ಬೆಂಗಳೂರು: ‘ಏಳು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಬಾಕಿಯಿದ್ದು ಶೀಘ್ರವೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ನಗರದಲ್ಲಿ ಭಾನುವಾರ ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘23 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಜಾಗದ ಸಮಸ್ಯೆಯ ಕಾರಣಕ್ಕೆ ಕೆಲವು ಜಿಲ್ಲೆಗಳಲ್ಲಿ ಭವನ ನಿರ್ಮಾಣ ಕಾರ್ಯವು ನೆನಗುದಿಗೆ ಬಿದ್ದಿದೆ. ಸಮಸ್ಯೆ ಬಗೆಹರಿಸಲಾಗುವುದು’ ಎಂದರು.
‘ಖಾದಿ ಉದ್ಯಮ ಹಾಗೂ ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೆ ಹೊಸ ಯೋಜನೆ ಜಾರಿಗೆ ತಂದು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮೀಣ ಕೈಗಾರಿಕೆಗಳು ಬೆಳವಣಿಗೆಯಾದರೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಹೇಳಿದರು.
‘ಮೋಹನದಾಸ ಕರಮಚಂದ ಗಾಂಧಿಯಿಂದ ಮಹಾತ್ಮ ಆಗುವ ತನಕ ಗಾಂಧೀಜಿ ಅವರ ಪಯಣ ಅದ್ಭುತ. ಸದಾ ಪರಿವರ್ತನೆ, ಶುದ್ಧೀಕರಣಕ್ಕೆ ತೆರೆದುಕೊಂಡಿದ್ದರು’ ಎಂದರು.
‘ಬೇರೆ ದೇಶಗಳು ಯುದ್ಧದಿಂದ ಸ್ವಾತಂತ್ರ್ಯ ಗಳಿಸಿದವು. ಮಹಾತ್ಮ ಗಾಂಧಿ ಅವರು ಅಹಿಂಸೆ ಹಾಗೂ ಸತ್ಯವನ್ನೇ ಹೋರಾಟದ ಅಸ್ತ್ರವಾಗಿ ಮಾಡಿಕೊಂಡಿದ್ದರು. ಗಾಂಧೀಜಿ ಅವರ ಚಿಂತನೆಗಳು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಪ್ರಸ್ತುತ’ ಎಂದರು.
ಶಾಸಕ ಎಚ್.ಕೆ.ಪಾಟೀಲ್ ಮಾತನಾಡಿ, ‘ಗಾಂಧೀಜಿ ಅವರದ್ದು ಚರ್ಚಿಸುವ ವ್ಯಕ್ತಿತ್ವ ಅಲ್ಲ; ಧ್ಯಾನಿಸುವ ವ್ಯಕ್ತಿತ್ವ. ಗ್ರಾಮೀಣಾಭಿವೃದ್ಧಿಯಿಂದ ರಾಷ್ಟ್ರ ಕಲ್ಯಾಣ ಸಾಧ್ಯ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ರಾಜ್ಯದಲ್ಲಿ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್ ಕಾಯ್ದೆ ಸಮಪರ್ಕವಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಕೋರಿದರು.
ಪ್ರಶಸ್ತಿ ಸ್ವೀಕರಿಸಿದ ಚಂದ್ರಶೇಖರ್ ಅವರು, ‘ಮಾನಸಿಕ ಕ್ಷೇತ್ರವು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಾನಸಿಕ ಒತ್ತಡದಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಶಾಲಾ, ಕಾಲೇಜು ಹಂತದಲ್ಲಿ ಮನಸ್ಸಿನ ಆರೋಗ್ಯದ ಪಠ್ಯ ಅಳವಡಿಸಬೇಕು’ ಎಂದು ಕೋರಿದರು. ಪ್ರಶಸ್ತಿಯೊಂದಿಗೆ ಸ್ವೀಕರಿಸಿದ ₹ 5 ಲಕ್ಷ ಮೊತ್ತದ ಚೆಕ್ ಅನ್ನು ನಿಮ್ಹಾನ್ಸ್ ಆಸ್ಪತ್ರೆ ಅಭಿವೃದ್ಧಿಗೆ ನೀಡುವುದಾಗಿ ಚಂದ್ರಶೇಖರ್ ಘೋಷಿಸಿದರು.
ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಎಂ.ಟಿ.ಬಿ.ನಾಗರಾಜ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೋ ಪಿ. ಕೃಷ್ಣ, ಶಾಸಕ ರಾಜೀವ್, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಎಚ್.ಹನುಮಂತಪ್ಪ, ಎಸ್.ಜಿ.ಸುಶೀಲಮ್ಮ, ಜೀರಿಗೆ ಲೋಕೇಶ್ ಹಾಜರಿದ್ದರು.
ಗಾಂಧಿ ಅನುಯಾಯಿ ಕಡಿದಾಳ್ ಮಂಜಪ್ಪ, ಹುತಾತ್ಮ ಮೈಲಾರ ಮಹಾದೇವ, ವಿದ್ಯಾರ್ಥಿಗಳು, ಕವನಗಳಲ್ಲಿ ಮೂಡಿದ ಗಾಂಧಿ ಎಂಬ ಕೃತಿ ಬಿಡುಗಡೆ ಮಾಡಲಾಯಿತು. ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿಗೆ ಜಯಶ್ರೀ ಟ್ರಸ್ಟ್‌ನ ಪ್ರಶಸ್ತಿ ನೀಡಲಾಯಿತು. ಮರಾಠ ರೆಜಿಮೆಂಟ್‌ನ ಹವಾಲ್ದಾರ್ ಎಂ.ಎನ್.ರವಿಕುಮಾರ್ ಹಾಗೂ ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.