ್ ಕಾ ಸಾಥ್, ಸಬ್‌ ಕಾ ವಿಕಾಸ್’ ಎಂಬುದು ಬಿಜೆಪಿಯ ಘೋಷ ವಾಕ್ಯ. ಈಗ ಅದನ್ನು ಬದಲಾಯಿಸಬೇಕಾಗಿದೆ. ಬೇಕಿದ್ದರೆ ಬಿಜೆಪಿಯ ವಿಕಾಸ ಎಂದು ಹಾಕಿಕೊಳ್ಳಲಿ ಎಂದು ಲೇವಡಿ ಮಾಡಿದರು.

ADVERTISEMENT

ಮುಸ್ಲಿಂರಿಗೆ ನೀಡುತ್ತಿರುವ ಮೀಸಲಾತಿಯನ್ನು ಬೇರೆಯವರಿಗೆ ನೀಡುವುದಾಗಿ ಶಾ ಹೇಳಿದ್ದಾರೆ. ಬೇರೆಯವರಿಗೆ ಮೀಸಲಾತಿ ಕೊಡಲು, ಹೆಚ್ಚು ಮಾಡಲು ತಮ್ಮದೇನೂ ತಕಾರರು ಇಲ್ಲ. ಆದರೆ ಮುಸ್ಲಿಂರ ಮೀಸಲಾತಿ ಕಿತ್ತುಕೊಳ್ಳುವುದನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ನಿಮ್ಮ ಮನೆಯ ತಾಳಿ ಕಿತ್ತು ಮುಸ್ಲಿಂರಿಗೆ ಕೊಡುತ್ತಾರೆ’ ಎಂದು ಹೇಳಿದ್ದಾರೆ. ಇದು ಮನಸ್ಸಿಗೆ ತೀವ್ರ ನೋವು ತಂದಿದೆ. ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಅಭಿವೃದ್ಧಿ ಫಲ ದೇಶದ ಎಲ್ಲರಿಗೂ ಸಿಗಬೇಕು’ ಎಂದು ಹೇಳಿದ್ದರು. ಆದರೆ ಈಗ ಮೋದಿ ಕೆಲವರಿಗೆ ಮಾತ್ರ ಸಿಗಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ ಮೋದಿ ಮನಃಸ್ಥಿತಿ ಎಂತಹುದು ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.