ಬೆಂಗಳೂರು: ಬೆಂಗಳೂರು ನಗರದ ನಾಲ್ಕು ಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸರ್ಕಾಕರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಹೇಳಿದರು.
ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಶಿವಕುಮಾರ ಸ್ವಾಮೀಜಿ ಸಾರ್ವಜನಿಕರ ಸೇವಾ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕ್ಟೋರಿಯಾ, ಜಯದೇವ ಆಸ್ಪತ್ರೆ ಮಾದರಿಯಲ್ಲಿ ನಗರದ ನಾಲ್ಕು ಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗದ ಹುಡುಕಾಟ ನಡೆದಿದೆ ಎಂದು ಹೇಳಿದರು.
ಇಂದು ₹7 ಕೋಟಿ ಮೊತ್ತದ ಕಾಮಗಾರಿಯನ್ನು ಉದ್ಘಾಟಿಸಿದ್ದೇವೆ. ಶ್ರೀಗಳ ಹೆಸರಿನಲ್ಲಿ ನಿರ್ಮಿಸಿರುವ ಸುಸಜ್ಜಿತ ಸೇವಾ ಸಂಕಿರ್ಣ ಮಾಡಿರುವುದು ಶ್ಲಾಘನೀಯ. ಈ ಸಂಕೀರ್ಣದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದರು.
ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಇದೇ ರೀತಿ ಉಳಿದ 198 ವಾರ್ಡ್‌ಗಳಲ್ಲೂ ಉದ್ಯಾನ, ಗ್ರಂಥಾಲಯ, ರಸ್ತೆ ಮೇಲ್ದರ್ಜೆಗೆ ಏರಿಸಬೇಕಿದೆ ಎಂದರು.
ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ನೋಂದಣಿಯಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರು ಸಾರ್ವಜನಿಕ ಸಾರಿಗೆ ಬಳಸುವುದರಿಂದ ಟ್ರಾಫಿಕ್ ಸಮಸ್ಯೆ ಕೂಡ ನಿವಾರಣೆಯಾಗಲಿದೆ. ಪಾರ್ಕಿಂಗ್ ಸಮಸ್ಯೆ ಕೂಡ ನಗರದಲ್ಲಿ ಮಿತಿಮೀರಿದೆ. ಹೀಗಾಗಿ ಸ್ಮಾರ್ಟ್ ಪಾರ್ಕಿಂಗ್ ತರಲು ಚಿಂತನೆ ನಡೆಸಿದ್ದೇವೆ ಎಂದರು
ಇನ್ನು, ನಗರಕ್ಕೆ ಕುಡಿಯುವ ನೀರು ತರಲು ಕಾವೇರಿ 5 ನೇ ಹಂತದ ಯೋಜನೆ ತರಲಾಗುತ್ತಿದೆ. ಆದರೆ ಇದೇ ಕೊನೆಯ ಹಂತವಾಗಿದೆ. ಹೀಗಾಗಿ ಬೇರೆ ಮಾರ್ಗಗಳಿಂದನೀರು ತರಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.