ಬೆಂಗಳೂರು/ ಆನೇಕಲ್: ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರವಾಗಿದ್ದ ಮೂರೂವರೆ ವರ್ಷದ ಜಿರಾಫೆ ‘ಯದುನಂದನ’ ಭಾನುವಾರ ದಾರುಣ ಅಂತ್ಯ ಕಂಡಿದೆ.
11 ಅಡಿ ಎತ್ತರದ ಯದುನಂದನ ಆಹಾರ ತಿನ್ನಲು ಕುತ್ತಿಗೆ ಹೊರಚಾಚಿದಾಗ ಉದ್ಯಾನ ಆವರಣದ ತಂತಿಗೆ ಸಿಲುಕಿ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಬೇಗನೇ ಉಸಿರುಗಟ್ಟಿ ಕೊನೆಯುಸಿರೆಳೆಯಿತು ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ ಹೆಣ್ಣು ಜಿರಾಫೆ ಗೌರಿಯನ್ನು 2018ರಲ್ಲಿ ತರಲಾಗಿತ್ತು. ಅದು ಏಕಾಂಗಿ ಆಗುತ್ತದೆ ಎಂಬ ಕಾರಣಕ್ಕೆ 2020ರ ಏಪ್ರಿಲ್ 25ರಂದುಯದುನಂದನನ್ನು ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದಲೇ ತರಲಾಗಿತ್ತು. ಇದೀಗ ಮತ್ತೆ ಗೌರಿ ಏಕಾಂಗಿಯಾಗಿದೆ. ಭಾನುವಾರವಾಗಿದ್ದರಿಂದ ಉದ್ಯಾನದಲ್ಲಿ ಜನಸಂದಣೆ ಇತ್ತು. ಪ್ರಾಣಿಗಳನ್ನು ನೋಡಿಕೊಳ್ಳುವವರು ಸಾರ್ವಜನಿಕರನ್ನು ನಿರ್ವಹಿಸುವಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಜಿರಾಫೆ ಚಿಕಿತ್ಸಾ ವಲಯದ ತಂತಿ ಬೇಲಿಯೊಳಗೆ ಕುತೂಹಲದಿಂದ ತಲೆ ತೂರಿಸಿದಾಗ ಕೋಡುಗಳು ಸಿಕ್ಕಿ ಹಾಕಿಕೊಂಡವು. ಇದರಿಂದ ಗಾಬರಿಗೊಂಡ ಯದುನಂದನ ಬಿಡಿಸಿಕೊಳ್ಳಲು ಎಳೆದಾಟ ನಡೆಸಿತು. ಎಳೆದಾಟದಿಂದ ಕುತ್ತಿಗೆಗೆ ಗಾಯಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದರು.
‘ಜಿರಾಫೆ ಯದುನಂದನ ಸಾವು ಒಂದು ದುರಂತವಾಗಿದೆ. ಉದ್ಯಾನದ ಆವರಣದಲ್ಲಿ ಓಡಾಡುವ ಸಂದರ್ಭದಲ್ಲಿ ರಕ್ಷಣೆಗಾಗಿ ಇಡಲಾಗಿದ್ದ ದಪ್ಪ ತಂತಿಗೆ ಜಿರಾಫೆಯ ಕೊಡು ಸಿಲುಕಿಕೊಂಡಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿಕೊಂಡಿತು’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯ ಡಾ.ಉಮಾಶಂಕರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕುತ್ತಿಗೆ ಸಿಕ್ಕಿಕೊಂಡ ವಿಷಯ ತಿಳಿಸಿದ ತಕ್ಷಣವೇ ಪಶು ವೈದ್ಯರು ಮತ್ತು ಪ್ರಾಣಿಗಳ ಪಾಲಕರು ಧಾವಿಸಿ, ಯದುನಂದನ ನನ್ನು ಉಳಿಸುವ ಪ್ರಯತ್ನ ನಡೆಸಲಾಯಿತು. ದುರಾದೃಷ್ಟ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.