ಬೆಂಗಳೂರು: ಆಟೋಮೇಷನ್ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಭೌತಿಕ ಜಗತ್ತಿನ ಜೊತೆಗೆ ಡಿಜಿಟಲ್ ಲೋಕದಲ್ಲೂ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ ಎಂದು ಮೆಕ್‌ಲಾರೆನ್ ಸ್ಟ್ರಾಟೆಜಿಕ್ ವೆಂಚರ್ಸ್‌ನ ಹಿರಿಯ ಉಪಾಧ್ಯಕ್ಷ ಗಣೇಶ್ ತ್ಯಾಗರಾಜನ್ ಹೇಳಿದರು.
ಬೆಂಗಳೂರುತಂತ್ರಜ್ಞಾನ ಶೃಂಗ- 2021ರ ಅಂಗವಾಗಿ ಆಯೋಜಿಸಲಾಗಿದ್ದ ‘ಲೀಪ್‌ಫ್ರಾಗಿಂಗ್ ಡಿಜಿಟಲ್ ಟ್ರಾನ್ಸ್‌ಫರ್ಮೇಶನ್ ಯೂಸಿಂಗ್ ಆಟೋಮೇಷನ್’ ಸಂವಾದದಲ್ಲಿ ಮಾತನಾಡಿದ ಅವರು, 1060-70 ರ ದಶಕದಲ್ಲಿ ಕಾರ್ಖಾನೆಗಳಲ್ಲಿ ಪರಿಚಯವಾದ ಆಟೋಮೇಶನ್ ಪರಿಕಲ್ಪನೆ ಆಟೊಮೊಬೈಲ್ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಂತೆಯೇ ಈಗಿನ ಆಟೋಮೇಷನ್ ಕೂಡ ಮಹತ್ವದ ಬದಲಾವಣೆಗಳನ್ನು ಉಂಟುಮಾಡುತ್ತಿದೆ’ ಎಂದರು..
ಕ್ಲೌಡ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಷೀನ್ ಲರ್ನಿಂಗ್, ಡೀಪ್ ಲರ್ನಿಂಗ್, ಇಂಟರ್‌ನೆಟ್ ಆಫ್ ಥಿಂಗ್ಸ್ ಮುಂತಾದ ತಂತ್ರಜ್ಞಾನಗಳು ಇಂದು ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದ್ದು, ಆ ಎಲ್ಲ ಕಡೆಗಳಲ್ಲೂ ಆಟೋಮೇಷನ್ ಪ್ರಮುಖ ಪಾತ್ರ ವಹಿಸುತ್ತಿದೆ. ಇವೆಲ್ಲದರ ಸಹಾಯದಿಂದ 2020ರ ಉದ್ಯಮ ಹಿಂದೆಂದಿಗಿಂತ ಹೆಚ್ಚು ದಕ್ಷ ಹಾಗೂ ಸಮರ್ಥವಾಗಿ ಹೊರಹೊಮ್ಮಲಿದೆ. ಇಂತಹ ಸಂದರ್ಭದಲ್ಲಿ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳದವರು ಹಿಂದೆ ಉಳಿಯಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯಮಗಳ ಸಮಗ್ರ ಬೆಳವಣಿಗೆಯಲ್ಲಿ ಡಿಜಿಟಲ್ ಪರಿವರ್ತನೆ ಪ್ರಮುಖ ಪಾತ್ರ ವಹಿಸಬಲ್ಲದು. ಗ್ರಾಹಕರ ಅನುಭವವನ್ನು ಉತ್ತಮಗೊಳಿಸುವುದರಿಂದ ಹಿಡಿದು ಉದ್ಯಮದ ಆದಾಯವನ್ನು ಹೆಚ್ಚಿಸಿಕೊಳ್ಳುವವರೆಗೆ ಅದರಿಂದ ಹಲವಾರು ಉಪಯೋಗಗಳಿವೆ ಎಂದು ಇನ್ಫೋಮ್ಯಾಪ್ ಗ್ಲೋಬಲ್ ಸಿಇಒ ಸತೀಶ್ ಗ್ರಾಮಪುರೋಹಿತ್ ಹೇಳಿದರು.
ಡಿಜಿಟಲ್ ಪರಿವರ್ತನೆ ಯಶಸ್ವಿಯಾಗಲು ಉದ್ಯಮದ ನಾಯಕತ್ವ ಉತ್ತಮವಾಗಿರಬೇಕು, ಹಾಗೆಯೇ ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಮನೋಭಾವವೂ ಇರಬೇಕು. ಡಿಜಿಟಲ್ ಪರಿವರ್ತನೆಯನ್ನು ಒಟ್ಟಾರೆಯಾಗಿ ನೋಡಲು, ಮುನ್ನಡೆಸಲು ಸಾಧ್ಯವಾದಾಗ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದು ಎಯಾನ್ ನಿರ್ದೇಶಕ ಪ್ರತೀಕ್ ಕಪೂರ್ ಹೇಳಿದರು.
ರೊಬಾಟಿಕ್ ಪ್ರಾಸೆಸ್ ಆಟೋಮೇಶನ್, ಚಾಟ್‌ಬಾಟ್ ಮುಂತಾದ ಸವಲತ್ತುಗಳಿಂದ ಅನೇಕ ಹೊಸ ಸಾಧ್ಯತೆಗಳು ನಮ್ಮೆದುರು ಅನಾವರಣಗೊಂಡಿವೆ. ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುವುದರ ಜೊತೆಗೆ ಉದ್ಯೋಗಿಗಳಿಗೆ ಸೂಕ್ತ ತರಬೇತಿ ನೀಡುವುದು ಕೂಡ ಅತ್ಯಗತ್ಯವೆಂದು ಅವರು ಅಭಿಪ್ರಾಯಪಟ್ಟರು.
ಆಟೋಮೇಷನ್‌ನಿಂದ ಉದ್ಯೋಗ ನಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಅದು ಉದ್ಯೋಗಿಗಳಿಗೆ ಹೆಚ್ಚು ಸಮರ್ಥವಾಗಿ ಕೆಲಸ ಮಾಡಲು ನೆರವಾಗುತ್ತದೆಯೇ ಹೊರತು ಅವರಿಗೆ ಪರ್ಯಾಯವಾಗುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದು ರಾಬರ್ಟ್ ಬಾಷ್ ನ ಗುರುರಾಜ್ ಭಟ್ ಹೇಳಿದರು.
ತಂತ್ರಜ್ಞಾನದ ಬೆಳವಣಿಗೆಗಳಿಗಾಗಿ ಇಡೀ ಜಗತ್ತು ಭಾರತದತ್ತ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನತ್ತ ನೋಡುತ್ತಿದೆ ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು. ಉದ್ಯಮಗಳು ತಮ್ಮ ಡಿಜಿಟಲ್ ಪರಿವರ್ತನೆಯ ಕುರಿತು ಆಲೋಚಿಸುವುದನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಪರಿಣತರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.