ಬೆಂಗಳೂರು: ‘ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗಳಿಗೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ಇದೇ 25ರಂದು ಪರೀಕ್ಷೆ ನಡೆಸಲಿರುವ ಕಾರಣ ಅದೇ ದಿನ ನಿಗದಿಯಾಗಿರುವ 2023–24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (384 ಹುದ್ದೆ) ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕೆಂಬ ಅಭ್ಯರ್ಥಿಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ತಮ್ಮ ‘X’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಐಬಿಪಿಎಸ್ ಪರೀಕ್ಷೆಯ ಕಾರಣಕ್ಕೆ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಮುಂದೂಡುವಂತೆ ಮುಖ್ಯಮಂತ್ರಿ ಬಳಿ ನಾನು ಮನವಿ ಮಾಡಿದ್ದೇನೆ’ ಎಂದಿದ್ದಾರೆ.
‘ಐಬಿಪಿಎಸ್ ಪರೀಕ್ಷೆಗಳನ್ನು ಮುಂದೂಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಪರಿಶೀಲಿಸುವುದಾಗಿ ನಾನು ಭರವಸೆ ನೀಡುತ್ತೇನೆ. ಅಭ್ಯರ್ಥಿಗಳ ಕಾಳಜಿಗೆ ನಮ್ಮ ಆದ್ಯತೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.