ಬೆಂಗಳೂರು/ ರಾಮನಗರ: ‘ನನ್ನ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದರು’ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ವಿರುದ್ಧ ವಿಜಯನಗರ (ಹೊಸಪೇಟೆ) ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ದೂರು ನೀಡಿದ್ದಾರೆ.
ಆ ಮೂಲಕ, ಈಗಲ್ಟನ್ ರೆಸಾರ್ಟ್‌ನಲ್ಲಿ ಮದ್ಯಸೇವಿಸಿ ‘ಕೈ’ ಶಾಸಕರು ಭಾನುವಾರ ನಸುಕಿನಲ್ಲಿ ಹೊಡೆದಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಬಿಡದಿ ಪೊಲೀಸರಿಗೆ ಆನಂದ್ ಸಿಂಗ್ ನೀಡಿದ ಹೇಳಿಕೆ ಆಧಾರದಲ್ಲಿ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323 (ಹಲ್ಲೆ), 324 (ದೊಣ್ಣೆಯಿಂದ ಹಲ್ಲೆ), 307 (ಕೊಲೆ ಯತ್ನ), 504 (ಶಾಂತಿ ಕದಡುವುದು), 506 (ಜೀವ ಬೆದರಿಕೆ) ಅಡಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಆರೋಪದಲ್ಲಿ ಗಣೇಶ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಪ್ರಕರಣದ ಬಗ್ಗೆ ಕಾಂಗ್ರೆಸ್ ವರಿಷ್ಠರು ಈಗಾಗಲೇ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ಅಲ್ಲದೆ, ಹೆಚ್ಚಿನ ವಿಚಾರಣೆಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ. ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಕೃಷ್ಣ ಬೈರೇಗೌಡ ಈ ಸಮಿತಿಯ ಸದಸ್ಯರಾಗಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಶೇಷಾದ್ರಿಪುರನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಹೇಳಿಕೆಯನ್ನು ಬಿಡದಿ ಪೊಲೀಸರು ಪಡೆದಿದ್ದಾರೆ.
ಏಕಾಏಕಿ ಹಲ್ಲೆ: ‘ಶನಿವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ರೆಸಾರ್ಟಿನಲ್ಲಿ ನಾನು, ಸಚಿವ ಈ. ತುಕಾರಾಂ, ಶಾಸಕರಾದ ರಘುಮೂರ್ತಿ, ತನ್ವೀರ್ ಸೇಠ್, ರಾಮಪ್ಪ ಇತರರು ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿ ಕೊಠಡಿಗೆ ತೆರಳುತ್ತಿದ್ದೆವು. ಈ ಸಂದರ್ಭ ಅಲ್ಲಿಗೆ ಬಂದ ಶಾಸಕ ಗಣೇಶ್, ಏಕಾಏಕಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಪಕ್ಷದ ಮುಖಂಡರನ್ನು ನನ್ನ ಮೇಲೆಯೇ ಎತ್ತಿ ಕಟ್ಟುತ್ತೀಯಾ ಎಂದು ಬೈಯುತ್ತಾ ನನ್ನ ಮುಖಕ್ಕೆ ಗುದ್ದಿ, ತಲೆಯನ್ನು ಗೋಡೆಗೆ ಗುದ್ದಿಸಿದರು’ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
‘ಎಲ್ಲಿ ನನ್ನ ಬಂದೂಕು. ನಿನ್ನನ್ನು ಈಗಲೇ ಮುಗಿಸುತ್ತೇನೆ ಎಂದು ಹುಡುಕಾಡಿದರು. ಬಂದೂಕು ಸಿಗದೇ ಹೋದಾಗ ನನ್ನ ಎದೆಯ ಭಾಗಕ್ಕೆ, ಕಿಬ್ಬೊಟ್ಟೆಯ ಭಾಗಕ್ಕೆ ಕಾಲಿನಿಂದ ಬಲವಾಗಿ ಒದ್ದರು. ಹೂಕುಂಡ ತೆಗೆದು ನನ್ನ ತಲೆಗೆ ಹೊಡೆದರು. ಇದರಿಂದಾಗಿ ನಾನು ಪ್ರಜ್ಞೆ ತಪ್ಪಿದೆ’ ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಈ ಘಟನೆ ವೇಳೆ ನೂಕಾಟ, ತಳ್ಳಾಟ ನಡೆದಿದ್ದು, ಸ್ಥಳದಲ್ಲಿದ್ದ ಸಚಿವ ಈ. ತುಕಾರಾಂ ಮತ್ತು ಶಾಸಕ ತನ್ವೀರ್ ಸೇಠ್ ಬೆದರಿದ್ದಾರೆ. ಕುಡಿದ ಮತ್ತಿನಲ್ಲಿ ತೀವ್ರ ಸಿಟ್ಟಿಗೆದ್ದಿದ್ದ ಗಣೇಶ್, ಬಂದೂಕು ಕೊಟ್ಟಿಲ್ಲ ಎಂಬ ಕಾರಣಕ್ಕೆ ತನ್ನ ಗನ್ ಮ್ಯಾನ್ ಶರಣುಗೆ ಕಚ್ಚಿದ್ದಾರೆ ಎನ್ನಲಾಗಿದೆ. ಈ ವೇಳೆ, ಸಚಿವ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ ಎಂದೂ ಹೇಳಲಾಗಿದೆ.
ಜಗಳ ಬಿಡಿಸಿದೆ: ‘ಊಟ ಮುಗಿಸಿ ಕೊಠಡಿಗೆ ಹೋಗುತ್ತಿದ್ದಾಗ ತಳ್ಳಾಟ, ಕೂಗಾಟ ನಡೆಯುತ್ತಿದ್ದು ಕೇಳಿಸಿತು. ಕೆಲವರು ನೂಕಾಡಿಕೊಳ್ಳುತ್ತಿದ್ದರು. ಎಲ್ಲರನ್ನೂ ಸಮಾಧಾನ ಪಡಿಸಿ ಜಗಳ ಬಿಡಿಸಿದೆ’ ಎಂದು ತನ್ವೀರ್ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೊಲೆ ಯತ್ನದಂಥ ಗಂಭೀರ ಪ್ರಕರಣಗಳಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಲಾಗುತ್ತದೆ. ಆದರೆ ಆರೋಪಿ ಗಣೇಶ್ ಸೋಮವಾರ ಮಧ್ಯಾಹ್ನದವರೆಗೂ ಬಿಡದಿಯ ರೆಸಾರ್ಟಿನಲ್ಲಿಯೇ ಇದ್ದರೂ ಪೊಲೀಸರು ಅವರನ್ನು ಬಂಧಿಸದಿರುವುದು ಚರ್ಚೆಗೆ ಕಾರಣವಾಗಿದೆ.
***
ಆನಂದ್ ಸಿಂಗ್ ಮತ್ತು ಭೀಮಾ ನಾಯ್ಕ ನಡುವಿನ ಮನಸ್ತಾಪ ಬಗೆಹರಿಸಲು ಮಾತುಕತೆ ನಡೆದಿತ್ತು. ಈ ಸಂದರ್ಭ ಸಣ್ಣ ಘಟನೆ ನಡೆಯಿತು. ಆದರೆ ಬಿಯರ್ ಬಾಟಲಿಯಿಂದ ಹೊಡೆದಿಲ್ಲ
–ಜೆ.ಎನ್. ಗಣೇಶ್,ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.