ADVERTISEMENT

ಗೋಮಾಂಸ ಬೆಂಬಲಿಸಿ ಹಿಟ್‌ಲಿಸ್ಟ್ ಸೇರಿದ್ದರು ಕಾರ್ನಾಡ!

ಎಂ.ಸಿ.ಮಂಜುನಾಥ
Published 10 ಜೂನ್ 2019, 20:03 IST
Last Updated 10 ಜೂನ್ 2019, 20:03 IST
‘ನಾನೂ ನಗರ ನಕ್ಸಲ್’ ಫಲಕ ಹಾಕಿದ್ದ ಗಿರೀಶ ಕಾರ್ನಾಡ
‘ನಾನೂ ನಗರ ನಕ್ಸಲ್’ ಫಲಕ ಹಾಕಿದ್ದ ಗಿರೀಶ ಕಾರ್ನಾಡ   

ಹಾವೇರಿ: ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ 2015ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾಹಿತಿ ಗಿರೀಶ ಕಾರ್ನಾಡ, ವಿವಿಧ ಸಂಘಟನೆಗಳ ಕಾರ್ಯಕರ್ತರಿಗೆ ಗೋಮಾಂಸದ ಖಾದ್ಯ ತಿನ್ನಿಸುವ ಮೂಲಕ ಸನಾತನ ಸಂಸ್ಥೆ ಹಾಗೂ ಕೆಲ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೇ ಕಾರಣದಿಂದಾಗಿವಿಚಾರವಾದಿಗಳನ್ನು ಕೊಲ್ಲಲು ಸೃಷ್ಟಿಯಾಗಿದ್ದ ಹಂತಕರ ಜಾಲದ ಹಿಟ್‌ಲಿಸ್ಟ್‌ನಲ್ಲಿ ಕಾರ್ನಾಡರ ಹೆಸರೇಮೊದಲಿತ್ತು.ಅವರ ಹೆಸರನ್ನು ‘ಕಾಕಾ’ ಎಂಬ ಕೋಡ್‌ವರ್ಡ್‌ನಲ್ಲಿ ಬರೆದುಕೊಂಡಿದ್ದ ಜಾಲದ ಸೂತ್ರಧಾರ ಅಮೋಲ್‌ ಕಾಳೆ, ಇಬ್ಬರು ಹುಡುಗರಿಗೆ ಶಸ್ತ್ರಾಸ್ತ್ರ ತರಬೇತಿಯನ್ನೂ ಕೊಟ್ಟಿದ್ದ. ಇದೆಲ್ಲ ಗೊತ್ತಾದ ಮೇಲೂ ಕಾರ್ನಾಡ ಪೊಲೀಸ್ ಭದ್ರತೆ ನಿರಾಕರಿಸಿದ್ದರು. ಅವರ ಹತ್ಯೆಗೆ ತರಬೇತಿ ಪಡೆದಿದ್ದ ಆ ಹುಡಗರಿಬ್ಬರೂ ಈಗ ಎಸ್‌ಐಟಿ ಪೊಲೀಸರ ವಶದಲ್ಲೇ ಇದ್ದಾರೆ.

ADVERTISEMENT

ಅತೀವ ಸಿಟ್ಟು ಏಕೆ?: 2015ರ ಏ.9ರಂದು ಡಿವೈಎಫ್‌ಐ ಕಾರ್ಯಕರ್ತರು, ‘ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ ಬನ್ನಿ’ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ, ಸಾಂಕೇತಿವಾಗಿ ದನದ ಮಾಂಸ ಖಾದ್ಯದ ಲಘು ಭೋಜನ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದ ಕಾರ್ನಾಡ, ‘ಪ್ರತಿಯೊಬ್ಬರಿಗೂ ಯಾವುದೇ ಆಹಾರ ಸೇವಿಸುವ ಹಕ್ಕಿದೆ. ಆದರೆ,ಕೇಂದ್ರ ಸರ್ಕಾರ ಆಹಾರ ಸಂಸ್ಕೃತಿಯ ಮೇಲೆ ದೌರ್ಜನ್ಯ ಮಾಡುತ್ತಿದೆ’ ಎಂದು ಹೇಳಿ, ಹಲವರಿಗೆ ಗೋಮಾಂಸದ ಕಬಾಬ್ ತಿನ್ನಿಸಿದ್ದರು.

‘ಆ ದಿನ ಗೋಮಾಂಸದ ಬಿರಿಯಾನಿ ಇಟ್ಟಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಕಾರ್ನಾಡ ಸೇರಿದಂತೆ ಕೆಲ ಸಾಹಿತಿಗಳು ಹೋಟೆಲ್‌ನಿಂದ ಗೋಮಾಂಸದ ಕಬಾಬ್ ತರಿಸಿ ಎಲ್ಲರಿಗೂ ತಿನ್ನಿಸಿದ್ದರು. ಅದೇ ಕಾರಣದಿಂದ ಕಾರ್ನಾಡರ ಮೇಲೆ ತುಂಬ ಸಿಟ್ಟಿತ್ತು. ಹೀಗಾಗಿ, ಅವರನ್ನೇ ಮೊದಲು ಮುಗಿಸಲು ನಮಗೆ ಜಾಲದ ಮುಖಂಡರಿಂದ ಸೂಚನೆ ಬಂದಿತ್ತು’ ಎಂದು ಆರೋಪಿಗಳ ಪೈಕಿ ಕೆಲವರು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದರು.

ಮನೆಯತ್ತ ಸುತ್ತಾಡಿದ್ದರು: ಗೋಮಾಂಸ ತಿನ್ನಲು ಪ್ರಚೋದನೆ ನೀಡಿದ ಆರೋಪದಡಿ ಕಾರ್ನಾಡ ವಿರುದ್ಧ ಶ್ರೀರಾಮ ಸೇನೆ ಹಾಗೂ ಅಖಿಲ ಭಾರತ ಹಿಂದು ಮಹಾಸಭಾದ ಸದಸ್ಯರು ಪೊಲೀಸರಿಗೆ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ಅವರಿಗೆ ಜೀವಬೆದರಿಕೆ ಕರೆಗಳು ಬರಲಾರಂಭಿಸಿದ್ದರಿಂದ ಪೊಲೀಸರು ಕಾರ್ನಾಡ ಅವರ ನಿವಾಸದ ಬಳಿ ಬಿಗಿ ಭದ್ರತೆ ಒದಗಿಸಿದ್ದರು.

ಈ ನಡುವೆಯೇ ಕಾರ್ನಾಡ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಜಾಲದ ಸದಸ್ಯರು, ಜೆ.ಪಿ.ನಗರದಲ್ಲಿರುವ ಅವರ ಮನೆ ಹಾಗೂ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮಗನ ಫ್ಲ್ಯಾಟ್ ಬಳಿ ಓಡಾಡಿದ್ದರು (ರೆಕ್ಕಿ ಮಾಡಿದ್ದರು). ಆದರೆ, ಪೊಲೀಸ್ ಭದ್ರತೆಯಿದ್ದ ಕಾರಣ ಯೋಜನೆ ಬದಲಿಸಿಕೊಂಡು 2015ರ ಆಗಸ್ಟ್ 31ರಂದು ಎಂ.ಎಂ.ಕಲಬುರ್ಗಿ ಅವರನ್ನು ಕೊಂದಿದ್ದರು. ಎರಡು ವರ್ಷಗಳ ನಂತರ ಗೌರಿ ಲಂಕೇಶ್ ಅವರನ್ನೂ ಕೊಂದ ಹಂತಕರು, ಕಾರ್ನಾಡ ಸೇರಿದಂತೆ ನಾಲ್ವರು ವಿಚಾರವಾದಿಗಳನ್ನು ಒಂದೇ ದಿನ ಮುಗಿಸುವುದಕ್ಕೂ ನಿರ್ಧರಿಸಿದ್ದರು ಎನ್ನಲಾಗಿದೆ.

‘ನಾನೂ ಅರ್ಬನ್ ನಕ್ಸಲ್’ ಎನ್ನುತ್ತಿದ್ದರು

ಸಿಪಿಐ (ಮಾವೊವಾದಿ) ಸಹ ಸಂಘಟನೆಯಾದ ಮಹಾರಾಷ್ಟ್ರದ ‘ಕಬೀರ್ ಕಾಲಾ ಮಂಚ್’ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ನಾಡ ಅವರು ಕೆಲವರ ಕೋಪಕ್ಕೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಗೌರಿ ಹತ್ಯೆ ಖಂಡಿಸಿ 2018ರ ಸೆ.5ರಂದು ನಡೆದಿದ್ದ ‘ಅಭಿವ್ಯಕ್ತಿ ಹತ್ಯೆ ವಿರೋಧ ಸಪ್ತಾಹ’ ಕಾರ್ಯಕ್ರಮದಲ್ಲಿ ‘ನಾನೂ ಒಬ್ಬ ಅರ್ಬನ್ ನಕ್ಸಲ್’ ಎಂಬ ಫಲಕವನ್ನು ಅವರು ಹಾಕಿಕೊಂಡಿದ್ದೂವಿವಾದಕ್ಕೆ ಕಾರಣವಾಗಿತ್ತು.

ಇವುಗಳನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.