ಬೆಂಗಳೂರು: ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಅವರ ಜೀವನ ಮಟ್ಟ ಸುಧಾರಣೆಗೆ ಕಾರಣವಾಗಿರುವ ಸಿದ್ಧ ಉಡುಪು ತಯಾರಿಕಾ ಉದ್ಯಮಕ್ಕೆ ಆರ್ಥಿಕ ಹಿಂಜರಿತ ದೊಡ್ಡ ಪೆಟ್ಟು ನೀಡಿದೆ. ಅದರ ಪರಿಣಾಮ ಸಣ್ಣ ಗಾರ್ಮೆಂಟ್ಸ್ ಕಾರ್ಖಾನೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿದ್ದು, ಇಡೀ ಉದ್ಯಮದ ಮೇಲೆ ಕರಿನೆರಳು ಆವರಿಸಿದೆ.
‘ಭಾರತದ ಗಾರ್ಮೆಂಟ್ಸ್ ಸಿಟಿ’ ಖ್ಯಾತಿಯ ಬೆಂಗಳೂರಿನಲ್ಲಿ ಬಹುಪಾಲು ಮಹಿಳಾ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಖಾನೆಗಳನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಿದ್ಧ ಉಡುಪು ತಯಾರಿಕೆಯಲ್ಲಿ ಪರಿಣತಿ ಪಡೆದ ಕೆಲವರು, ಸಣ್ಣ ಪ್ರಮಾಣದಲ್ಲಿ ಸ್ವಂತದ್ದೊಂದು ಕಾರ್ಖಾನೆ ತೆರೆದು ದೊಡ್ಡ ಉದ್ಯಮಿ ಆಗುವ ಕನಸು ಕಾಣುತ್ತಿದ್ದಾರೆ. ಅಂಥವರಿಗೆ ಆರ್ಥಿಕವಾಗಿ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಉದ್ಯಮದಲ್ಲಿ ಅರಳುವ ಮುನ್ನವೇ ಅವರೆಲ್ಲ ಬಾಡಿ ಹೋಗುತ್ತಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ‘ಅರ್ಧ ಸಂಬಳ’ ಕೊಡುವ ಸ್ಥಿತಿ!
ಪೀಣ್ಯ, ಹೊಸೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಿವೆ. ಸಾವಿರಾರು ಯಂತ್ರಗಳಿರುವ ಐದಾರು ಘಟಕಗಳನ್ನು ಹೊಂದಿರುವ ದೊಡ್ಡ ಕಾರ್ಖಾನೆಗಳು ಹಾಗೂ 25ಕ್ಕೂ ಕಡಿಮೆ ಯಂತ್ರಗಳಿಂದ ನಡೆಯುವ ಸಣ್ಣ ಕಾರ್ಖಾನೆಗಳನ್ನೂ ಕಾಣಬಹುದು.
ದೇಶದಲ್ಲಿ ಸದ್ಯ ಎದುರಾಗಿರುವ ಆರ್ಥಿಕ ಹಿಂಜರಿತ ದೊಡ್ಡ ಕಾರ್ಖಾನೆಗಳಿಗಿಂತ ಸಣ್ಣ ಕಾರ್ಖಾನೆಗಳ ಮೇಲೆಯೇ ಹೆಚ್ಚು ಪರಿಣಾಮ ಬೀರಿದೆ. ಸಿದ್ಧಪಡಿಸಿರುವ ಬಟ್ಟೆಗಳು ಅಂದುಕೊಂಡಷ್ಟು ಮಾರಾಟವಾಗುತ್ತಿಲ್ಲವೆಂದು ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಗಳು ಕಂಗಾಲಾಗಿವೆ. ಹೀಗಾಗಿ, ಹೊಸ ಬಟ್ಟೆ ಸಿದ್ಧಪಡಿಸುವ ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ. ಕೆಲ ಕಂಪನಿಗಳು, ಕೇವಲ ದೊಡ್ಡ ಕಾರ್ಖಾನೆಗಳಿಗೆ ಮಾತ್ರ ಬಟ್ಟೆ ಸಿದ್ಧಪಡಿಸಲು ಆರ್ಡರ್ ನೀಡುತ್ತಿವೆ. ಸಣ್ಣ ಕಾರ್ಖಾನೆಗಳತ್ತ ತಿರುಗಿಯೂ ನೋಡುತ್ತಿಲ್ಲ. ಆಕಸ್ಮಾತ್ ನೋಡಿದರೂ ಕೆಲಸಕ್ಕೆ ತಕ್ಕಂತೆ ಹಣವನ್ನೂ ಕೊಡುತ್ತಿಲ್ಲ.
‘ದೊಡ್ಡ ಉದ್ಯಮಿ’ ಆಗುವ ಕನಸು ಕಂಡ ಸಣ್ಣ ಕಾರ್ಖಾನೆಗಳ ಮಾಲೀಕರು ಕಾರ್ಮಿಕರಿಗೆ ಸಂಬಳ ಕೊಡದ ಸ್ಥಿತಿಗೆ ಬಂದಿದ್ದಾರೆ. ಸ್ವಂತ ಕಾರ್ಖಾನೆ ಮುಚ್ಚಿ, ತಾವೂ ಕೆಲಸಕ್ಕೆ ಸೇರುತ್ತಿದ್ದಾರೆ ಎಂದು ಸಣ್ಣ ಉದ್ಯಮಿಗಳು ಬೇಸರಿಸಿದರು.
ಇದನ್ನೂ ಓದಿ:ಆರ್ಥಿಕ ಬಿಕ್ಕಟ್ಟು: ಆಟೊಮೊಬೈಲ್ ಕ್ಷೇತ್ರ ವಿಲವಿಲ
‘ಸರ್ಕಾರದ ಆರ್ಥಿಕ ನೀತಿಗಳು, ಸಣ್ಣ ಕಾರ್ಖಾನೆಗಳ ಜೀವ ಹಿಂಡುತ್ತಿವೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯಿಂದ ನೊಂದಿರುವ ಸಣ್ಣ ಉದ್ಯಮಿಗಳಿಗೆ ಇಂದಿನ ಆರ್ಥಿಕ ಹಿಂಜರಿತ ಮತ್ತಷ್ಟು ಪೆಟ್ಟು ನೀಡಿದೆ’ ಎಂದು ಪೀಣ್ಯ 2ನೇ ಹಂತದಲ್ಲಿರುವ ‘ಎ.ಎಸ್. ಫ್ಯಾಷನ್ಸ್’ ಕಾರ್ಖಾನೆ ವ್ಯವಸ್ಥಾಪಕ ಅರ್ಜುನ್ ಹೇಳಿದರು.
ಸ್ನೇಹಿತರ ಕಾರ್ಖಾನೆಗಳೂ ಬಂದ್: ‘ದೊಡ್ಡ ಕಾರ್ಖಾನೆಗಳ ಮ್ಯಾನೇಜರ್ ಹುದ್ದೆ ತೊರೆದಿದ್ದ ಮೂವರು ಸ್ನೇಹಿತರು, ಸ್ವಂತ ಕಾರ್ಖಾನೆ ಆರಂಭಿಸಿದ್ದರು. ಆರ್ಡರ್‌ಗಳು ಸಿಗದೆ, ಕಾರ್ಮಿಕರಿಗೆ ಸಂಬಳ ನೀಡಲಾಗದೇ ಆ ಕಾರ್ಖಾನೆಗಳು ಬಂದ್ ಮಾಡಬೇಕಾಯಿತು. ಈಗ ಅವರೆಲ್ಲ ಪುನಃ ದೊಡ್ಡ ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ಅರ್ಜುನ್ ತಿಳಿಸಿದರು.
‘ಬಟ್ಟೆ ಸಿದ್ಧಪಡಿಸಿ ಕೊಟ್ಟ 45 ದಿನಗಳ ನಂತರವೇ ಕಂಪನಿಯವರು ಹಣ ನೀಡುತ್ತಾರೆ.ಸ್ವಲ್ಪ ತೊಂದರೆಯಾದರೂ ಕಾರ್ಮಿಕ ಇಲಾಖೆ, ಜಿಎಸ್‌ಟಿ–ಹೀಗೆ ನಾನಾ ಇಲಾಖೆ ಅಧಿಕಾರಿಗಳು ನೋಟಿಸ್ ಕೊಡುತ್ತಾರೆ’ ಎಂದು ಹೇಳಿದರು.
‘ಸಣ್ಣ ಕಾರ್ಖಾನೆಗಳ ಸ್ಥಿತಿಯಂತೂ ತೀರಾ ಶೋಚನೀಯ. ಪರಿಸ್ಥಿತಿ ಹೀಗೆ ಮುಂದುವರಿದರೆ, ದೊಡ್ಡ ಕಾರ್ಖಾನೆಗಳಲ್ಲೂ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ’ ಎಂದು ‘ರೈನ್ ಟೆಕ್ಸ್‌ಟೈಲ್ಸ್’ ಮಾಲೀಕ ನಾಗರಾಜ ಹೇಳಿದರು.
ದೊಡ್ಡ ಕಾರ್ಖಾನೆಗಳ ಆಕ್ರಮಣ: ‘ಸಿದ್ಧ ಉಡುಪು ತಯಾರಿಕೆಯಲ್ಲಿ ಗೋಕುಲ್‌ದಾಸ್, ಸಾಯಿ ಎಕ್ಸ್‌ಪೋರ್ಟ್, ಇಂಡಸ್ಟ್ರೀ ಗ್ರೂಪ್ ಕಂಪನಿಗಳು ಮುಂಚೂಣಿಯಲ್ಲಿವೆ. ಸಣ್ಣ ಘಟಕಗಳು ಮುಚ್ಚುವ ಹಂತ ತಲುಪುತ್ತಿವೆ’ ಎಂದು ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಕಾರ್ಯದರ್ಶಿ ಕೆ.ಸರೋಜಾ ವಾಸ್ತವ ಸ್ಥಿತಿ ಬಿಚ್ಚಿಟ್ಟರು.
ಇದನ್ನೂ ಓದಿ:ಸಮಸ್ಯೆ ಸುಳಿಯಲ್ಲಿ ಪೂರಕ ಕೈಗಾರಿಕೆಗಳು
‘ವಿದ್ಯುತ್ ಬಿಲ್‌ಗೂ ಜಿಎಸ್‌ಟಿ’
‘ವಿದ್ಯುತ್ ಬಿಲ್‌ಗೂ ಜಿಎಸ್‌ಟಿ ಬಂದಿದೆಯಂತೆ. ಪ್ರತಿ ವರ್ಷ ₹ 5,000 ಪಾವತಿ ಮಾಡಬೇಕೆಂದು ಬೆಸ್ಕಾಂನವರು ಹೇಳುತ್ತಿದ್ದಾರೆ. ಅದನ್ನು ಪಾವತಿಸದಿದ್ದರೆ ವಿದ್ಯುತ್ ಇಲ್ಲ. ವಿದ್ಯುತ್ ಇಲ್ಲದಿದ್ದರೆ ಯಂತ್ರ ನಡೆಯೊಲ್ಲ ಹಾಗೂ ಕೆಲಸವೂ ಇರುವುದಿಲ್ಲ. ಅನಿವಾರ್ಯವಾಗಿ ಕಾರ್ಖಾನೆ ಬಂದ್ ಮಾಡಲೇಬೇಕಾಗುತ್ತದೆ’ ಎಂದು ಅರ್ಜುನ್ ಹೇಳಿದರು.
‘ಉಸಿರಾಡುವ ಗಾಳಿಯಷ್ಟೇ ಬಟ್ಟೆ ಮುಖ್ಯ’
‘ಕುಡಿಯಲು ನೀರು, ಉಸಿರಾಡಲು ಗಾಳಿ ಹಾಗೂ ಊಟಕ್ಕೆ ಅನ್ನ ಎಷ್ಟೋ ಮುಖ್ಯವೂ ಮನುಷ್ಯನಿಗೆ ಬಟ್ಟೆಯೂ ಅಷ್ಟೇ ಮುಖ್ಯ. ಬಡವ, ಶ್ರೀಮಂತ ಅಂತ ಇಲ್ಲ. ಎಲ್ಲರೂ ಬಟ್ಟೆ ಹಾಕಿಕೊಳ್ಳುತ್ತಾರೆ. ಹೀಗಾಗಿ, ಸಿದ್ಧ ಉಡುಪುಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ’ ಎಂದು ‘ಗಾರ್ಮೆಂಟ್ಸ್ ಕಾರ್ಖಾನೆಗಳ ಮಾಲೀಕರು ಹಾಗೂ ಕಾರ್ಮಿಕರ ಹಿತರಕ್ಷಣಾ ವೇದಿಕೆ’ ರಾಜ್ಯ ಘಟಕದ ಅಧ್ಯಕ್ಷ ಮುದ್ದು ಹನುಮೇಗೌಡ ಹೇಳಿದರು.
ಇದನ್ನೂ ಓದಿ:ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ: ದೇಣಿಗೆ ಕುಸಿತ
‘ಸಣ್ಣ ಕಾರ್ಖಾನೆಗಳು ಕಷ್ಟದಲ್ಲಿವೆ. ಅವುಗಳು ಬಂದ್ ಆದರೆ, ಅಲ್ಲಿಯ ಕಾರ್ಮಿಕರು ದೊಡ್ಡ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ. ಆರ್ಥಿಕ ಹಿಂಜರಿತ ಕಾರ್ಮಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬೀರಿದ್ದು ಮಾಲೀಕರ ಮೇಲಷ್ಟೇ’ ಎಂದು ಅಭಿಪ್ರಾಯಪಟ್ಟರು.
‘ಜಿಎಸ್‌ಟಿಯಿಂದ ಅನುಕೂಲ’
‘ಸದ್ಯ ಸಣ್ಣ ಕಾರ್ಖಾನೆಗಳೇ ಹೆಚ್ಚಿವೆ. ಜಿಎಸ್‌ಟಿ ಜಾರಿಯಾದ ನಂತರ ನನಗಂತೂ ಅನುಕೂಲ ಆಗಿದೆ. ಬ್ಯಾಂಕ್‌ನಿಂದ ಸಾಲ ಸಿಕ್ಕಿದೆ’ ಎಂದು ಪೀಣ್ಯದ ‘ಶ್ರೀರಂಗನಾಥಸ್ವಾಮಿ ಕ್ರಿಯೇಷನ್ಸ್’ ಮಾಲೀಕ ಬಸವರಾಜ ಹೇಳಿದರು.
‘ಖರೀದಿದಾರರಿಂದ ಜಿಎಸ್‌ಟಿ ಪಡೆದು, ಅದನ್ನೇ ಸರ್ಕಾರಕ್ಕೆ ತುಂಬುತ್ತೇವೆ. ಬೇಡಿಕೆ ಹೆಚ್ಚಿರುವುದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜಿಎಸ್‌ಟಿ ಜಾರಿಗೂ ಮುನ್ನ ಕೆಲವರು, ಕಳ್ಳ ಮಾರುಕಟ್ಟೆಯಿಂದ ಹೆಚ್ಚು ಸಂಪಾದನೆ ಮಾಡುತ್ತಿದ್ದರು. ಈಗ ಎಲ್ಲದಕ್ಕೂ ಬಿಲ್ ಕಡ್ಡಾಯ. ಇದು ಸಣ್ಣ ಕಾರ್ಖಾನೆಗಳಿಗೆ ಭಾರಿ ಹೊಡೆತ ನೀಡಿದೆ’ ಎಂದರು.
***
* ನೋಂದಾಯಿತ ಕಾರ್ಖಾನೆಗಳು –750ಕ್ಕೂ ಹೆಚ್ಚು
* ನಗರದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಗಳು –1500ಕ್ಕೂ ಹೆಚ್ಚು
* ಗಾರ್ಮೆಂಟ್ಸ್ ಕಾರ್ಖಾನೆಗಳ ಕಾರ್ಮಿಕರು –6 ಲಕ್ಷಕ್ಕೂ ಹೆಚ್ಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.