ADVERTISEMENT

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ: ಜಾರ್ಜ್, ಮೊಹಂತಿ, ಪ್ರಸಾದ್‌ಗೆ ಸಮನ್ಸ್

ಸಿಬಿಐ ಸಲ್ಲಿಸಿದ್ದ ಬಿ ವರದಿ ತಿರಸ್ಕರಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 19:01 IST
Last Updated 29 ಆಗಸ್ಟ್ 2020, 19:01 IST
ಗಣಪತಿ
ಗಣಪತಿ   

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ಸಿಬಿಐ ಸಲ್ಲಿಸಿದ್ದ ಬಿ–ವರದಿ ತಿರಸ್ಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮರು ವಿಚಾರಣೆಗೆ ಮುಂದಾಗಿದೆ. ಶಾಸಕ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್‌ ಮೊಹಂತಿ ಮತ್ತು ಎ.ಎಂ. ಪ್ರಸಾದ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ.ಎನ್. ಇನಾವಾಲಿ ಈ ಆದೇಶ ಹೊರಡಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವುದು ‌ಐಪಿಸಿ ಸೆಕ್ಷನ್ 306ರ ಪ್ರಕಾರ ಶಿಕ್ಷಾರ್ಹ ಅಪರಾಧ.ಮೂವರು ಆರೋಪಿಗಳ ವಿರುದ್ಧ ಇದೇ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.

‘ಗಣಪತಿ ಅವರ ಹೆಂಡತಿಯೊಂದಿಗಿನ ಸಂಬಂಧ ಹದಗೆಟ್ಟಿತ್ತು ಎಂಬುದಕ್ಕೆ ಕಿರಿಯ ಸಹೋದರ ಎಂ.ಕೆ.ತಮಯ್ಯ ಅವರ ಹೇಳಿಕೆ ಹೊರತುಪಡಿಸಿ ಬೇರೆ ಯಾವ ಪುರಾವೆಗಳೂ ಇಲ್ಲ. ಇತರ ಎಲ್ಲಾ ಹೇಳಿಕೆಗಳೂ ಈ ಮೂವರು ಆರೋಪಿಗಳ ವಿರುದ್ಧವೇ ಇವೆ. ಗಣಪತಿ ಅವರು ಮಾನಸಿಕವಾಗಿ ಖಿನ್ನರಾಗಿದ್ದರು ಎಂಬುದಾದರೆ ಸಾವಿಗೂ ಮುನ್ನ ಅವರು ಚಿಕಿತ್ಸೆ ಪಡೆದಿರುವ ದಾಖಲೆಗಳನ್ನು ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

‘ಉಡುಪಿಯಲ್ಲಿ ಓದುತ್ತಿದ್ದ ಮಗ ಓಡಾಡಲು ವಾಹನ ವ್ಯವಸ್ಥೆಯನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ಎ.ಎಂ.ಪ್ರಸಾದ್ ಅವರು ಗಣಪತಿ ವಿರುದ್ಧ ಅಸಮಾಧಾನಗೊಂಡಿದ್ದರು. ಯಶವಂತಪುರದಲ್ಲಿನ ಎನ್‌ಕೌಂಟರ್ ವಿಷಯದಲ್ಲಿ ಪ್ರಣಬ್ ಮೊಹಂತಿ ಅವರೂ ಕಿರುಕುಳ ನೀಡುತ್ತಿದ್ದರು’ ಎಂದು ಗಣಪತಿ ಸಂಬಂಧಿಕರು ದೂರಿದ್ದಾರೆ.

ಮಂಗಳೂರಿನಲ್ಲಿ ಡಿವೈಎಸ್‌ಪಿ ಆಗಿದ್ದ ಗಣಪತಿ 2016ರ ಜುಲೈ 7ರಂದು ಮಡಿಕೇರಿಯ ಲಾಡ್ಜ್‌ವೊಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ‘ಜಾರ್ಜ್, ಮೊಹಂತಿ, ಪ್ರಸಾದ್ ಕಿರುಕುಳದಿಂದ ಮನನೊಂದಿದ್ದೇನೆ’ ಎಂದು ಹೇಳಿದ್ದರು.

ಆತ್ಮಹತ್ಯೆ ಪ್ರಕರಣವನ್ನು ಆರಂಭದಲ್ಲಿ ಮಡಿಕೇರಿ ಪೊಲೀಸರು ದಾಖಲಿಸಿದ್ದರು. ಬಳಿಕ ಸಿಐಡಿ ತನಿಖೆಗೆ ವಹಿಸಲಾಯಿತು. ಸಿಐಡಿ ಬಿ ವರದಿ ಸಲ್ಲಿಸಿದ್ದನ್ನು ಪ್ರಶ್ನಿಸಿ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ 2017ರ ಸೆಪ್ಟೆಂಬರ್‌ನಲ್ಲಿ ಸಿಬಿಐಗೆ ಆದೇಶಿಸಿತ್ತು. 2019ರ ಅಕ್ಟೋಬರ್ 30ರಂದು ಸಿಬಿಐ ಕೂಡ ಬಿ ವರದಿ ಸಲ್ಲಿಸಿತ್ತು.

ಜಾರ್ಜ್‌ ಕಿರುಕುಳ: ಒಪ್ಪಿದ ನ್ಯಾಯಾಲಯ

‘2008ರಲ್ಲಿ ನಡೆದ ಚರ್ಚ್‌ ದಾಳಿ ನಂತರ ಗಣಪತಿ ಅವರಿಗೆ ಆರಂಭವಾದ ಕಿರುಕುಳ ಸಾವಿನ ತನಕ ಮುಂದುವರಿಯಿತು’ಎಂದು ದೂರುದಾರರು ಮಂಡಿಸಿದ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ.

‘2013ರಲ್ಲಿ ಜಾರ್ಜ್ ಅವರು ಗೃಹ ಸಚಿವರಾದ ನಂತರ ಮಂಗಳೂರಿನ ಚರ್ಚ್‌ಗೆ ಭೇಟಿ ನೀಡಿದ್ದರು. ನಂತರ ಕಿರುಕುಳ ಹೆಚ್ಚಾಯಿತು’ ಎಂಬ ಹೇಳಿಕೆಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ‘ಇದನ್ನು ಗಮನಿಸಿದರೆ ಒಂದನೇ ಆರೋಪಿ (ಜಾರ್ಜ್) ಅವರಿಂದ ಗಣಪತಿ ಕಿರುಕುಳ ಅನುಭವಿಸಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.