ಬೆಂಗಳೂರು: ಸತ್ಯ, ಅಹಿಂಸೆ ಮತ್ತು ಶಾಂತಿಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ತಮ್ಮ ಗುರಿಯನ್ನು ಛಲ ಬಿಡದೇ ಸಾಧಿಸಿದ ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಆಧಾರಸ್ತಂಭ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗಾಂಧೀಜಿ ಹುತಾತ್ಮರಾದ ದಿನದ ಅಂಗವಾಗಿ ನಡೆದ ಸರ್ವೋದಯ ದಿನಾಚರಣೆ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, 'ಹೋರಾಟದ ಹಾದಿಯಲ್ಲಿ ಎಷ್ಟೇ ಸಂಕಷ್ಟಗಳು ಬಂದರೂ ಗಾಂಧೀಜಿಯವರು ಸತ್ಯ, ಅಹಿಂಸೆ ಮತ್ತು ಶಾಂತಿಯ ಸಿದ್ಧಾಂತವನ್ನು ಎಂದೂ ಬಿಟ್ಟುಕೊಡಲಿಲ್ಲ. ನೈತಿಕವಾಗಿ ದೊಡ್ಡ ಶಕ್ತಿ ಹೊಂದಿದ್ದ ನಾಯಕ ಅವರು' ಎಂದರು.
ಮಹಾತ್ಮ ಗಾಂಧೀಜಿಯವರ ಜೀವನ ಅತ್ಯಂತ ಪರಿಶುದ್ಧವಾಗಿತ್ತು ಮತ್ತು ಆದರ್ಶಪ್ರಾಯವಾದುದು. ಅವರ ಬದುಕು ಮತ್ತು ಸಿದ್ಧಾಂತಗಳೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಾಗಿವೆ. ಅವುಗಳ ಆಧಾರದಲ್ಲಿ ದೇಶದ ಪ್ರಜಾತಂತ್ರ ಗಟ್ಟಿಯಾಗಿ ನಿಂತಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರಕಿಲ್ಲ. ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗಿವೆ. ಈ ಅವಧಿಯಲ್ಲಿ ಸಾಕಷ್ಟು ಸಾಧನೆಗಳಾಗಿವೆ. ಆದರೆ, ಸಾಮಾನ್ಯ ಜನರ ಬದುಕಿನ ಸುಧಾರಣೆಯ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಆಗಬೇಕಿತ್ತು. ಕೆಲಸ ಮಾಡಲು ಸಾಧ್ಯವಿತ್ತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಾಗಿ 'ಆತ್ಮನಿರ್ಭರ ಭಾರತ' ಸೃಷ್ಟಿಸುವ ಗುರಿಯೊಂದಿಗೆ ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರುತ್ತಿದ್ದಾರೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರವೂ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.