ಗದಗ: ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು, ನಿಧನದ ಹಿಂದಿನ ದಿನ ಅಂದರೆ ಅ.19ರಂದು ಸಂಜೆ, ಮಠದಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರವಚನ ನೀಡಿದ್ದರು. ‘ಸಾವು ಯಾರನ್ನೂ ಬಿಟ್ಟಿಲ್ಲ. ಸಾವಿಗೆ ಸದಾ ತಯಾರಾಗಿ ಇರಬೇಕು’ ಎಂದು ಭಕ್ತರನ್ನು ಎಚ್ಚರಿಸಿದ್ದರು. ಅವರ ಕೊನೆಯ ಸಂದೇಶ ಈಗ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಜನರು ಅದನ್ನು ಕೇಳಿ ಕಂಬನಿ ಮಿಡಿಯುತ್ತಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಗದುಗಿನ ಮಾರುತಿ ಪ್ರಕಾಶನದ ವತಿಯಿಂದ ಭಕ್ತರಿಗೆ ಪುಸ್ತಕ ಹಂಚಲಾಗಿತ್ತು. ವಿತರಣೆಗೆ ತಂದಿದ್ದ ಪುಸ್ತಕವನ್ನು ಕೈಗೆತ್ತಿಕೊಂಡಿದ್ದ ಸ್ವಾಮೀಜಿ, ಆ ಪುಸ್ತಕದಲ್ಲಿನ ಅಂಶಗಳ ಕುರಿತು ಸುದೀರ್ಘವಾಗಿ ಮಾತನಾಡಿದ್ದರು.
‘ಹಣ, ಸಮಯ, ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬಾರದು. ಧರ್ಮ, ನ್ಯಾಯ, ವಿನಯಕ್ಕೆ ಗೌರವ ಕೊಡಿ ಎಂದಿದ್ದರು. ಸಾವು ಯಾರನ್ನೂ ಬಿಡುವುದಿಲ್ಲ. ವಿಶ್ವೇಶ್ವರಯ್ಯನವರು 101 ವರ್ಷ ಬದುಕಿದ್ದರು. ಹೊಸಳ್ಳಿ ಬೂದೀಶ್ವರ ಶ್ರೀಗಳು, ಅಂಕಲಿ ಶ್ರೀಗಳು ಬಹಳ ವರ್ಷಗಳ ಕಾಲ ಬದುಕಿದ್ದರು. ಆದರೆ, ಕೊನೆಯಲ್ಲಿ ಸಾವು ಅವರನ್ನೂ ಕರೆದೊಯ್ಯಿತು. ಸಾವನ್ನು ನಾವು ಎದುರಿಸಬೇಕು. ಅದಕ್ಕೆ ಸದಾ ತಯಾರಾಗಿ ಇರಬೇಕು. ದುಃಖ ಬಂದರೆ ತುಟಿ ಕಚ್ಚಿ ನುಂಗಬೇಕು. ಸೋಲು ಬಂದರೆ ಹತಾಶರಾಗಬಾರದು. ಕೆಳಗೆ ಬಿದ್ದ ಚೆಂಡು ಪುಟಿದು ಮೇಲೆಳುವಂತೆ ಎದ್ದು ನಿಲ್ಲಬೇಕು. ಸತತ ಪ್ರಯತ್ನ ಪಡಬೇಕು. ಪುಸ್ತಕಗಳನ್ನು ಓದಬೇಕು’ ಎಂದಿದ್ದರು.
ವಿಜಯ ದಶಮಿಯ ದಿನದಂದು ಸೀಮೋಲ್ಲಂಘನ ಮಾಡಿ ಅಂದರೆ ಊರ ಗಡಿ ದಾಟಿ ಹೋಗಿ, ಗಡಿಯಾಚೆ ಇರುವ ಬನ್ನಿ ವೃಕ್ಷಕ್ಕೆ ಪೂಜೆ ಮಾಡಿ ಬರುತ್ತಾರೆ. ನಮ್ಮ ಬದುಕಿನಲ್ಲೂ ಈ ಸೀಮೋಲ್ಲಂಘನ ಆಗಬೇಕು. ಜಾತಿ, ವರ್ಗ, ಲಿಂಗ, ಪ್ರಾಂತ, ನಾಡಿನ ಸೀಮೆಯನ್ನು ದಾಟಬೇಕು ಎಂದು ಸ್ವಾಮೀಜಿ ಮಾರ್ಮಿಕವಾಗಿ ಹೇಳಿದ್ದರು.
ಶಬರಿಮಲೆ ಘಟನೆ ವಿದ್ಯೆಯ ಅಣಕ...
‘ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ತೀರ್ಪು ಅವಕಾಶ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಿಂಗಸಮಾನತೆ ಇದೆ. ಲಿಂಗಅಸಮಾನತೆ ಸಂವಿಧಾನ ವಿರೋಧಿ. ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ತಡೆದವರು ಭಕ್ತರೇ. ಆದರೆ, ಅವರು ನಡೆದುಕೊಂಡ ರೀತಿ ಭಕ್ತರ ರೀತಿಯಲ್ಲಿ ಇರಲಿಲ್ಲ. ‘ಪರಂಪರೆ’ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲೆ ಆಕ್ರಮಣ ನಡೆಸಿದರು. ಹಿಂದೆ ಸತಿ ಸಹಗಮನ ಪದ್ಧತಿ ಇತ್ತು. ಇದೂ ಕೂಡ ಪರಂಪರೆಯ ಭಾಗವಾಗಿತ್ತು. ಆದರೆ, ದೇಶ ಕಾಲಮಾನಕ್ಕೆ ಹೊರತಾದ ಯಾವುದೇ ಆಚರಣೆಗಳು ನೆಲೆ ನಿಲ್ಲುವುದಿಲ್ಲ’ ಎಂದು ಸ್ವಾಮೀಜಿ ಹೇಳಿದ್ದರು.
‘ವಿಚಿತ್ರವೆಂದರೆ, ಕೇರಳ ನಮ್ಮ ದೇಶದಲ್ಲೇ ಸಾಕ್ಷರತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಅಂತಹ ಸಾಕ್ಷರತೆಯ ನಾಡಿನಲ್ಲೇ ಜನರು ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇಂತಹ ಅಮಾನುಷ ಕೃತ್ಯಕ್ಕೆ ಅಲ್ಲಿನ ಜನ ಬೆಂಬಲ ಕೊಟ್ಟಿರುವುದು ನಿಜಕ್ಕೂ ವಿದ್ಯೆಯ ಅಣಕ. ನಮ್ಮ ಜನಗಳ ಆಷಾಢಭೂತಿತನಕ್ಕೆ ಇದು ಸಾಕ್ಷಿ. ಈ ಘಟನೆ ಇತಿಹಾಸದ ಕಪ್ಪು ಚುಕ್ಕೆ. ಹೀಗೆ ನಡೆದಾಗ ಅದನ್ನು ಪ್ರತಿಭಟಿಸಬೇಕು’ ಎಂದು ಸ್ವಾಮೀಜಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.