ADVERTISEMENT

ಸಿಂದಗಿ ಮಠದ ಜೊತೆ ‘ರಕ್ತ ಸಂಬಂಧ’, ಹಾವೇರಿಯಲ್ಲೂ ಅನ್ನ, ಅಕ್ಷರ ದಾಸೋಹ ನಿರಂತರ

ಹರ್ಷವರ್ಧನ ಪಿ.ಆರ್.
Published 20 ಅಕ್ಟೋಬರ್ 2018, 13:02 IST
Last Updated 20 ಅಕ್ಟೋಬರ್ 2018, 13:02 IST
   

ಹಾವೇರಿ:ಬಸವ ತತ್ವದ ಪ್ರಖರ ಪ್ರತಿಪಾದಕರಾಗಿದ್ದ ಗದಗದ ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ, ‘ಶ್ರೀ ಗುರು ಶಾಂತವೀರೇಶ್ವರ ಸಂಸ್ಕೃತ ಪಾಠ ಶಾಲೆ’ಯನ್ನು ಹೊಂದಿದ ಇಲ್ಲಿನ ಸಿಂದಗಿ ಮಠದ ಆಡಳಿತವನ್ನೂ ನಡೆಸುತ್ತಿದ್ದರು.

‘ತೋಂಟದ ಸ್ವಾಮೀಜಿ ಇಲ್ಲಿನ ಸಿಂದಗಿ ಮಠದ ಶಾಂತವೀರ ಪಟ್ಟಾಧ್ಯಕ್ಷರ ಉತ್ತರಾಧಿಕಾರಿಯಾಗಿದ್ದರು. ಆದರೆ, ಅವರ ಅಧ್ಯಾತ್ಮ ಸಾಧನೆ, ಪಾಂಡಿತ್ಯವನ್ನು ಕಂಡ ಗದಗದ ಭಕ್ತರ ಬೇಡಿಕೆಯಂತೆ ಅಲ್ಲಿನ ಮಠದ ಪೀಠಾಧಿಪತಿ ಮಾಡಲಾಗಿತ್ತು. ಪಟ್ಟಾಧ್ಯಕ್ಷರು ಲಿಂಗೈಕ್ಯರಾದ ಕೆಲ ವರ್ಷಗಳ ಬಳಿಕ ಇಲ್ಲಿನ ಆಡಳಿತವನ್ನೂ ವಹಿಸಿಕೊಂಡರು’ ಎಂದು ಸಿಂದಗಿ ಮಠದ ಆಡಳಿತಾಧಿಕಾರಿ ಶಿವಬಸಯ್ಯ ಆರಾಧ್ಯಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಂಧಗಿ ಮಠದ ಜೊತೆ ಅಧ್ಯಾತ್ಮ ಮಾತ್ರವಲ್ಲ, ರಕ್ತ ಸಂಬಂಧವೂ ಇದೆ. ಸ್ವಾಮೀಜಿಯವರು ಇಲ್ಲಿನ ಪಟ್ಟಾಧ್ಯಕ್ಷರ ಪೂರ್ವಾಶ್ರಮದ ಕಿರಿಯ ಸಹೋದರನ ಪುತ್ರ. ಅಲ್ಲದೇ, ಇಲ್ಲಿನ ವಿರಕ್ತ, ಗುರು, ಪಟ್ಟಾಧ್ಯಕ್ಷ ಸೇರಿದಂತೆ ಎಲ್ಲ ಪರಂಪರೆ ಜಾತಿ, ಧರ್ಮಗಳ ಗುರುಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದು ಅವರು ವಿವರಿಸಿದರು.

ADVERTISEMENT

‘ಇಲ್ಲಿನ ಸಂಸ್ಕೃತ ಪಾಠ ಶಾಲೆಯಲ್ಲಿ ವೇದ–ಸಂಸ್ಕೃತದ ಜೊತೆ ‘ಬಸವ ತತ್ವ’ದ ಬೋಧನೆಯನ್ನೂ ಪರಿಚಯಿಸಿದ್ದರು. ದಾಸೋಹ, ಪಾಠಶಾಲೆ ಸೇರಿದಂತೆ ಮಠವನ್ನು ಅಭಿವೃದ್ಧಿ ಪಡಿಸಿದರು’ ಎಂದರು.

ಇಲ್ಲಿನ ಸಂಸ್ಕೃತ ಪಾಠಶಾಲೆಯ ಸಾಧಕರಿಗೆ (ವಟು) ‘ಶರಣ ಸಂಸ್ಕೃತಿ ನಿಜಾಚರಣೆ’ ಕುರಿತು ಸೆಪ್ಟೆಂಬರ್ 24ರಿಂದ 27ರ ತನಕ ಕಮ್ಮಟವನ್ನು ಹಮ್ಮಿಕೊಂಡಿದ್ದರು. ಮೊದಲ ದಿನ ಸ್ವತಃ ಬಂದು ವಟುಗಳಿಗೆ ಬೋಧನೆ ಮಾಡಿದ್ದರು.

‘ಯಾರು ಬಸವ ತತ್ವವನ್ನು ಕೇಳುತ್ತಾರೋ, ಅವರಿಗೆ ಇಲ್ಲ ಎನ್ನಬೇಡಿ. ನಿಜಾಚರಣೆ ಅನುಸರಿಸಿ’ ಎನ್ನುವ ಮೂಲಕ ವಟುಗಳಿಗೆ ಆಶೀರ್ವದಿಸಿದ್ದರು’ ಎಂದು ಬಸವ ಕೇಂದ್ರದ ಅಧ್ಯಕ್ಷ ಉಳಿವೆಪ್ಪ ಪಂಪಣ್ಣನವರ ಸ್ಮರಿಸುತ್ತಾರೆ. ಅದು, ಸಿಂದಗಿ ಮಠಕ್ಕೆ ಸ್ವಾಮೀಜಿ ಕೊನೆಯ ಭೇಟಿಯಾಗಿತ್ತು.

ಮಾನವ ಧರ್ಮ

‘ಸ್ವಾಮೀಜಿಯ ಕೆಲವು ನಿಲುವುಗಳಲ್ಲಿ ನಮಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ನಮ್ಮಂತವರೂ ಕಷ್ಟದಲ್ಲಿದ್ದಾಗ ನೆರವಿನ ಹಸ್ತ ಚಾಚಿದ ಶ್ರೇಷ್ಠ ಗುರುಗಳು. ಅವರು, ‘ಮಾನವ ಪರಂಪರೆಗೆ ಆದರ್ಶ’ ಎನ್ನುವಾಗ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರ ಕಣ್ಣಾಲಿ ತುಂಬಿ ಬಂದಿತ್ತು.

‘ರಾಜಕುಮಾರ್‌ಗೆ ಲಿಂಗದೀಕ್ಷೆ’

ಪುಟ್ಟರಾಜ ಗವಾಯಿಗಳ ಸಲಹೆಯಂತೆ ಇಲ್ಲಿನ ಸಿಂದಗಿ ಮಠದ ಶಾಂತವೀರ ಪಟ್ಟಾಧ್ಯಕ್ಷರು ಚಿತ್ರನಟ ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಪುನೀತ್‌ ರಾಜಕುಮಾರ್‌ ಮತ್ತು ಕುಟುಂಬದವರಿಗೆ ಚೆನ್ನೈನಲ್ಲಿ ಲಿಂಗದೀಕ್ಷೆ ನೀಡಿದ್ದರು. ತೋಂಟದ ಸ್ವಾಮೀಜಿಯವರು ಪಟ್ಟಾಧ್ಯಕ್ಷರ ಉತ್ತರಾಧಿಕಾರಿಯಾಗಿದ್ದರು.

‘ಧರ್ಮ ಆಹಾರದಲ್ಲಲ್ಲ, ಅಂತರಂಗದಲ್ಲಿದೆ’

‘ಧರ್ಮ’ ಅಂತರಂಗದಲ್ಲಿ ಇರಬೇಕು. ಆಹಾರ ಅಥವಾ ಡಾಂಭಿಕ ಆಚರಣೆಯಲ್ಲಿ ಅಲ್ಲ ಎಂದು ಗದಗದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಈಚೆಗೆ ಇಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡುತ್ತಾ ತಿಳಿಸಿದ್ದರು.

‘ಹಸಿದವನ ಮುಂದೆ ಬೋಧನೆ ಬೇಕಾಗಿಲ್ಲ. ಅವನಿಗೆ ಆಹಾರ ನೀಡುವುದೇ ಧರ್ಮ. ಅಂತೆಯೇ, ಹಲವು ಆವಿಷ್ಕಾರಗಳನ್ನು ಮಾಡಿದ ಪಾಶ್ಚಾತ್ಯ ‘ವಿಜ್ಞಾನಿ’ಗಳು ಮಾಂಸಾಹಾರಿಗಳಾಗಿದ್ದರು. ನಾನು, ಈಚೆಗೆ ಬಸವತತ್ವ ಪ್ರಚಾರಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾಗ ಭೇಟಿಯಾಗಿದ್ದ ಹಲವಾರು ಗಣ್ಯರ ಹಾಗೂ ‘ನೆಮ್ಮದಿ’ ಹೊಂದಿದ ಸ್ವಿಜರ್‌ಲ್ಯಾಂಡ್ ಮತ್ತಿತರ ದೇಶಗಳಲ್ಲಿನ ಪ್ರಮುಖ ಆಹಾರ ಗೊತ್ತಿದೆಯಲ್ಲಾ, ಇಸ್ರೇಲ್ ಜನರ ಆಹಾವೂ ತಿಳಿದಿದೆಯಲ್ಲ’ ಎಂದು ವಿವರಿಸಿದ್ದರು.

‘ಆಹಾರ ಪದ್ಧತಿ ಬಗ್ಗೆ ಬುದ್ಧನೂ ಭೇದಭಾವ ಪ್ರತಿಪಾದಿಸಲಿಲ್ಲ. ಆದರೆ, ಇಂತಹ ಭೇದಭಾವಗಳಿಂದಲೇ ದೇಶ ಹಿಂದುಳಿದಿದೆ. ಹಾಗಂದ ಮಾತ್ರಕ್ಕೆ ನಾನು ಎಲ್ಲೆವನ್ನೂ ತಿನ್ನಬೇಕು ಎಂದೇನಿಲ್ಲ. ನನ್ನ ಆಹಾರವು ನನ್ನ ಆಯ್ಕೆಯಾಗಿದೆ’ ಎಂದರು.

‘ದಟ್ಟ ಕಾನನದಲ್ಲಿ, ಮರಳುಗಾಡಿನಲ್ಲಿ, ನೀರ ನಡುವಿನಲ್ಲಿ ಹೇಗೆ ಬದುಕಿ ಬರಬಹುದು ಎಂದು ನೀವು ‘ಡಿಸ್ಕವರಿ’ ಚಾನೆಲ್ ನೋಡಬೇಕು. ನಾನೂ ನೋಡುತ್ತೇನೆ. ಸಾಧನೆ ಮಾಡಲು ನಮ್ಮ ಅಂತರಂಗ ಶುದ್ಧವಾಗಿರಬೇಕು’ ಎಂದಿದ್ದರು.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.