ADVERTISEMENT

ಗಾಂಧೀಜಿಯೇ ಭಾರತದ ರಾಷ್ಟ್ರಪಿತ: ಬಂಜಗೆರೆ

ಪೇಜಾವರ ಮಠದ ವಿಶ್ವೇಶತೀರ್ಥರ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:17 IST
Last Updated 2 ಜೂನ್ 2019, 19:17 IST
‌ಬಂಜಗೆರೆ ಜಯಪ್ರಕಾಶ್‌
‌ಬಂಜಗೆರೆ ಜಯಪ್ರಕಾಶ್‌   

ಮೈಸೂರು: ‘ಸ್ವತಂತ್ರ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯೇ ಹೊರತು ಬೇರಾರೂ ಅಲ್ಲ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿದರು.

ಭಾನುವಾರ ನಡೆದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಈಚೆಗೆ ದೇಶದಲ್ಲಿ ಅಪಸವ್ಯಗಳೇ ಸಹ್ಯವಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವೇದವ್ಯಾಸರ ಬಗ್ಗೆ ಅಪಾರ ಗೌರವವಿದೆ. ಸೂತ ಕುಲದವರು, ಮಹಾಭಾರತ ಬರೆದವರು. ಇವರನ್ನು ಭಾರತದ ಪರಂಪರೆಯ ಪಿತಾಮಹ ಎನ್ನಿ. ಸಂಸ್ಕೃತಿ, ಕಾವ್ಯದ ಪಿತಾಮಹ ಎನ್ನಿ. ಆದರೆ, ರಾಷ್ಟ್ರಪಿತ ಎನ್ನುವುದು ಸಮಂಜಸವಲ್ಲ’ ಎಂದರು.

ADVERTISEMENT

‘ಭಾರತ ದೇಶ ಐದು ಸಹಸ್ರ ‌ವರ್ಷಗಳ ಇತಿಹಾಸ ಹೊಂದಿದ್ದರೂ; 1947ಕ್ಕೂ ಮುನ್ನ ಸಾರ್ವಭೌಮತ್ವ ಹೊಂದಿರಲಿಲ್ಲ. ಗಾಂಧೀಜಿಯೇ ನಮ್ಮ ರಾಷ್ಟ್ರಪಿತ. ಪೇಜಾವರ ಶ್ರೀಗಳ ಅಧ್ಯಾತ್ಮ ಚಿಂತನೆಗೆ ಗೌರವವಿದೆ. ಈ ಹೇಳಿಕೆ ಒಪ್ಪಲಾಗದು’ ಎಂದು ಹೇಳಿದರು.

‘ಮೌಲ್ಯಗಳು ಕಳೆದು ಹೋಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೊಟ್ಟೆಗಿಂತ ಕಿರೀಟದ ಗರಿಗೆ ಹೆಚ್ಚಿನ ಆದ್ಯತೆ ದೊರೆತಿದೆ. ಹೊಟ್ಟೆ, ಬಟ್ಟೆ, ಶಿಕ್ಷಣ ಆದ್ಯತೆ ಕಳೆದುಕೊಂಡಿವೆ. ಎಲ್ಲರಿಗೂ ಅನ್ನ, ಬಟ್ಟೆ, ಅಕ್ಷರ ಸಿಕ್ಕಿದೆಯಾ ಎಂಬುದಕ್ಕೆ ಇದುವರೆಗೂ ಖಾತ್ರಿ ಸಿಗದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.