ಎಷ್ಟೂ ಬಗೆದರೂ ಗಾಂಧಿ ಸಿಗುತ್ತಲೇ ಹೋಗುತ್ತಾರೆ. ಎಷ್ಟು ನೋಡಿದರೂ ಗಾಂಧಿಯನ್ನು ನೋಡುತ್ತಲೇ ಹೋಗಬೇಕು ಎನ್ನಿಸುತ್ತದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಫೆಡರೇಷನ್ ನ ಸಭಾಂಗಣದಲ್ಲಿ ಮೊಗೆದಷ್ಟೂ ಗಾಂಧಿ ಸಿಗುತ್ತಾರೆ. ಇಲ್ಲಿ ಅವರ ಬದುಕೇ ಅನಾವರಣಗೊಂಡಿದೆ.
ಬೊಚ್ಚು ಬಾಯಿಯ ಗಾಂಧಿ ಚಿತ್ರ ನೋಡಿದ್ದೇವೆ. ಮುಂಬದಿಯ ನಾಲ್ಕೈದು ಹಲ್ಲುಗಳಷ್ಟೇ ಇರುವ ಗಾಂಧಿಯ ನಗು ನೋಡಲು ಸಿಗುವುದು ಕಷ್ಟ. ಇಂಥ ಅನೇಕ ವಿಶೇಷ ಫೋಟೊಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇವುಗಳನ್ನು ಒಮ್ಮೆಗೇ ಸಂಗ್ರಹಿಸಿಲ್ಲ. ಆಗಾಗ ಸಂಗ್ರಹಿಸಲಾಗಿದೆ. ಸ್ವಾತಂತ್ರ್ಯ ಯೋಧ ದಿವಂಗತ ವೆಂಕಟೇಶ ಮಾಗಡಿ ಅವರು ಇದನ್ನೆಲ್ಲ ಮಾಡಿ ಹೋಗಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕಸ್ತೂರಬಾ ಅವರೊಂದಿಗೆ ನಿಂತಿರುವ ಗಾಂಧಿ, ಮಗುವಿನೊಂದಿಗೆ ಮಗುವಾಗಿರುವುದು, ಗುಂಡೇಟು ತಿಂದು ಬುದ್ಧನಂತೆ ಮಲಗಿರುವ ಗಾಂಧಿ, ಜೈಲು ಕಂಬಿಗಳ ಹಿಂದೆ, ದಂಡಿ ಮಾರ್ಚ್, ದಲಿತರ ಉದ್ಧಾರಕ್ಕಾಗಿ ಹಣ ಸಂಗ್ರಹ, ಇಂಗ್ಲೆಂಡ್‌ನಲ್ಲಿ ಭಾರತೀಯರ ಜತೆ, ಜವಾಹರಲಾಲ್, ವಿನೋಬಾ ಭಾವೆ,ರವೀಂದ್ರನಾಥ ಟ್ಯಾಗೋರ್, ರಾಜಕುಮಾರಿ ಅಮೃತ ಕೌರ್ ಜತೆ, ಬಿಹಾರದಲ್ಲಿ ನಡೆದ ಕೋಮು ಹಿಂಸಾಚಾರದ ಪ್ರದೇಶದಲ್ಲಿ, ನೌಕಾಲಿಗೆ ಹೋಗಲು ರೈಲನ್ನೇರಿ ಕುಳಿತ ಗಾಂಧಿ... ಹೀಗೆ ನೂರಕ್ಕೂ ಹೆಚ್ಚು ಚಿತ್ರಗಳು ಗಮನ ಸೆಳೆಯುತ್ತವೆ. ಗಾಂಧಿ ಆಸಕ್ತರು ನೋಡಲೇಬೇಕಾದ ಸ್ಥಳ ಇದಾಗಿದೆ.
ಉತ್ತರ ಕರ್ನಾಟದಲ್ಲಿ ಗಾಂಧಿ ನಂಟು...
ಸರ್ವೋದಯದ ಮಹಾತ್ಮ ಗಾಂಧೀಜಿಯವರ ಕನಸನ್ನು ಇಂದಿಗೂ ಜೀವಂತವಾಗಿ ಉಳಿಸಿರುವುದು ಉತ್ತರ ಕರ್ನಾಟಕವೇ. ಚರಕದ ಮೂಲಕವೇ ದೇಶದ ಸಬಲೀಕರಣದ ಕನಸು ಕಂಡಿದ್ದರು ಗಾಂಧೀಜಿ. ಉತ್ತರ ಕರ್ನಾಟಕದಲ್ಲಿ ಚರಕದ ಸದ್ದು ಇನ್ನೂ ನಿಂತಿಲ್ಲ. ಚರಕ ನಂಬಿಯೇ ಸಾವಿರಾರು ಜನರು ಇಲ್ಲಿ ಬದುಕುತ್ತಿದ್ದಾರೆ. ಚರಕ ಕೆಲಸ ಹೇಳುವಷ್ಟು ಸುಲಭವಲ್ಲ. ಮಾನವ ಶ್ರಮ ಬೇಡುತ್ತದೆ. ಗಾಂಧಿ ಕನಸಿನ ಚರಕಕ್ಕೆ ಇಲ್ಲಿ ಪುನುರುಜ್ಜೀವನ ನೀಡುವ ಅಗತ್ಯವಿದೆ.
ಇದೇನೆ ಇರಲಿ, ಉತ್ತರ ಕರ್ನಾಟದ ಹಲವೆಡೆ ಗಾಂಧಿಯ ಹೆಜ್ಜೆ ಗುರುತುಗಳಿವೆ. 1915ರಲ್ಲಿ ಬೆಳಗಾವಿಯಲ್ಲಿ ನಡೆದ ಮುಂಬೈ ಪ್ರಾಂತೀಯ ಪರಿಷತ್ ಸಭೆಯಲ್ಲಿ ಗಾಂಧಿ ಭಾಗವಹಿಸಿದ್ದರು.
ಸ್ವಾತಂತ್ರ್ಯದ ಪ್ರಚಾರಕ್ಕಾಗಿ 1930ರಲ್ಲಿ ನಿಪ್ಪಾಣಿ, ಚಿಕ್ಕೋಡಿ, ಧಾರವಾಡಕ್ಕೆ ಬಂದಿದ್ದರು. ಹುಬ್ಬಳ್ಳಿ, ಗದಗ, ಬೆಳಗಾವಿಗೂ ಭೇಟಿ ನೀಡಿ ಹಲವಾರು ಜನರೊಂದಿಗೆ ಸಮಾಲೋಚನೆ ನಡೆಸಿದ್ದರು. ಈಗಿನ ವಿಜಯಪುರಕ್ಕೆ (ಆಗ, ವಿಜಾಪುರ) 1931ರಲ್ಲಿ ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚಿಸಿದ್ದರು. ಇದೇ ಅವಧಿಯಲ್ಲಿ ಅವರು ಬಾಗಲಕೋಟೆಗೂ ಹೋಗಿದ್ದರು. ಒಮ್ಮೆ ತಿರುಪತಿ ಮೂಲಕ ಬಳ್ಳಾರಿಗೂ ಬಂದಿದ್ದರು.
ಬೆಳಗಾವಿಯಲ್ಲಿ 1924ರಲ್ಲಿ ನಡೆದ 29ನೇ ಕಾಂಗ್ರೆಸ್ ಅಧಿವೇಶನದಲ್ಲಿ ಅವರು ಪಾಲ್ಗೊಂಡಿದ್ದು ಅಚ್ಚಳಿಯದ ನೆನಪಾಗಿದೆ. ಈ ಅಧಿವೇಶನದ ಅಧ್ಯಕ್ಷರಾಗಿ ಅವರು ಇದ್ದರು. ಇಲ್ಲಿಗೆ ಬಂದ ನೆನಪಿಗಾಗಿ ಬೆಳಕವಾಡಿಯಲ್ಲಿ ಪಂಪಾ ಸರೋವರ ಕಟ್ಟಲಾಗಿದೆ. ಇದರ ಅಡಿಗಲ್ಲನ್ನು ಗಾಂಧಿಯೇ ಹಾಕಿದ್ದರು.
ಗದಗ ಜಿಲ್ಲೆಯ ಜಕ್ಕಲಿಗೂ ಗಾಂಧಿ ಬಂದಿದ್ದರು. ಗಾಂಧಿ ವಾದಿ ಅಂದಾನಪ್ಪ ದೊಡ್ಡಮೇಟಿ ಅವರ ಹರಿಜನೋದ್ಧಾರದ ಕಾರ್ಯ ನೋಡಿ ಮೆಚ್ಚುಗೆ ಸೂಚಿಸಿದ್ದರು.
ಖಾದಿ ಪ್ರಚಾರ ಮಾಡುವ ಉದ್ದೇಶಕ್ಕಾಗಿ ಪಮ್ಮೆ ಹೊನ್ನಾಳಿಗೂ ಬಂದು ಅಲ್ಲಿ ತುಂಗಭದ್ರಾ ನದಿಯ ಸೊಬಗು ನೋಡಿ ಖುಷಿಪಟ್ಟಿದ್ದರು. ಜೊತೆಯಲ್ಲಿ ಕಸ್ತೂರಬಾ,ಮಹಾದೇವಿ ದೇಸಾಯಿ, ರಾಜಾಜಿ, ದೇವದಾಸ ಗಾಂಧಿಯೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.