ಬೆಂಗಳೂರು: ‘2023–24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 25ರಂದೇ ನಡೆಸಲಾಗುವುದು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
‘ಮಂಗಳವಾರ (ಜುಲೈ 30) ನಡೆದ ಆಯೋಗದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಪರೀಕ್ಷೆ ನಡೆಸಲು ಅಗತ್ಯವಾಗ ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರುವುದರಿಂದ ಆಗಸ್ಟ್ 25ರಂದೇ ಪರೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ, ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 25ರಂದು ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ 6,128 ಗುಮಾಸ್ತ ಹುದ್ದೆಗಳಿಗೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ಪರೀಕ್ಷೆ ನಡೆಸಲಿದೆ. ಈ ಪೈಕಿ, 457 ಹುದ್ದೆಗಳು ಕರ್ನಾಟಕದಲ್ಲಿ ಖಾಲಿ ಇವೆ. ಕನ್ನಡದಲ್ಲಿಯೂ ಈ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೆಲವು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.
ಅಭ್ಯರ್ಥಿಗಳ ಜೊತೆ ದನಿಗೂಡಿಸಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶ್ರೇಯಸ್ ಎಂ. ಪಟೇಲ್, ಶಾಸಕ ವಿಠಲ ಎಸ್. ಹಲಗೇಕರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರು ಪರೀಕ್ಷೆ ಮುಂದೂಡುವಂತೆ ಕೆಪಿಎಸ್‌ಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿಯೂ ಸರ್ಜಿ ಈ ವಿಷಯ ಪ್ರಸ್ತಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.