ADVERTISEMENT

ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ನೇಮಕ: ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 16:28 IST
Last Updated 4 ಫೆಬ್ರುವರಿ 2021, 16:28 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿದೆ.

ನಾಗೇಶ್ ವಿ.ಬೆಟ್ಟಕೋಟೆ ಅವರನ್ನು ಕುಲಪತಿಯನ್ನಾಗಿ 2021ರ ಜನವರಿ 22ರಂದು ಆದೇಶ ಹೊರಡಿಸಲಾಗಿದೆ. ನೇಮಕ ರದ್ದುಗೊಳಿಸುವಂತೆ ಕೋರಿ ಮೈಸೂರಿನ ಪ್ರಸನ್ನ ವಿದ್ಯಾ ಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

‘ಶೋಧನಾ ಸಮಿತಿ ಸೂಚಿಸಿದ ಮೂವರಲ್ಲಿ ಒಬ್ಬರನ್ನು ನೇಮಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ, ಶೋಧನಾ ಸಮಿತಿ ಸೂಚಿಸಿದ ಮೂವರಲ್ಲಿ ನಾಗೇಶ್ ವಿ. ಬೆಟ್ಟಕೋಟೆ ಅವರ ಹೆಸರಿಲ್ಲ’ ಎಂದು ಅರ್ಜಿದಾರರು ದೂರಿದ್ದಾರೆ.

ADVERTISEMENT

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಶೋಧನಾ ಸಮಿತಿ ಸೂಚಿಸಿರುವ ಮೂವರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.