ಬೆಂಗಳೂರು: ಪ್ರತಿ ತಾಲ್ಲೂಕಿನಲ್ಲಿ ಆಡಳಿತ ಮತ್ತು ಆರ್ಥಿಕ ಮಾನದಂಡಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ತಲಾ ಒಂದು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಗಾಂಧಿ ಜಯಂತಿ ದಿನ (ಅ.2) ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ನೀಡುವ ಪರಿಪಾಠವನ್ನು ರಾಜ್ಯ ಸರ್ಕಾರ ಮರೆತೇಬಿಟ್ಟಿದೆ ಎಂಬ ದೂರು ಕೇಳಿ ಬಂದಿದೆ.
ಕಳೆದ ಎರಡು (2019–20, 2020–21) ಸಾಲಿನಲ್ಲಿ ಈ ಪ್ರಶಸ್ತಿಗೆ ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಆಯ್ಕೆ ಮಾಡಿದ್ದರೂ ಕೋವಿಡ್ ಕಾರಣ ಪುರಸ್ಕಾರ ನೀಡಿಲ್ಲ. ಮತ್ತೊಂದು ಗಾಂಧಿ ಜಯಂತಿ ದಿನ ಸಮೀಪಿಸಿದರೂ ಪ್ರಸಕ್ತ ವರ್ಷದ ಸಾಲಿನ ಪ್ರಶಸ್ತಿಗೆ ಗ್ರಾಮ ಪಂಚಾಯಿತಿಗಳ ಆಯ್ಕೆ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ.
ವಿಧಾನ ಪರಿಷತ್ ಸದಸ್ಯರೊಬ್ಬರ ಪ್ರಶ್ನೆಗೆ 2021ರ ಡಿ. 24 ರಂದು ಉತ್ತರಿಸಿದ್ದ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ, ಈ ಹಿಂದಿನ ಎರಡು ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡಲಾಗುವುದು ಎಂದಿದ್ದರು. ಆದರೆ, ಎಂಟು ತಿಂಗಳು ಕಳೆದರೂ ಪ್ರಶಸ್ತಿ ವಿತರಿಸಿಲ್ಲ.
ಗ್ರಾಮ ಪಂಚಾಯಿತಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರರ್ದಶಕತೆ, ಉತ್ತರದಾಯಿತ್ವ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ತ್ವರಿತಗತಿಯನ್ನು ಪ್ರೋತ್ಸಾ ಹಿಸುವ ಉದ್ದೇಶದಿಂದ 2023–14 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರು ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಜಾರಿಗೆ ತಂದಿದ್ದರು. ಹಲವು ಆರ್ಥಿಕ ಮತ್ತು ಆಡಳಿತ ಮಾನದಂದಡಗಳ ಮೇಲೆ ಗ್ರಾಮ ಪಂಚಾಯಿತಿಗಳು ಸಾಧಿಸುವ ಶೇ 90 ರಿಂದ ಶೇ 95 ರಷ್ಟು ಸಾಧನೆಗಳನ್ನು ಮೌಲ್ಯಮಾಪನ ಮಾಡಿ, ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿಗೆ ಮೊದಲ ವರ್ಷ ₹ 2 ಲಕ್ಷ, ನಂತರದ ವರ್ಷಗಳಲ್ಲಿ ₹ 5 ಲಕ್ಷ ಪ್ರೋತ್ಸಾಹ ಧನದ ಜೊತೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
‘ಗ್ರಾಮ ಪಂಚಾಯಿತಿಗಳನ್ನು ಸದೃಢಗೊಳಿಸುವ ಮತ್ತು ಉತ್ತಮ ಆಡಳಿತವನ್ನು ಉತ್ತೇಜಿಸಲು ನೀಡುವ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಮುಂದುವರಿಸಬೇಕು. ಅಲ್ಲದೆ, ಪ್ರಶಸ್ತಿ ಮೊತ್ತವನ್ನು ₹ 10 ಲಕ್ಷಕ್ಕೆ ಏರಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮನವಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.