ADVERTISEMENT

ಎಸ್‌ಟಿಪಿ ದುರಂತ ಸ್ಥಳಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 6:01 IST
Last Updated 19 ಜೂನ್ 2019, 6:01 IST
ಜಿ.ಪರಮೇಶ್ವರ ಸಂಗ್ರಹ ಚಿತ್ರ
ಜಿ.ಪರಮೇಶ್ವರ ಸಂಗ್ರಹ ಚಿತ್ರ   

ಬೆಂಗಳೂರು: ಹೆಬ್ಬಾಳದ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ದುರಂತ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಹೆಬ್ಬಾಳದ ಎಸ್‌ಟಿಪಿ ದುರಂತದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳ ಪರಿಶೀಲನೆ‌ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಎಸ್‌ಟಿಪಿ ನಿರ್ಮಾಣದ ಹಂತದ ವೇಳೆ ಮೂರು ಜನ ಎಂಜಿನಿಯರ್‌ಗಳು ಮೃತಪಟ್ಟ ಘಟನೆ ಅತ್ಯಂತ ದುರದೃಷ್ಟಕರ. ಅವರ ಆತ್ಮಕ್ಕೆ ಶಾಂತಿ ದೊರೆಯಲಿದೆ. ಅವರ ಕುಟುಂಬ ವರ್ಗಕ್ಕೆ ಇಲಾಖೆಯಿಂದ ಪರಿಹಾರ ನೀಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಹೆಬ್ಬಾಳದಲ್ಲಿ ನಿರ್ಮಾಣವಾಗುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಎಲ್ಲ ರೀತಿಯ ನಿರ್ದೇಶನ ನೀಡಲಾಗಿತ್ತು. ಈ ಅವಧಿಯಲ್ಲಿ ಇಂಥ ಘಟನೆ ನಡೆದಿದ್ದು ಬೇಸರ ತರಿಸಿದೆ. ಈ ಘಟನೆಗೆ ಏನು ದೋಷವಾಗಿದೆ ಎಂಬುದು ತನಿಖೆಯಿಂದಲೇ ಸತ್ಯ ತಿಳಿಯಲು ಸಾಧ್ಯ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ ಹಾಗೂ ಕೇಂದ್ರದ ಇಲಾಖೆಯಿಂದಲೂ ತಾಂತ್ರಿಕ ದೋಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಇದರ ಜೊತೆಗೆ ಇಲಾಖೆಯಿಂದಲೂ ತನಿಖೆಗೆ ಸೂಚಿಸಲಾಗಿದೆ. ಆ ದಿನ ಯಾರೆಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಇದ್ದರು, ಯಾಕೆ ಮುಂಜಾಗೃತಿ ತೆಗೆದುಕೊಂಡಿಲ್ಲ, ಈ ಬೇಜವಾಬ್ದಾರಿಗೆ ಯಾರು ಹೊಣೆ ಇತ್ಯಾದಿ ಎಲ್ಲ ಅಂಶಗಳನ್ನೂ ಇಲಾಖೆ ತನಿಖೆ ನಡೆಸಲಿದೆ ಎಂದು ಪರಮೇಶ್ವರ ಹೇಳಿದರು.

ಇಂಥ ಘಟನೆ ಎಂದೂ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದರು.

ಬೆಳ್ಳಂದೂರು ಬಳಿ ಇರುವ ಎಸ್‌ಟಿಪಿಯಿಂದ ನೀರು ಶುದ್ದೀಕರಿಸಲಾಗಿತ್ತಿದೆ.‌ ಅದೇ ಮಾದರಿಯಲ್ಲಿ ಹೆಬ್ಬಾಳದಲ್ಲಿಯೂ ಮಾಡಲಾಗುತ್ತಿದ್ದು, ಇದಕ್ಕಾಗಿ ₹365 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸಾಕಷ್ಟು ಕಾಮಗಾರಿ ಪೂರ್ಣಗೊಳ್ಳುವುದು ಬಾಕಿ ಇದ್ದು, ಎಲ್ಲವನ್ನೂ ಎಚ್ಚರಿಕೆಯಿಂದ ಮಾಡಲು ಸೂಚಿಸಿರುವುದಾಗಿ ಪರಮೇಶ್ವರ ಹೇಳಿದರು.

ಅಧಿಕಾರಿಗಳಿಗೆ ತರಾಟೆ: ಘಟನೆಯಲ್ಲಿ ಮೂರು ಜನ ಮೃತಪಟ್ಟಿರುವುದರಿಂದ ಬೇಸರಗೊಂಡ ಉಪಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

‘ಈ ಘಟನೆಗೆ ಯಾರು ಹೊಣೆ? ಚೀಫ್‌ ಎಂಜಿನಿಯರ್‌ ನೀವು ಆ ಸ್ಥಳದಲ್ಲಿ ಇದ್ದಿರಾ? ಚೀಫ್‌ ಎಂಜಿನಿಯರ್‌ ಆದವರು ಮುಂದಾಳತ್ವ ವಹಿಸಿ ಕೆಲಸ ಮಾಡಿಸಬೇಕು. ನೀವೆ ಹೋಗಿಲ್ಲ ಅಂದರೆ ಹೇಗೆ? ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತೀರಾ? ಇಲಾಖೆಗೆ ಒಳ್ಳೆಯ ಹೆಸರು ಇದೆ. ಇಂಥ ಘಟನೆಯಿಂದ ಮುಂದೆ ಕಾಮಗಾರಿಗೆ ಯಾರು ಬರುತ್ತಾರೆ? ಇಲಾಖೆ ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಕೆಟ್ಟ ಹೆಸರು ಇಲಾಖೆಗೆ ಬರುವುದಿಲ್ಲವೇ? ಈ ಘಟನೆಗೆ ಕಾರ ಯಾರೇ ಆಗಲಿ, ಕಠಿಣ ಕ್ರಮ ಎದುರಿಸಲೇಬೇಕು. ಇಲಾಖೆಯಲ್ಲಿ ಇಂಥ ಬೇಜವಾಬ್ದಾರಿಯನ್ನು ಎಂದೂ ಸಹಿಸಲ್ಲ ಎಂದು ಪರಮೇಶ್ವರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.