ಬದುಕಿನ ಚೆಲುವು, ಸಂಭ್ರಮ, ಅರ್ಥಪೂರ್ಣತೆಯ ಸಾಕಾರರೂಪ ಯಾವುದು? ಈ ಪ್ರಶ್ನೆಗೆ ಉತ್ತರ ರೂಪದಂತೆ ಇದ್ದವರು ಗಿರೀಶ ಕಾರ್ನಾಡ. ಹೂ–ಹಣ್ಣು, ಹಕ್ಕಿಗೂಡು–ಹಾಡುಗಳಿಂದ ನಳನಳಿಸುತ್ತಿದ್ದ ಮರವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾದಂತೆ ಕಾರ್ನಾಡರು ನಿರ್ಗಮಿಸಿದ್ದಾರೆ. ನಾಟಕ, ಸಿನಿಮಾ, ನಟನೆ, ಬರವಣಿಗೆ – ಎಷ್ಟೊಂದು ಸಂಭ್ರಮ, ಎಷ್ಟೊಂದು ನಿರ್ವಾತ.
ಇದನ್ನೂ ಓದಿ:ಕಾರ್ನಾಡರ ಜತೆಗಿನ ‘ಆ ದಿನಗಳು’
ಬದುಕಿರುವುದೇ ಸಂಭ್ರಮಿಸಲಿಕ್ಕಾಗಿ ಎನ್ನುವಷ್ಟು ವರ್ಣರಂಜಿತವಾಗಿ ಬದುಕಿದವರು ಅವರು. ಶರೀರ, ಶಾರೀರ, ಉಡುಪು, ಹುಡುಕಾಟ, ನಟನೆ – ಎಲ್ಲದರಲ್ಲೂ ಶಾಪಗ್ರಸ್ತ ಗಂಧರ್ವನಂತೆ ಕಾಣಿಸುತ್ತಿದ್ದ ಅವರು, ಬದುಕನ್ನು ಅತೀವವಾಗಿ ಪ್ರೀತಿಸಿದ, ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಂಡಿದ್ದ ವ್ಯಕ್ತಿ. ಆ ಕಾರಣದಿಂದಲೇ ಅವರಿಗೆ ಹೆಚ್ಚಿನ ಗೆಳೆಯರಿರಲಿಲ್ಲ, ಹೊಗಳುಭಟರನ್ನಂತೂ ಅವರು ಹತ್ತಿರ ಸೇರಿಸುತ್ತಿರಲಿಲ್ಲ.
ಬದುಕಿನ ಸಂಭ್ರಮದಲ್ಲಿ ಮುಳುಗಿದ ಬಹುತೇಕರು ವರ್ತಮಾನದ ಬಿಕ್ಕಟ್ಟುಗಳಿಂದ ದೂರವಿರುವುದು ಹೆಚ್ಚು. ಕಾರ್ನಾಡರು ಹಾಗಲ್ಲ. ತನ್ನ ದೇಶದ ‘ಬಹುತ್ವ’ದ ಚಹರೆಗೆ ಧಕ್ಕೆಯುಂಟಾಗುತ್ತಿದೆ ಎನ್ನಿಸಿದಾಗ ಬಯಲಿಗೆ ಬಂದು ಟೀಕಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತಿದವರ ಕೊಲೆ ನಡೆದಾಗ, ‘ಅರ್ಬನ್ ನಕ್ಸಲ್; ನಾನು ಕೂಡ’ ಎನ್ನುವ ಬರಹವನ್ನು ಕೊರಳಲ್ಲಿ ತಗಲಿಸಿಕೊಂಡು ಪ್ರತಿಭಟಿಸಿದರು. ದತ್ತಪೀಠ ಆಂದೋಲನದಲ್ಲಿ ಪೊಲೀಸ್ ಬಂಧನಕ್ಕೂ ಒಳಗಾಗಿದ್ದರು. ಈ ಟೀಕೆ–ಪ್ರತಿಭಟನೆಗಳ ಕಾರಣದಿಂದಾಗಿ ಒಂದು ವಲಯದ ವಿರೋಧ, ಹೀಗಳಿಕೆಗೂ ಗುರಿಯಾದರು. ಆದರೆ, ಕಾರ್ನಾಡರ ನಿಲುವು ಮಾತ್ರ ಅಚಲವಾಗಿತ್ತು.
ಇದನ್ನೂ ಓದಿ:ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ
2018ರ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ನಾಡರ ಸಾಂಸ್ಕೃತಿಕ ಬದ್ಧತೆಗೊಂದು ಉದಾಹರಣೆ. ಕನ್ನಡಿಗರಿಗೆ ಅಷ್ಟೇನೂ ಪರಿಚಿತವಲ್ಲದ ಆದಿಲಶಾಹಿ ಸಾಹಿತ್ಯವನ್ನು ಪರಿಚಯಿಸಲಿಕ್ಕೆಂದೇ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಆಮ್ಲಜನಕ ಪೂರೈಸುವ ಯಂತ್ರವನ್ನು ಕುತ್ತಿಗೆಗೆ ತೂಗುಹಾಕಿಕೊಂಡು ಬಂದಿದ್ದ ಅವರು ಅನೇಕರಿಗೆ ಅಚ್ಚರಿಯಂತೆ ಕಾಣಿಸಿದರು. ಯಂತ್ರದ ಬಗ್ಗೆ ಪ್ರಶ್ನೆ ಎದುರಾದಾಗ – ‘ನನ್ನ ಎರಡು ಪುಪ್ಪುಸಗಳು ಅಗತ್ಯವಿದ್ದಷ್ಟು ಆಮ್ಲಜನಕ ಪೂರೈಸುತ್ತಿಲ್ಲ. ಹಾಗಾಗಿ ಯಂತ್ರದ ರೂಪದಲ್ಲಿ ಮೂರನೇ ಪುಪ್ಪುಸವನ್ನು ಕಟ್ಟಿಕೊಂಡು ಓಡಾಡಬೇಕಿದೆ. ನಾನಿಲ್ಲಿಗೆ ಬರಲಿಕ್ಕೆ ಸಾಧ್ಯವಾದುದೇ ಇದರ ಸಹಾಯದಿಂದಾಗಿ. ವೈದ್ಯಕೀಯ ಸವಲತ್ತಿನ ಸಂಗತಿ ಎಲ್ಲರಿಗೂ ತಿಳಿಯಲಿ ಎನ್ನುವ ಕಾರಣಕ್ಕಾಗಿ ಈ ವಿಷಯ ಹೇಳುತ್ತಿರುವೆ’ ಎಂದಿದ್ದರು. ಆ ಉತ್ಸಾಹ–ಬದ್ಧತೆ ಕೂಡ ಅವರ ಜೀವನಪ್ರೀತಿಯ ದ್ಯೋತಕದಂತಿತ್ತು.
ಮಾನವೀಯ ಕಥನಗಳು: ‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ. ಸುಲ್ತಾನರಿಗೂ ಇರತದೆ. ಪ್ರಜೆಗಳಿಗೂ ಇರತದೆ’ – ಕಾರ್ನಾಡರ ಇತ್ತೀಚಿನ ನಾಟಕ ‘ರಾಕ್ಷಸ–ತಂಗಡಿ’ಯ ಈ ಸಾಲು ಅವರ ಒಟ್ಟಾರೆ ಬರವಣಿಗೆಗೂ ಸಂಬಂಧಿಸಿದ್ದು.
ಯುದ್ಧದ ಭ್ರಾಂತಿ, ಮತ–ಧರ್ಮಗಳ ಭ್ರಾಂತಿ, ಕ್ರಾಂತಿಯ ಭ್ರಾಂತಿ – ಹೀಗೆ ಪುರಾಣ, ಇತಿಹಾಸ, ವರ್ತ
ಮಾನದ ಹಲಬಗೆಯ ಭ್ರಾಂತಿಗಳಿಗೆ ಮುಖಾಮುಖಿಯಾದ ಅವರು, ಅಂತಿಮವಾಗಿ ಸಹೃದಯರ ಮುಂದಿ ಟ್ಟಿದ್ದು ಬದುಕಿನ ಚೆಲುವನ್ನು, ಮಾನವೀಯತೆಯ ಘನತೆಯನ್ನು. ‘ರಾಕ್ಷಸ–ತಂಗಡಿ’ ನಾಟಕವನ್ನೇ ನೋಡಿ: ರಕ್ಕಸತಂಗಡಿ ಅಥವಾ ತಾಳೀಕೋಟೆ ಕದನವನ್ನು ಹಿಂದೂ ಮುಸ್ಲಿಂ ಯುದ್ಧಕ್ಕಿಂತಲೂ ಮಿಗಿಲಾಗಿ ಮಾನವೀಯ ಸಂಘರ್ಷದ ಕಥನವಾಗಿ ಕಾರ್ನಾಡರು ಕಂಡಿದ್ದಾರೆ. ಯುದ್ಧದ ನಿರರ್ಥಕತೆಯನ್ನೂ ಮತ–ಧರ್ಮಗಳ ಶ್ರೇಷ್ಠತೆಯ ಭ್ರಾಂತಿಯನ್ನೂ ಕಾವ್ಯದ ರೂಪದಲ್ಲಿ ಚಿತ್ರಿಸುವ ಕೃತಿ, ಸಮಕಾಲೀನ ಸಂದರ್ಭ ಕೂಡ ಇಂತಹುದೇ ಭ್ರಾಂತಿಯಲ್ಲಿ ಮುಳುಗಿದೆ ಎನ್ನುವ ಸೂಚನೆಯನ್ನು ನೀಡುತ್ತದೆ.
ಒಲಿಸಿಕೊಂಡಂತೆಲ್ಲ ವಿಭಿನ್ನ ಅರ್ಥ ಗಳನ್ನು ಬಿಟ್ಟುಕೊಡುವ ಕಾವ್ಯದಂತೆ ಕಾರ್ನಾಡರ ನಾಟಕಗಳು ಪ್ರತಿ ಓದಿಗೂ, ನೋಡುವಿಕೆಗೂ ಅರ್ಥಗಳನ್ನು ಬಿಟ್ಟುಕೊಡುವ ಗುಣವುಳ್ಳವು. ತಮ್ಮ ನಾಟಕಗಳಿ ಗಾಗಿ ಪುರಾಣ, ಜಾನಪದದಿಂದ ವಸ್ತುಗಳನ್ನು ಪಡೆದರೂ, ಚರಿತ್ರೆಯ ಬಗ್ಗೆ ಅವರಿಗೆ ವಿಶೇಷ ಒಲವಿತ್ತು. ಈ ನಿಟ್ಟಿನಲ್ಲಿ ಅವರ ‘ತಲೆದಂಡ’, ‘ಟಿಪೂ ಸುಲ್ತಾನ ಕಂಡ ಕನಸು’ ಹಾಗೂ ‘ರಾಕ್ಷಸ–ತಂಗಡಿ’ ನಾಟಕಗಳನ್ನು ಗಮನಿಸಬಹುದು. ಕಳೆದ ಸಾವಿರ ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ಅವರು ಮೂರು ಪ್ರಮುಖ ಘಟನೆಗಳನ್ನು ಗುರ್ತಿಸುತ್ತಾರೆ. ಹನ್ನೆರಡನೇ ಶತಮಾನದ ವಚನ ಕ್ರಾಂತಿ, 16ನೇ ಶತಮಾನದ ವಿಜಯನಗರ ಯುಗ ಹಾಗೂ 18ನೇ ಶತಮಾನದ ಟಿಪೂ ಸುಲ್ತಾನನ ರಾಜಕಾರಣ – ಈ ಮೂರೂ ಯುಗಗಳನ್ನು ಕರ್ನಾಟಕ ಅಪೂರ್ವ ಸ್ವಂತಿಕೆ ಕಂಡ ಯುಗಗಳೆಂದೂ ಹಿಂಸೆಯಲ್ಲಿ ಕೊನೆ ಗೊಂಡ ಯುಗಗಳೆಂದೂ ಗುರ್ತಿಸುವ ಕಾರ್ನಾಡರು, ಆ ಕಾಲಘಟ್ಟಗಳಿಗೆ ಪ್ರತಿಕ್ರಿಯೆ ರೂಪದಲ್ಲಿ ಮೂರು ನಾಟಕಗಳನ್ನು ಬರೆದದ್ದು ಕನ್ನಡ ಸಾಹಿತ್ಯ ಚರಿತ್ರೆಯ ಮಹತ್ವಪೂರ್ಣ ಘಟನೆಗಳಲ್ಲೊಂದು.
ದ್ವಂದ್ವಗಳಿಲ್ಲದ ಬದುಕು: ಕಾರ್ನಾಡ ರದು ದ್ವಂದ್ವಗಳಿಲ್ಲದ ಬದುಕು. ಸಾಗಿಬಂದ ಹಾದಿಯ ಬಗ್ಗೆ ಅವರಿಗೆ ವಿಷಾದವಿರಲಿಲ್ಲ, ಸಾಗುವ ಮಾರ್ಗದ ಬಗ್ಗೆ ಗೊಂದಲಗಳೂ ಇರಲಿಲ್ಲ. ಕನ್ನಡದ ಅತ್ಯುತ್ತಮ ಆತ್ಮಕಥನಗಳಲ್ಲಿ ಒಂದಾದ ‘ಆಡಾಡತ ಆಯುಷ್ಯ’ ಕೃತಿ ಲೇಖಕನಾಗಿ–ವ್ಯಕ್ತಿಯಾಗಿ ಕಾರ್ನಾಡರ ದ್ವಂದ್ವಗಳಿಲ್ಲದ ಬದುಕಿಗೆ ಉದಾಹರಣೆ. ಥಾಯ್ಲೆಂಡಿನಲ್ಲಿ ತರುಣಿಯೊಬ್ಬಳಿಂದ ಮಸಾಜ್ ಮಾಡಿಸಿಕೊಂಡಿದ್ದನ್ನು ಸೋಗಿಲ್ಲದೆ ಹೇಳುವುದು ಅವರಿಗೆ ಸಾಧ್ಯವಿತ್ತು. ಸಿನಿಮಾದಲ್ಲಿ ನಟಿಸುವುದು ಹೊಟ್ಟೆಪಾಡು, ಸಾಹಿತ್ಯ ಆತ್ಮತೃಪ್ತಿಗಾಗಿ ಎನ್ನುವ ಸ್ಪಷ್ಟತೆ ಅವರಿಗಿತ್ತು. ಒಳ್ಳೆಯ ಇಂಗ್ಲಿಷ್ ಹೊಂದಿದ್ದೂ, ರಾಷ್ಟ್ರೀಯ–ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿದ್ದರೂ ಕೊನೆತನಕವೂ ‘ಕನ್ನಡ ಲೇಖಕ’ನಾಗಿಯೇ ಉಳಿದರು. ಧಾರವಾಡದ ‘ಮನೋಹರ ಗ್ರಂಥ ಮಾಲಾ’ದ ಅಟ್ಟದಿಂದ ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿ ಕೊಂಡರು. ‘ನೆಲದಲ್ಲಿ ಬೇರು ಬಿಟ್ಟು ಆಕಾಶದಲ್ಲಿ ರೆಕ್ಕೆ ಬಿಚ್ಚಬೇಕು’ ಎನ್ನುವದು ಅವರದೇ ಮಾತು.
ಕಾರ್ನಾಡರ ನಾಟಕಗಳ ಬಗ್ಗೆ ಮಾತನಾಡುವಾಗ ‘ಬೆಳಕಿಲ್ಲದ ದಾರಿ ಯಲ್ಲಿ ನಡೆಯಬಹುದು; ಕನಸುಗಳೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ?’ ಎನ್ನುವ ‘ಯಯಾತಿ’ ನಾಟಕದ ಸಂಭಾಷಣೆ ಮತ್ತೆ ಮತ್ತೆ ಉಲ್ಲೇಖಗೊಳ್ಳುತ್ತದೆ. ಈ ಮಾತನ್ನು ಅವರ ಸಾವಿನ ಸಂದರ್ಭದಲ್ಲೂ ನೆನಪಿಸಿಕೊಳ್ಳಬೇಕು. ಕನಸುಗಳನ್ನು ಬೆನ್ನತ್ತಿ ಕಾರ್ನಾಡರು ನಿರಂತರವಾಗಿ ನಡೆದರು. ಈಗ ಪಯಣ ಕೊನೆಗೊಂಡಿದೆ. ಸಾವನ್ನು ಬೆಳಕೆನ್ನುವುದಾದರೆ ಸ್ವತಃ ಕಾರ್ನಾಡರು ಬೆಳಕಾಗಿ ಪರಿಣಮಿಸಿದ್ದಾರೆ. ಕನಸುಗಳನ್ನು ನಾವೇ ಕಂಡುಕೊಳ್ಳಬೇಕು.
ರಂಗಭೂಮಿ–ಸಿನಿಮಾದ ನಂಟು
ಮಹಾರಾಷ್ಟ್ರದ ಮಥೇರಾನ್ ಕಾರ್ನಾಡರ ಜನ್ಮಸ್ಥಳ (ಜನನ: ಮೇ 19, 1938). ತಾಯಿ ಕೃಷ್ಣಾಬಾಯಿ. ಹತ್ತೊಂಬತ್ತರ ಹರಯದಲ್ಲಿ ಗಂಡನನ್ನು ಕಳೆದುಕೊಂಡ ಕೃಷ್ಣಾಬಾಯಿ, ಹತ್ತು ವರ್ಷಗಳ ನಂತರ ರಘುನಾಥ ಕಾರ್ನಾಡರನ್ನು ಮದುವೆಯಾದರು. ಈ ದಂಪತಿಯ ಕಿರಿಯ ಪುತ್ರ ಗಿರೀಶ ಕಾರ್ನಾಡ. ಅರ್ಧ ಮರಾಠಿ – ಅರ್ಧ ಕನ್ನಡ ಪರಿಸರದಲ್ಲಿ ಅವರ ಬಾಲ್ಯ ಸುಪುಷ್ಟಗೊಂಡಿತು. ಅಮ್ಮನ ವ್ಯಕ್ತಿತ್ವದ ಗಟ್ಟಿತನ ಮಗನಿಗೂ ಬಂತು.
ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ. ಹೈಸ್ಕೂಲಿನಿಂದ ಪದವಿಯವರೆಗೆ ಧಾರವಾಡದಲ್ಲಿ ಕಲಿಕೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ. ಭಾರತಕ್ಕೆ ಹಿಂದಿರುಗಿದ ಮೇಲೆ ಮದ್ರಾಸಿನ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಮ್ಯಾನೇಜರ್, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ. ರಾಜ್ಯ–ರಾಷ್ಟ್ರಮಟ್ಟದಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಹೆಗ್ಗಳಿಕೆ ಅವರದು.
ರಂಗಭೂಮಿ ಕಾರ್ನಾಡರಿಗೆ ಬಾಲ್ಯದಿಂದಲೇ ಜೊತೆಯಾದ ಆಪ್ತಸಖ. ಸಂಚಾರಿ ನಾಟಕ ಕಂಪನಿಗಳ ನಾಟಕಗಳು ಹಾಗೂ ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಅಪ್ಪನ ಜೊತೆ ಹೋಗುತ್ತಿದ್ದ ಅವರೊಳಗೆ ನಾಟಕದ ಕಥೆ–ಪದಗಳು ಬಾಲ್ಯದಲ್ಲೇ ಮೊಳೆಯತೊಡಗಿರಬೇಕು. ಆಧುನಿಕ ರಂಗಭೂಮಿಯನ್ನು ಮುಂಬಯಿ ಪರಿಚಯಿಸಿತು. ಮದ್ರಾಸ್‌ನಲ್ಲಿದ್ದಾಗ ಅಲ್ಲಿನ ಹವ್ಯಾಸಿ ರಂಗತಂಡಗಳೊಂದಿಗೆ ನಟನಾಗಿ, ನಿರ್ದೇಶಕನಾಗಿ ನಿಕಟ ಸಂಪರ್ಕ ಹೊಂದಿದ್ದರು.
ಕನ್ನಡಕ್ಕೆ ಮೊದಲ ‘ಸ್ವರ್ಣಕಮಲ’ ಪುರಸ್ಕಾರ ತಂದುಕೊಟ್ಟ ‘ಸಂಸ್ಕಾರ’ದ ಪ್ರಾಣೇಶಾಚಾರ್ಯನ ಪಾತ್ರ ನಿರ್ವಹಣೆ ಗಿರೀಶರಿಗೆ ಸಿನಿಮಾದ ರುಚಿ ಹತ್ತಿಸಿತು. ನಂತರದ ಪ್ರಯೋಗ ಎಸ್.ಎಲ್. ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ರೂಪಾಂತರಿಸಿದ್ದು. ಬಿ.ವಿ. ಕಾರಂತರೊಂದಿಗೆ ಸೇರಿ ಚಿತ್ರ ನಿರ್ದೇಶಿಸಿ, ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು. ‘ಕಾಡು’, ‘ಒಂದಾನೊಂದು ಕಾಲದಲ್ಲಿ’, ‘ ತಬ್ಬಲಿಯು ನೀನಾದೆ ಮಗನೆ’, ‘ಕಾನೂರು ಹೆಗ್ಗಡಿತಿ’ ಚಿತ್ರಗಳು ನಿರ್ದೇಶಕರಾಗಿ ಹೆಸರು ತಂದುಕೊಟ್ಟವು. ಬೇಂದ್ರೆ ಬಗೆಗಿನ ಸಾಕ್ಷ್ಯಚಿತ್ರ ಗಿರೀಶರ ದೃಶ್ಯಮಾಧ್ಯಮದ ಸಾಧನೆಗಳಲ್ಲೊಂದು.
‘ಉತ್ಸವ್’ ಹಾಗೂ ‘ಚೆಲುವಿ’ ಅವರ ನಿರ್ದೇಶನದ ಹಿಂದಿ ಚಿತ್ರಗಳು. ‘ಕನಕ–ಪುರಂದರ’ ಇಂಗ್ಲಿಷ್ ಸಾಕ್ಷ್ಯಚಿತ್ರ ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ವರ್ಣಕಮಲ ಪಡೆದಿದೆ. ನಟನಾಗಿ ಅವರು ಕಿರುತೆರೆ, ಬೆಳ್ಳಿತೆರೆಯ ಅನೇಕ ಪಾತ್ರಗಳಿಗೆ ಜೀವತುಂಬಿದ್ದಾರೆ. ‘ಆನಂದಭೈರವಿ’ ಚಿತ್ರದಲ್ಲಿನ ನೃತ್ಯಗುರುವಿನ ಪಾತ್ರದಲ್ಲಿನ ಅಭಿನಯ ಚಿತ್ರರಸಿಕರ ಮನಸ್ಸಿನಲ್ಲಿ ಈಗಲೂ ಹಸುರು.
ಕಾರ್ನಾಡರ ಪ್ರತಿಭೆ ಪ್ರಖರವಾಗಿ ಹೊರಹೊಮ್ಮಿರುವುದು ರಂಗಕೃತಿಗಳ ರಚನೆಯಲ್ಲಿ. ‘ಯಯಾತಿ’ ಅವರ ಪೂರ್ಣಪ್ರಮಾಣದ ಮೊದಲ ನಾಟಕ. ‘ತುಘಲಕ್’, ‘ಹಯವದನ’, ‘ನಾಗಮಂಡಲ’, ‘ತಲೆದಂಡ’, ‘ಅಗ್ನಿ ಮತ್ತು ಮಳೆ’, ‘ಅಂಜುಮಲ್ಲಿಗೆ’, ‘ಹಿಟ್ಟಿನ ಹುಂಜ’, ‘ಟಿಪೂ ಸುಲ್ತಾನ ಕಂಡ ಕನಸು’, ‘ಒಡಕಲು ಬಿಂಬ’, ‘ಮದುವೆಯ ಆಲ್ಬಮ್’, ‘ಬೆಂದ ಕಾಳು ಆನ್ ಟೋಸ್ಟ್’, ‘ರಾಕ್ಷಸ–ತಂಗಡಿ’ ಅವರ ಪ್ರಖ್ಯಾತ ನಾಟಕಗಳು. ನಾಟಕಗಳನ್ನು ಓದಿಯೂ ಸುಖಿಸಬಹುದು ಎನ್ನುವುದನ್ನು ಕನ್ನಡ ಓದುಗರ ಅನುಭವಕ್ಕೆ ತಂದುಕೊಟ್ಟವರು ಕಾರ್ನಾಡರು.
ಪದ್ಮಭೂಷಣ, ಜ್ಞಾನಪೀಠ, ಸಂಗೀತ ನಾಟಕ ಅಕಾಡೆಮಿಯ ‘ಫೆಲೊ’, ಗುಬ್ಬಿವೀರಣ್ಣ, ಕಾಳಿದಾಸ ಸಮ್ಮಾನ್ ಸೇರಿದಂತೆ ಹಲವು ಗೌರವ–ಪುರಸ್ಕಾರಗಳು ಕಾರ್ನಾಡರ ಸಾಧನೆಗೆ ಸಂದಿವೆ. ಪ್ರಶಸ್ತಿ ದೊರೆತವರು ಗತ್ತನ್ನೂ, ದೊರೆಯದವರು ಕೊರಗನ್ನೂ ತಲೆಯ ಮೇಲೆ ಹೊತ್ತುಕೊಂಡಿರುವ ಕಾಲದಲ್ಲಿ, ತಮಗೆ ದೊರೆತ ಜ್ಞಾನಪೀಠ ಪ್ರಶಸ್ತಿಯ ಪ್ರಭಾವಳಿಯಿಂದ ಕಾರ್ನಾಡರು ದೂರವಾಗಿದ್ದುದು ಕೂಡ ವಿಶೇಷ ಸಂಗತಿಯೇ. ಪ್ರಶಸ್ತಿಗಳ ಆಧಾರದಲ್ಲಿ ನಡೆಯುವ ಸಾಹಿತ್ಯಿಕ ಮೌಲ್ಯಮಾಪನವನ್ನು ಅವರು ವಿರೋಧಿಸುತ್ತಿದ್ದರು. ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಬಾರದೆನ್ನುವ ಕೊನೆಯಾಸೆ ಕೂಡ ಅವರು ದಂತಗೋಪುರದ ಸಾಹಿತಿಯಾಗಿರಲಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ
ಸಂಪುಟ ವಿಸ್ತರಣೆ ಇದೇ 14ಕ್ಕೆ
ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಂಪುಟ ವಿಸ್ತರಣೆ ಇದೇ 14ರಂದು ಮಧ್ಯಾಹ್ನ ಗಂಟೆಗೆ ನಡೆಯಲಿದೆ. ಪೂರ್ವನಿಗದಿಯಂತೆ ಇದೇ 12ರಂದು ವಿಸ್ತರಣೆ ನಡೆಯಬೇಕಿತ್ತು. ಕಾರ್ನಾಡರ ನಿಧನದ ಗೌರವಾರ್ಥ ಮೂರು ದಿನ ಸರ್ಕಾರ ಶೋಕಾಚರಣೆ ಘೋಷಿಸಿದೆ. ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಎಚ್.ನಾಗೇಶ್ ಸಂಪುಟ ಸೇರುವುದು ಖಚಿತ. ಇನ್ನೊಂದು ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ ನಾಯಕರು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.