ಕಲಬುರಗಿ: ‘ಮೀಸಲಾತಿಯ ಕೊಡುಗೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಮಹಾತ್ಮಾ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರು ಮೀಸಲಾತಿಯ ವಿರೋಧಿಗಳಾಗಿದ್ದರು’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ್ಯೋತಿ ಬಾ ಫುಲೆ, ಡಾ.ಬಿ.ಆರ್. ಅಂಬೇಡ್ಕರ್, ಪೆರಿಯಾರ್, ಕೃಷ್ಣರಾಜ ಒಡೆಯರ್ ಅಂತಹವರು ಮಾತ್ರ ಮೀಸಲಾತಿಗೆ ನ್ಯಾಯ ಒದಗಿಸಿದರು. ಆದರೆ, ಬಿಜೆಪಿ ಮೀಸಲಾತಿಯನ್ನು ಆರ್ಥಿಕತೆಯ ಆಧಾರದ ಮೇಲೆ ಹಂಚಿಕೆ ಮಾಡಿದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ನುಡಿದಂತೆ ನಡೆಯುವ ಸರ್ಕಾರವೇ ಆಗಿದ್ದರೆ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಿ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ, ಸರೋಜಿನಿ ಮಹಿಷಿ ವರದಿಯ ಅಂಶಗಳನ್ನು ಅನುಷ್ಠಾನಕ್ಕೆ ತರಲಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಹಿಂದುಳಿದ ವರ್ಗಳಿಗೂ ಒಳಮೀಸಲಾತಿ ಕೊಡಲಿ’ ಎಂದು ತಾಕೀತು ಮಾಡಿದರು.
‘ರಾಜ್ಯ ಸರ್ಕಾರವು ಬಡವರ ಬಗೆಗಿನ ಕಾಳಜಿಯಿಂದ ಗ್ಯಾರಂಟಿಯಂತಹ ಕೆಲವು ಯೋಜನೆಗಳನ್ನು ಜಾರಿ ಮಾಡಿ ಸ್ವಲ್ಪ ಪ್ರಮಾಣದ ಉತ್ತಮ ಕೆಲಸ ಮಾಡಿದೆ. ಆದರೆ, ಕೆಲವು ಸಚಿವರು ಇದೊಂದು ಕ್ರಾಂತಿಕಾರಕ ಹೆಜ್ಜೆ ಎನ್ನುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.
‘ನಿಜವಾಗಲು ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಶಿಕ್ಷಣ ಮತ್ತು ಆರೋಗ್ಯವನ್ನು ರಾಷ್ಟ್ರೀಕರಣಗೊಳಿಸಲಿ. ಉಳ್ಳ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ, ಇಲ್ಲದವರಿಗೆ ಉಚಿತ ಸೌಲಭ್ಯ ನೀಡಲಿ. ಭೂ ಸುಧಾರಣೆ ಕಾಯ್ದೆಯನ್ನು ಮತ್ತೊಮ್ಮೆ ಅನುಷ್ಠಾನಗೊಳಿಸಲಿ. ಬಂಡವಾಳ ಶಾಹಿಗಳಿಗೆ ಬೆಂಗಳೂರಿನ ಸುತ್ತ ಕೃಷಿ ಜಮೀನು ನೀಡುವ ಬದಲು ದೂರದ ಜಿಲ್ಲೆಗಳಲ್ಲಿ ಪಾಳು ಬಿದ್ದಿರುವ ಜಾಗವನ್ನು ಖಾಸಗಿ ಕಂಪನಿಗಳಿಗೆ ಕೊಟ್ಟು, ಆ ಜಿಲ್ಲೆಗಳನ್ನು ಅಭಿವೃದ್ಧಿಪಡಿಲಿ’ ಎಂದು ಹೇಳಿದರು.
‘ಕಾರ್ಪೋರೆಟ್ ಕಂಪೆನಿಗಳ ಆಸ್ಪತ್ರೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಅದರಿಂದ ಬಂದ ಹಣದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುನ್ನತ ಚಿಕಿತ್ಸೆ ಸಿಗುವಂತೆ ಮಾಡಬೇಕು’ ಎಂದರು.
‘ಬಡವರಿಗೆ ದುಡ್ಡು, ಪಡಿತರ ಜತೆಗೆ ಉಚಿತ ಶಿಕ್ಷಣ, ಆರೋಗ್ಯ, ಘನತೆಯ ಬದುಕು, ಭೂಮಿ ಸಿಗಬೇಕು. ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಬದಲು ನಮ್ಮ ರಾಜ್ಯದ ರೈತರಿಗೆ ಭತ್ತ ಬೆಳೆಯಲು ಉತ್ತೇಜನ ಕೊಟ್ಟು, ಅವರಿಂದಲೇ ಖರೀದಿಸುವತ್ತ ಯೋಚನೆ ಮಾಡಬೇಕಿದೆ’ ಎಂದರು.
‘ಧಾರ್ಮಿಕ ಗಲಭೆಗೆ ಕಾರಣವಾಗುತ್ತಿದ್ದ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆದಿರುವುದು ಒಳ್ಳೆಯದ್ದು. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದು ಒಬ್ಬರ ಆಹಾರ ಸಂಸ್ಕೃತಿಯನ್ನು ರಕ್ಷಿಸಿದಂತೆ ಆಗಿದೆ’ ಎಂದು ಅವರು ಹೇಳಿದರು.
‘ರಾಜ್ಯ ಸರ್ಕಾರವು ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಿ ಅವರ ಮಕ್ಕಳಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ಕನಿಷ್ಠ ಮೊತ್ತದ ಮಾಸಾಶನವನ್ನು ₹ 5,000ಕ್ಕೆ ಹೆಚ್ಚಿಸುವಂತೆಯೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ ಮಾಡಲಾಗುವುದು’ ಎಂದು ಚೇತನ್ ಅಹಿಂಸಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.