ಬೆಳಗಾವಿ: ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ವಿಸರ್ಜನೆ ನಂತರ ಉಳಿಯುವ ತ್ಯಾಜ್ಯವನ್ನು ಹೊಲ, ಗದ್ದೆಗಳಿಗೆ ಗೊಬ್ಬರವನ್ನಾಗಿ ಬಳಸುವ ಪ್ರಯೋಗ, ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ನಾಗರದಾಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದಿದೆ.
ಗ್ರಾಮದವರೇ ಆದ ಪ್ರದೀಪ್ ದೇವಾನ್ (33) ಇಂಥದೊಂದು ಪ್ರಯೋಗ ಮಾಡಿದ್ದು ಯಶಸ್ವಿಯಾಗಿದೆ. ಅವರು ಪುಣೆಯ ಐ.ಟಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆರಡು ವರ್ಷಗಳ ಹಿಂದೆ, ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಯಿಂದಾಗಿ ಗ್ರಾಮದಲ್ಲಿದ್ದ ಎರಡು ಬಾವಿಗಳು ಬತ್ತಿಹೋಗಿದ್ದನ್ನು ಕಂಡು ಮರುಗಿದ್ದರು. ನಂತರ, ಗ್ರಾಮದಲ್ಲಿ ಇದ್ದ ಒಂದೇ ಒಂದು ಕೆರೆಯಲ್ಲಿಯೂ ಮೂರ್ತಿಗಳನ್ನು ವಿಸರ್ಜಿಸಲು ಆರಂಭಿಸಿದಾಗ ಆತಂಕಗೊಂಡರು.
ತಾವು ಕೆಲಸ ಮಾಡುತ್ತಿದ್ದ ಪುಣೆಯಲ್ಲಿರುವ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ (ಎನ್‌ಸಿಎಲ್) ವಿಜ್ಞಾನಿಗಳನ್ನು ಸಂಪರ್ಕಿಸಿದರು. ಕ್ಯಾಲ್ಸಿಯಂ ಸಲ್ಫೇಟ್ ರಾಸಾಯನಿಕದಿಂದ ತಯಾರಾಗುವ ಪಿಒಪಿ ಪದಾರ್ಥವನ್ನು ಅಮೋನಿಯಂ ಬೈಕಾರ್ಬೊನೇಟ್ ಮಿಶ್ರಿತ ನೀರಿನಲ್ಲಿ ಕರಗಿಸಬಹುದು ಎನ್ನುವ ಮಾಹಿತಿ ಪಡೆದುಕೊಂಡರು.
ಸ್ಥಳೀಯರ ಆರ್ಥಿಕ ಸಹಾಯದಿಂದ ಗ್ರಾಮದಲ್ಲಿ 8,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕಟ್ಟಿಸಿದರು. ಗ್ರಾಮಸ್ಥರ ಮನವೊಲಿಸಿ, ಗಣೇಶ ಮೂರ್ತಿಗಳನ್ನು ಅಮೋನಿಯಂ ಬೈಕಾರ್ಬೊನೇಟ್ ಮಿಶ್ರಿತ ನೀರಿನಲ್ಲಿ ವಿಸರ್ಜಿಸಿದರು. ರಾಸಾಯನಿಕ ಕ್ರಿಯೆ ನಡೆದು, ಮೂರ್ತಿಗಳು ಕರಗಿದವು. ಇದರ ಫಲವಾಗಿ ಅಮೋನಿಯಂ ಸಲ್ಫೇಟ್ ಮಿಶ್ರಣ ಉತ್ಪಾದನೆಯಾಯಿತು. ಇದನ್ನು ಬೆಳೆಗಳಿಗೆ ಸುರಿದರೆ, ಅದು ಗೊಬ್ಬರದಂತೆ ಕೆಲಸ ಮಾಡಿ ಮಣ್ಣಿನ ಫಲವತ್ತತೆಗೆ ಸಹಾಯ ಮಾಡುತ್ತದೆ.
ಗ್ರಾಮಸ್ಥರ ಸಹಕಾರ: ‘ಗಣೇಶ ಮೂರ್ತಿಗಳನ್ನು ಕೆರೆ ಅಥವಾ ಬಾವಿಯಲ್ಲಿ ವಿಸರ್ಜಿಸುವ ಬದಲು, ರಾಸಾಯನಿಕಯುಕ್ತ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವ ವಿಚಾರ ಹೊಸದು. ಪೂಜೆ– ಪುನಸ್ಕಾರ, ಸಂಪ್ರದಾಯ ತಳಕು ಹಾಕಿಕೊಂಡಿದ್ದರಿಂದ ಗ್ರಾಮಸ್ಥರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಭಯವಿತ್ತು. ಆದರೆ, ಈ ರೀತಿ ಮಾಡಿದರೆ ಪರಿಸರ ಉಳಿಸಬಹುದು. ಜಲಮೂಲಗಳನ್ನು ರಕ್ಷಿಸಬಹುದು ಎಂದು ಮನವರಿಕೆ ಮಾಡಿಕೊಟ್ಟಾಗ ಗ್ರಾಮಸ್ಥರು ಸಂಪೂರ್ಣವಾಗಿ ಸಹಕಾರ ನೀಡಿದರು’ ಎಂದು ಪ್ರದೀಪ್ ದೇವನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.