ADVERTISEMENT

‘ಮಹಿಳಾ ಚಳವಳಿಗಳಲ್ಲಿ ದಲಿತ ಪ್ರಶ್ನೆ ಅಹಿತಕರ’

‘ಜಾತಿ ಮತ್ತು ಲಿಂಗತ್ವ’ ಪುಸ್ತಕ ಬಿಡುಗಡೆ ವೇಳೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:41 IST
Last Updated 27 ಅಕ್ಟೋಬರ್ 2024, 15:41 IST
‘ಜಾತಿ ಮತ್ತು ಲಿಂಗತ್ವ’ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ, ಫುಲೆ–ಅಂಬೇಡ್ಕರ್‌ ವಾದಿ ಧಮ್ಮ ಸಂಘಿನಿ ರಮಾಘೋರಕ್‌ ಮತ್ತು ಲೇಖಕಿ .ವಿ. ನೇತ್ರಾವತಿ ಚರ್ಚೆಯಲ್ಲಿ ತೊಡಗಿದ್ದರು. ಪ್ರೊ.ಪಿ.ಭಾರತಿ ದೇವಿ, ರಂಗ ನಿರ್ದೇಶಕ ಕೆ. ಪಿ. ಲಕ್ಷ್ಮಣ ಮತ್ತು ಲೇಖಕಿ ದು.ಸರಸ್ವತಿ ಇದ್ದರು –ಪ್ರಜಾವಾಣಿ ಚಿತ್ರ
‘ಜಾತಿ ಮತ್ತು ಲಿಂಗತ್ವ’ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ, ಫುಲೆ–ಅಂಬೇಡ್ಕರ್‌ ವಾದಿ ಧಮ್ಮ ಸಂಘಿನಿ ರಮಾಘೋರಕ್‌ ಮತ್ತು ಲೇಖಕಿ .ವಿ. ನೇತ್ರಾವತಿ ಚರ್ಚೆಯಲ್ಲಿ ತೊಡಗಿದ್ದರು. ಪ್ರೊ.ಪಿ.ಭಾರತಿ ದೇವಿ, ರಂಗ ನಿರ್ದೇಶಕ ಕೆ. ಪಿ. ಲಕ್ಷ್ಮಣ ಮತ್ತು ಲೇಖಕಿ ದು.ಸರಸ್ವತಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹಿಳಾ ಚಳವಳಿಗಳಲ್ಲಿ ದಲಿತ ಪ್ರಶ್ನೆ ಎತ್ತಿದಾಕ್ಷಣ ವಾತಾವರಣ ಅಹಿತಕರವಾಗುವ ಪರಿಸ್ಥಿತಿ ಇದೆ’ ಎಂದು ಪ್ರಾಧ್ಯಾಪಕಿ ಭಾರತಿ ದೇವಿ.ಪಿ ಅವರು ಹೇಳಿದರು.

ದು.ಸರಸ್ವತಿ ಅವರು ಅನುವಾದಿಸಿರುವ, ಶರ್ಮಿಳಾ ರೆಗೆ ಅವರ ‘ರೈಟಿಂಗ್‌ ಕಾಸ್ಟ್/ರೈಟಿಂಗ್‌ ಜೆಂಡರ್‌’ ಕೃತಿಯ ಕನ್ನಡಾನುವಾದ ‘ಜಾತಿ ಮತ್ತು ಲಿಂಗತ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ತ್ರೀವಾದವು ಅಬ್ರಾಹ್ಮಣೀ ದೃಷ್ಟಿಕೋನಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಸ್ತ್ರೀವಾದವು ಫುಲೆಯವರ ದೃಷ್ಟಿಕೋನಗಳನ್ನು, ಅಂಬೇಡ್ಕರ್ ಅವರ ದೃಷ್ಟಿಕೋನಗಳನ್ನು ಒಳಗೊಳ್ಳಬೇಕಿತ್ತು. ಭಾರತದ ಸ್ತ್ರೀವಾದವು 70–80ರ ದಶಕದ ಮೇಲ್ವರ್ಗಗಳ ಮತ್ತು ಪ್ರಬಲ ಜಾತಿಗಳ ಮಹಿಳೆಯರಿಂದಲೇ ತುಂಬಿಹೋಗಿದೆ. ಎಲ್ಲ ಜಾತಿಗಳ ಮಹಿಳೆಯರನ್ನೂ ಏಕಾಕೃತಿಯಾಗಿ ಪರಿಗಣಿಸುವ ಸ್ತ್ರೀವಾದವದು. ಅದು ಸ್ತ್ರೀವಾದದಲ್ಲಿ ದಲಿತ ಪ್ರಶ್ನೆಯನ್ನು ಎತ್ತುವುದೇ ಇಲ್ಲ ಎಂಬ ಪ್ರತಿಪಾದನೆಯ ಭಾಗವಾಗಿ ಶರ್ಮಿಳಾ ಅವರ ಈ ಕೃತಿ ರೂಪುಗೊಂಡಿದೆ’ ಎಂದರು.

ADVERTISEMENT
ಮಹಿಳೆಯರ ಲೈಂಗಿಕತೆಯನ್ನು ನಿಯಂತ್ರಿಸುವ ಮೂಲಕ ಜಾತಿ ವ್ಯವಸ್ಥೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಲಾಗುತ್ತದೆ ಎಂಬುದು ಈ ಕೃತಿಯ ಒಳನೋಟಗಳಲ್ಲಿ ಒಂದು
–ಧಮ್ಮ ಸಂಘಿನಿ ರಮಾಘೋರಕ್‌, ಅಧ್ಯಕ್ಷೆ ರಿಪಬ್ಲಿಕನ್‌ ಆರ್‌ಎಎಂಐಎ

‘ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾತಿ ಕುರಿತ ಚರ್ಚೆಗಳು, ಏಣಿ–ಶ್ರೇಣಿ, ಶುದ್ಧ–ಅಶುದ್ಧ ಎಂಬ ಸಂಕಥನಗಳನ್ನೇ ಸುತ್ತುತ್ತವೆಯೇ ಹೊರತು, ಅದರೊಳಗೆ ಸ್ತ್ರೀವಾದವನ್ನು ಹುಡುಕುವುದಿಲ್ಲ. ಮಹಿಳಾ ಅಧ್ಯಯನ ಕೇಂದ್ರಗಳಲ್ಲಿ ನಡೆಯುವ ಚರ್ಚೆ–ಸಂವಾದ–ಜಿಜ್ಞಾಸೆಗಳು ಸ್ತ್ರೀವಾದದ ಸುತ್ತ ಇರುತ್ತದೆಯೇ ಹೊರತು, ಅವುಗಳಲ್ಲಿ ದಲಿತ ಪ್ರಶ್ನೆ ಎದುರಾಗುವುದಿಲ್ಲ’ ಎಂದರು.

‘ಕನ್ನಡದ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. 90ರ ದಶಕದ ನಂತರ ಅಲ್ಲೊಬ್ಬರು, ಇಲ್ಲೊಬ್ಬರು ಸ್ತ್ರೀವಾದದಲ್ಲೂ ದಲಿತ ಪ್ರಶ್ನೆಯನ್ನು ಗಟ್ಟಿಯಾಗಿ ಎತ್ತಿದರಷ್ಟೇ. ಉಳಿದೆಲ್ಲಾ ಸಂದರ್ಭದಲ್ಲೂ ಸ್ತ್ರೀವಾದ ಎಂಬುದು ಜಾತಿರಹಿತ ಪರಿಕಲ್ಪನೆಯಾಗಿಯಷ್ಟೇ ಇತ್ತು’ ಎಂದರು.

ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ ಮಾತನಾಡಿ, ‘ಬ್ರಾಹ್ಮಣ ಪುರುಷರೂ ದಲಿತರನ್ನು ಶೋಷಿಸುತ್ತಾರೆ, ಬ್ರಾಹ್ಮಣ ಮಹಿಳೆಯರೂ ದಲಿತರನ್ನು ದೂಷಿಸುತ್ತಾರೆ. ಆದರೆ, ಬ್ರಾಹ್ಮಣರಲ್ಲೇ ಮಹಿಳೆಯರು ಎದುರಿಸುವ ಶೋಷಣೆಯನ್ನು ದಲಿತರು ಹೇಗೆ ನೋಡಬೇಕು. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಅದು ನಾವು ನಮ್ಮ ಸಮುದಾಯಗಳ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬಲ್ಲಿಗೆ ಬಂದು ನಿಲ್ಲುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.