ADVERTISEMENT

ಚಿಕ್ಕಬಳ್ಳಾಪುರ: 6 ಜೀವ ಬಲಿ ಪಡೆದ ಜಿಲೆಟಿನ್‌ ಸ್ಫೋಟ

ಶಿವಮೊಗ್ಗದ ಹುಣಸೋಡು ಪ್ರಕರಣ ಮಾಸುವ ಮುನ್ನವೇ ಗುಡಿಬಂಡೆ ಬಳಿ ದುರಂತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 22:55 IST
Last Updated 23 ಫೆಬ್ರುವರಿ 2021, 22:55 IST
ದುರ್ಘಟನೆ ನಡೆದ ಸ್ಥಳ
ದುರ್ಘಟನೆ ನಡೆದ ಸ್ಥಳ   

ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಸ್ಫೋಟ ಪ್ರಕರಣ ಮಾಸುವ ಮುನ್ನವೇ ಒಂದು ತಿಂಗಳ ಅಂತರದಲ್ಲಿ ಮತ್ತೊಂದು ಜಿಲೆಟಿನ್‌ ಸ್ಫೋಟ ಪ್ರಕರಣ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಸ್ಫೋಟ ಆರು ಜೀವಗಳನ್ನು ಬಲಿ ಪಡೆದಿದೆ.

ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಗ್ರಾಮದಲ್ಲಿ ಭ್ರಮರವಾಸಿನಿ ಕ್ರಷರ್‌ನಿಂದ ರಾತ್ರೋರಾತ್ರಿ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಜಿಲೆಟಿನ್‌ ಸ್ಫೋಟಗೊಂಡಿದೆ. ವಾಹನದಲ್ಲಿದ್ದ ಆಂಧ್ರ ಪ್ರದೇಶದ ಮೂವರು, ನೇಪಾಳದ ಒಬ್ಬ ಮತ್ತು ಇಬ್ಬರು ಸ್ಥಳೀಯ ಕಾರ್ಮಿಕರು ಸ್ಫೋಟಕ್ಕೆ ಬಲಿಯಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದ ರಭಸಕ್ಕೆ ವಾಹನದಲ್ಲಿದ್ದವರ ದೇಹಗಳು ಗುರುತಿಸಲಾಗದಷ್ಟು ಛಿದ್ರ, ಛಿದ್ರವಾಗಿವೆ. ರುಂಡ, ಮುಂಡಗಳು, ಕೈ, ಕಾಲುಗಳು ದೇಹದಿಂದ ಬೇರ್ಪಟ್ಟು ಘಟನಾ ಸ್ಥಳ ಭಯಾನಕವಾಗಿ ಕಾಣುತ್ತಿತ್ತು.

ADVERTISEMENT

‘ನಡುರಾತ್ರಿ ಕೇಳಿದ ಭಾರಿ ಸ್ಫೋಟದ ಸದ್ದಿಗೆ ಎಚ್ಚರಗೊಂಡು ಘಟನಾ ಸ್ಥಳಕ್ಕೆ ಧಾವಿಸುವ ವೇಳೆಗೆ
ಆಂಬುಲೆನ್ಸ್‌ ಮತ್ತು ಭಾರಿ ಸಂಖ್ಯೆಯ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಏನೋ ಭಾರಿ ದೊಡ್ಡ ಅನಾಹುತವೇ ಸಂಭವಿಸಿರಬಹುದು ಎಂದು ಗೊತ್ತಾಗಲು ಬಹಳ ಹೊತ್ತು ಬೇಕಾಗಲಿಲ್ಲ’ ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.

‘ವಾಹನಗಳ ದೀಪದ ಬೆಳಕಿನಲ್ಲಿ ಪೊಲೀಸರು ಶವಗಳಿಗಾಗಿ ಶೋಧಿಸುತ್ತಿದ್ದರು. ಕತ್ತಲಾಗಿದ್ದರಿಂದ ಘಟನಾ ಸ್ಥಳದಲ್ಲಿ ಏನೊಂದು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ರಾತ್ರಿ ಕಳೆದು ಬೆಳಕು ಮೂಡುತ್ತಲೇ ಘಟನಾ ಸ್ಥಳದಲ್ಲಿಯ ಭೀಕರತೆ ಕಂಡು ಬೆಚ್ಚಿಬಿದ್ದೆವು’ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

ಮಂಗಳವಾರ ಬೆಳಿಗ್ಗೆ 11 ಗಂಟೆಯವರೆಗೂ ರಕ್ತಸಿಕ್ತವಾಗಿದ್ದ ದೇಹದ ಅವಯವಗಳು ಚೆಲ್ಲಾಪಿಲ್ಲಿಯಾಗಿ ಸ್ಥಳದಲ್ಲಿ ಬಿದ್ದಿದ್ದವು. ಸ್ಫೋಟದ ಸ್ಥಳದಲ್ಲಿ ಇನ್ನೂ ಜೀವಂತ ಸ್ಫೋಟಕಗಳು ಇರಬಹುದು ಎಂಬ ಶಂಕೆಯಿಂದ ಪೊಲಿಸರು ಯಾರಿಗೂ ಸ್ಥಳಕ್ಕೆ ಹೋಗಲು ಬಿಡಲಿಲ್ಲ. ಮೃತದೇಹಗಳನ್ನು ಸಾಗಿಸಲೂ ಮುಂದಾಗಿರಲಿಲ್ಲ.

ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಜ್ಞರು, ಗಣಿ ಮತ್ತು ಭೂ ವಿಜ್ಞಾನಿಗಳನ್ನು ಒಳಗೊಂಡ ತಂಡ ಬೆಂಗಳೂರಿನಿಂದ ಬಂದು ಸ್ಥಳ ಪರಿಶೀಲನೆ ನಡೆಸಿತು. ಸಜೀವ ಸ್ಫೋಟಕಗಳು ಇಲ್ಲ ಎನ್ನುವುದನ್ನು ಖಚಿತಪಡಿಸಿದ ನಂತರ ಮೃತರ ಸಂಬಂಧಿಗಳು ಬಂದು ಶವಗಳನ್ನು ಗುರುತಿಸಿದರು. ಬಳಿಕ ಛಿದ್ರಗೊಂಡ ದೇಹಗಳನ್ನು ಒಟ್ಟುಗೂಡಿಸಿ ಆಂಬುಲೆನ್ಸ್‌ನಲ್ಲಿ ಸಾಗಿಸಲಾಯಿತು.

ಭ್ರಮರವಾಸಿನಿ ಕ್ರಷರ್‌ ಮೇಲೆ ಅಧಿಕಾರಿಗಳುಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದರು. ಹಾಗಾಗಿ ಕ್ರಷರ್‌ ಸಿಬ್ಬಂದಿ ಅಪಾರ ಪ್ರಮಾಣದ ಜಿಲೆಟಿನ್ ಸ್ಫೋಟಕವನ್ನು‌ರಾತ್ರೋರಾತ್ರಿ ಅರಣ್ಯದಲ್ಲಿ ಬಚ್ಚಿಡಲು ಸಾಗಿಸುವ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿ.ಎಸ್‌.ನಾಗರಾಜ್ ಮಾಲೀಕತ್ವದ ಈ ಕ್ರಷರ್‌ ಮೇಲೆ ಫೆಬ್ರುವರಿ 7ರಂದು ದಾಳಿ ನಡೆಸಿದ್ದ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು. ಅಂದಿನಿಂದ ಕ್ರಷರ್‌ ಬಂದ್‌ ಆಗಿತ್ತು. ಸೋಮವಾರ ಬೆಳಿಗ್ಗೆ ಅಧಿಕಾರಿಗಳು ಎರಡನೇ ಬಾರಿ ದಾಳಿ ನಡೆಸಿದ್ದರು.

ಬದುಕುಳಿದ ಚಾಲಕ:ಸ್ಫೋಟಕ ಸಾಗಿಸುತ್ತಿದ್ದ ವಾಹನ ಭ್ರಮರವಾಸಿನಿ ಕ್ರಷರ್ ಆಂಡ್ ಕ್ವಾರಿಗೆ ಸೇರಿದೆ. ವಾಹನದ ಚಾಲಕ ರಿಯಾಜ್‌ ಬದುಕುಳಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸಿಗದ ಮಾಹಿತಿ:ಹಿರೇನಾಗವೇಲಿ, ವರ್ಲಕೊಂಡ, ಆದೇಗಾರಹಳ್ಳಿ, ಮುತುಕದಹಳ್ಳಿ, ಮಾರನಾಯಕನಹಳ್ಳಿ ಪೇರೆಸಂದ್ರ ಸುತ್ತಮುತ್ತ ಸುಮಾರು 55 ಕಲ್ಲುಗಣಿ, ಕ್ರಷರ್‌ಗಳಿವೆ. ಸ್ಫೋಟ ನಡೆದ ಭ್ರಮರವಾಸಿನಿ ಕ್ರಷರ್‌ಗೆ ಎಂ ಸ್ಯಾಂಡ್‌ ತಯಾರಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ, ಭಾರಿ ಪ್ರಮಾಣದ ಸ್ಫೋಟಕಗಳನ್ನು ಏಕೆ ತಂದಿದ್ದರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಷ್ರರ್‌ ಮಾಲೀಕ ಜಿ.ಎಸ್‌.ನಾಗರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ದೌಡಾಯಿಸಿದ ಸಚಿವರು, ಅಧಿಕಾರಿಗಳು: ಸುದ್ದಿ ತಿಳಿಯುತ್ತಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಬೆಂಗಳೂರಿನಿಂದ‌ ಹಿರೇನಾಗವೇಲಿಗೆ ಧಾವಿಸಿದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಬಿ.ಎನ್‌.ಬಚ್ಚೇಗೌಡ, ಶಾಸಕರಾದ ವಿ. ಮುನಿಯಪ್ಪ, ಸುಬ್ಬಾರೆಡ್ಡಿ, ಜಿಲ್ಲಾಧಿಕಾರಿ ಆರ್‌.ಲತಾ,ಭೇಟಿ ನೀಡಿದರು.

ಸಿಐಡಿ ತನಿಖೆಗೆ ಆದೇಶ:

ಹಿರೇನಾಗವಲ್ಲಿ ಸ್ಫೋಟ ಪ್ರಕರಣ ಮತ್ತು ಅಧಿಕಾರಿಗಳ ಪಾತ್ರ ಕುರಿತು ಸಿಐಡಿ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ‘ಹುಣಸೋಡು ದುರಂತದ ಬಳಿಕ ಸರ್ಕಾರ ಕಲ್ಲು ಗಣಿಗಾರಿಕೆ ಸಂಬಂಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಮೊದಲು‌ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತಿತ್ತು. ಹುಣಸೋಡು ಘಟನೆ ಬಳಿಕ ಪ್ರತಿ ತಿಂಗಳು ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ತಲಾ ₹5 ಲಕ್ಷ ಪರಿಹಾರ: ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕಾರ್ಮಿಕ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದಲೂ ಮೃತರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ಹಾಗೂ ಸಹಾಯ ಸೌಲಭ್ಯ ಒದಗಿಸುವಂತೆ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮನವಿ ಮಾಡುವುದಾಗಿ ಸಂಸದ ಬಚ್ಚೇಗೌಡ ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಒತ್ತಾಯ:

ಹಿರೇನಾಗವೇಲಿ ಜಿಲೆಟಿನ್ಸ್ಫೋಟ ಪ್ರಕರಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಪೊಲೀಸರು, ಭೂವಿಜ್ಞಾನ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ಕ್ರಷರ್, ಕಲ್ಲುಕ್ವಾರಿ ನಡೆಸುತ್ತಿರುವರ ಮೇಲೆ ಐಪಿಸಿ ಸೆಕ್ಷನ್ 302ರಂತೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಸರ್ಕಾರ ಕೂಡಲೇ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿ ತನಿಖೆ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲಿ ಗ್ರಾಮದ ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಬಂದ ಸಿದ್ದರಾಮಯ್ಯ,ಸ್ಫೋಟದ ಸ್ಥಳ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.