ಬೆಂಗಳೂರು: ಹದಿನೇಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಲು ನ್ಯಾಯಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ, ಆರೋಪಿಯ ಬಂಧನಕ್ಕೆ ಸಿಐಡಿ ತೀವ್ರ ಶೋಧ ನಡೆಸಿದೆ.
ಯಡಿಯೂರಪ್ಪ ಅವರಿಗೆ ಈ ಪ್ರಕರಣದಲ್ಲಿ ಬಂಧನದ ನೋಟಿಸ್ ನೀಡಿದ್ದ ಸಿಐಡಿ, ಬುಧವಾರ (ಜೂ.12) ಹಾಜರಾಗುವಂತೆ ಸೂಚಿಸಿತ್ತು. ಜೂನ್ 17ರಂದು ಹಾಜರಾಗುವುದಾಗಿ ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದ ಯಡಿಯೂರಪ್ಪ ಗೈರಾಗಿದ್ದರು.
‘ದೆಹಲಿಯತ್ತ ಯಡಿಯೂರಪ್ಪ ಪ್ರಯಾಣ ಬೆಳೆಸಿದ್ದು ಗೊತ್ತಾಗುತ್ತಿದ್ದಂತೆಯೇ ಸಿಐಡಿ ಅಧಿಕಾರಿಗಳ ತಂಡ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು. ದೆಹಲಿಯಲ್ಲಿರುವ ತಮ್ಮ ಮಗ, ಸಂಸದ ಬಿ.ವೈ. ರಾಘವೇಂದ್ರ ಮನೆಯಲ್ಲಿದ್ದ ಯಡಿಯೂರಪ್ಪ, ಗುರುವಾರ ಬೆಳಿಗ್ಗೆಯೇ ಅಲ್ಲಿಂದ ಹೊರಟು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿಂದ ಹೊರಟವರು ನೆರೆ ರಾಜ್ಯಗಳಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಯಡಿಯೂರಪ್ಪ ವಿರುದ್ಧ ಜಾಮೀನುರಹಿತ ಬಂಧನದ ವಾರಂಟ್ ಹೊರಬೀಳುತ್ತಿದ್ದಂತೆ ಎಸ್‌ಪಿ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದ ಪೊಲೀಸರ ತಂಡ ಚುರುಕಾಗಿದೆ. ಕರ್ನಾಟಕ, ದೆಹಲಿ ಹಾಗೂ ಯಡಿಯೂರಪ್ಪ ಹೋಗಿರಬಹುದಾದ ಸ್ಥಳಗಳ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತಿರುವ ತಂಡ, ಬಂಧನಕ್ಕೆ ಶೋಧ ನಡೆಸಿದೆ’ ಎಂದೂ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರನ್ನು ಬಂಧಿಸಲು ಅನುಮತಿ ಕೋರಿದ್ದ ಪ್ರಾಸಿಕ್ಯೂಷನ್ ಮನವಿಯನ್ನು ಮನ್ನಿಸಿರುವ ನಗರದ ವಿಶೇಷ ನ್ಯಾಯಾಲಯ ಅವರ ಸೆರೆಗೆ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಲು ಆದೇಶಿಸಿದೆ.
ಈ ಕುರಿತಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ನಗರದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್.ಎಂ.ರಮೇಶ್ ಗುರುವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ಸುದೀರ್ಘ ವಾದ ಮಂಡಿಸಿ, ‘ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಹಲವು ಕಾನೂನಾತ್ಮಕ ಅಡಚಣೆಗಳಿವೆ. ವಿಚಾರಣೆಗೆ ಕರೆದರೆ ಸಮಯ ಕೋರುತ್ತಿದ್ದಾರೆ. ನೋಟಿಸ್‌ಗಳನ್ನು ಕಡೆಗಣಿಸುತ್ತಿದ್ದಾರೆ. ಈಗಾಗಲೇ ಕೆಲವು ಸಾಕ್ಷ್ಯಗಳನ್ನು ನಾಶ ಮಾಡಿರುವ ಅವರಿಗೆ ಮತ್ತೂ ಸಮಯ ನೀಡಿದರೆ ಇನ್ನುಳಿದ ಸಾಕ್ಷ್ಯಗಳನ್ನೂ ಅಳಿಸಿ ಹಾಕಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ತನಿಖಾಧಿಕಾರಿಗೆ ಅರೆಸ್ಟ್ ಮಾಡೋ ಅಧಿಕಾರ ಇದೆಯಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ಅಶೋಕ್ ನಾಯಕ್, ‘ಘಟನೆ ನಡೆದ ದಿನ ಸಂತ್ರಸ್ತ ಬಾಲಕಿಯ ತಾಯಿಗೆ ₹2 ಲಕ್ಷ ಮೊತ್ತವನ್ನು ಬೇಡ ಎಂದರೂ ಅವರ ಪರ್ಸಿನಲ್ಲಿ ಬಲವಂತದಿಂದ ತುರುಕಿದ್ದಾರೆ. ಹಣ ಕೊಟ್ಟು ಸಂತ್ರಸ್ತೆಯನ್ನು ಖರೀದಿ ಮಾಡುವ ಪ್ರಯತ್ನ ಮಾಡಿದ್ದಾರೆ. ಅಂದಿನ ಮಾತುಕತೆಯ ಕೆಲವು ಗಳಿಗೆಗಳನ್ನು ಬಾಲಕಿಯ ತಾಯಿ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆದರೆ, ಯಡಿಯೂರಪ್ಪ ಅವರು ಅದನ್ನು ಅಳಿಸಿ ಹಾಕಿಸಿದ್ದಾರೆ. ಆದಾಗ್ಯೂ ವಿಡಿಯೊದ ಮೂಲ ರೂಪ ತನಿಖಾಧಿಕಾರಿಗಳ ಬಳಿ ಇದೆ’ ಎಂದರು.
‘ವಾಸ್ತವದಲ್ಲಿ ಸಂತ್ರಸ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆಗಿದೆ ಎಂಬ ಕಾರಣಕ್ಕಾಗಿ ಆಕೆಯ ತಾಯಿ ಕಾನೂನು ನೆರವು ಕೋರಿ ಇವರ ಬಳಿ ಬಂದಿದ್ದರು. ಏನೋ ಮಾಜಿ ಮುಖ್ಯಮಂತ್ರಿ, ನ್ಯಾಯ ಕೇಳೋಣ ಅಂತ ಬಂದ್ರೆ ಇಲ್ಲೂ ಅದೇ ಅನ್ಯಾಯವೇ? ಇವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದವರು. ಇವರನ್ನು ದಸ್ತಗಿರಿ ಮಾಡೋದಕ್ಕೆ ಕಷ್ಟವಿದೆ. ಇವರ ಒಬ್ಬ ಮಗ ಸಂಸದ. ಮತ್ತೊಬ್ಬ ಶಾಸಕ. ಅಷ್ಟೇಕೆ, ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರೂ ಹೌದು. ಇವರನ್ನು ವಿಚಾರಣೆಗೆ ಕರೆಯಿಸಿ ತನಿಖೆ ಪೂರೈಸುವುದೇ ಕಷ್ಟವಾಗಿದೆ’ ಎಂದರು.
‘ಆರೋಪಿಯು ಯಾವುದೇ ಒತ್ತಡ ಮತ್ತು ಬೆದರಿಕೆ ಉಂಟು ಮಾಡಿ ಘಟನೆಯ ಸತ್ಯಾಂಶ ಹೊರಬಾರದ ರೀತಿಯಲ್ಲಿ ನೋಡಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ತಮ್ಮ ರಾಜಕೀಯ ಮತ್ತು ಹಣದ ಬಲದಿಂದ ಕುಟುಂಬದ ಸದಸ್ಯರ ಸ್ಥಾನಮಾನಗಳ ಪ್ರಭಾವದಿಂದ ಕಾನೂನು ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಸಂಭವಗಳಿವೆ. ಏತನ್ಮಧ್ಯೆ, ತನಿಖಾಧಿಕಾರಿಗಳ ಬಳಿ ಅಗತ್ಯ ಸಾಕ್ಷ್ಯಗಳಿವೆ. ಮೇಲ್ನೋಟಕ್ಕೆ ಶೇ 80ರಷ್ಟು ತನಿಖೆ ಈಗಾಗಲೇ ಪೂರ್ಣಗೊಂಡಿದೆ. ಇನ್ನುಳಿದ ದಾಖಲೆಗಳ ಶೋಧ ನಡೆಸಬೇಕಿದ್ದು ಆರೋಪಿಯ ಖುದ್ದು ವಿವರಣೆ ಪಡೆಯಬೇಕಿದೆ’ ಎಂದು ವಿವರಿಸಿದರು.
ಬೆಳಗಿನ ಕಲಾಪದಲ್ಲಿ ವಾದ ಆಲಿಸಿದ್ದ ನ್ಯಾಯಾಧೀಶ ರಮೇಶ್ ಅವರು ಸಂಜೆ 4.30ಕ್ಕೆ ಜಾಮೀನುರಹಿತ ಬಂಧನ ವಾರಂಟ್‌ಗೆ ಅನುಮತಿಸಿ ಆದೇಶ ಪ್ರಕಟಿಸಿದರು. ವಿಚಾರಣೆ ವೇಳೆ ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಜೆ.ಪೃಥ್ವಿ ಹಾಜರಿದ್ದರು.
ಹೈಕೋರ್ಟ್‌ನಲ್ಲಿ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ಶುಕ್ರವಾರ (ಜೂನ್ 14) ಮಧ್ಯಾಹ್ನ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಮುಂದೆ ವಿಚಾರಣೆಗೆ ನಿಗದಿಯಾಗಿದೆ. ಅಂತೆಯೇ ತಮ್ಮ ವಿರುದ್ಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಕೋರಿ ಯಡಿಯೂರಪ್ಪ ಸಲ್ಲಿಸಿರುವ ಮತ್ತೊಂದು ಅರ್ಜಿಯೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.
‘ಸಿಐಡಿ ಕೊಟ್ಟಿರುವ ನೋಟಿಸ್‌ಗೆ ಇದೇ 17ರವರೆಗೆ ಕಾಲಾವಕಾಶ ಕೇಳಿರುವ ಆರೋಪಿ ಯಡಿಯೂರಪ್ಪನವರ ಕೋರಿಕೆ ಪ್ರಾಮಾಣಿಕವಾಗಿಲ್ಲ. ಅವರು ಸಾಕ್ಷ್ಯ ನಾಶ ಮಾಡಲು ಸಮಯ ಪಡೆಯುತ್ತಿರುವ ಹವಣಿಕೆ ಇದು’ ಎಂದು ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ಅವರು ನ್ಯಾಯಾಧೀಶರಿಗೆ ವಿವರಿಸಿದರು. ‘ಅವರೀಗ ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಆದರೆ ದೆಹಲಿಯ ಲೊಕೇಶನ್ ಪತ್ತೆ ಆಗ್ತಾ ಇಲ್ಲ. ಕೂಡಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ. ಇಲ್ಲವಾದಲ್ಲಿ ಸಾಕ್ಷ್ಯ ನಾಶವಾಗುವ ಎಲ್ಲ ಅವಕಾಶಗಳಿವೆ. ಆದ್ದರಿಂದ ಬಂಧನಕ್ಕೆ ಅನುಮತಿ ನೀಡಬೇಕು’ ಎಂದು ಕೋರಿದರು.
ಎ–1 ಬಿ.ಎಸ್.ಯಡಿಯೂರಪ್ಪ
ಎ–2 ವೈ.ಎಂ. ಅರುಣ ಪೈಪ್‌ಲೈನ್ ರೋಡ್ ಟಿ.ದಾಸರಹಳ್ಳಿ
ಎ–3 ಎಂ.ರುದ್ರೇಶ್ ಬಿನ್ ಲೇಟ್ ಮರುಳಸಿದ್ದಯ್ಯ ಸೋಂಪುರ ಕೆಂಗೇರಿ ಹೋಬಳಿ ಬೆಂಗಳೂರು
ಎ–4 ಜಿ.ಮರಿಸ್ವಾಮಿ ಬಿನ್ ಲೇಟ್ ಗಂಗಾಧರಯ್ಯ ಕೆರೆಗುಡ್ಡದ ಹಳ್ಳಿ ಚಿಕ್ಕಬಾಣಾವರ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.