ಉಡುಪಿ:ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಮಾರ್ಕಿಂಗ್ ಮಾಡಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸ್ವಾಮೀಜಿ ‘ಕುಮಾರಸ್ವಾಮಿ ಅವರ ಆರೋಪ ಗಂಭೀರವಾಗಿದ್ದು, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದಿದ್ದಾರೆ.
ಇದನ್ನೂ ಓದಿ.. ರಾಮ ಮಂದಿರಕ್ಕೆ ಹಣ ಕೊಡದವರ ಮನೆಗಳ ಗುರುತು: ಎಚ್ಡಿಕೆ ಆತಂಕ
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡದವರ ಮಾಹಿತಿ ಸಂಗ್ರಹಿಸುವಂತೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ಆರ್‌ಎಸ್‌ಎಸ್ ಯಾವುದೇ ಸೂಚನೆ ನೀಡಿಲ್ಲ. ದೇಣಿಗೆ ಕೊಟ್ಟವರ ಮಾಹಿತಿ ಟ್ರಸ್ಟ್‌ಗೆ ಅಗತ್ಯವಾಗಿರುವುದರಿಂದ ಸಂಗ್ರಹಿಸಲಾಗುತ್ತದೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ರಾಮಮಂದಿರ ನಿರ್ಮಾಣಕ್ಕೆ ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹವಾಗುತ್ತಿದ್ದು, ದೇಣಿಗೆ ಸ್ವೀಕಾರ ರಶೀದಿ ಹಾಗೂ ಕೂಪನ್‌ಗಳ ಕೊರತೆ ಉಂಟಾಗಿದೆ. ಹಾಗಾಗಿ, ಮುಂದೆ ದೇಣಿಗೆ ಪಡೆಯಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮನೆಗಳನ್ನು ಗುರುತು ಹಾಕಿಕೊಂಡಿರಬಹುದು. ಇದು ಖಂಡಿತ ತಪ್ಪಲ್ಲ ಎಂದು ಸ್ವಾಮೀಜಿ ಹೇಳಿದರು.
ರಾಮ ಜನ್ಮಭೂಮಿ ವಿವಾದಿತ ಪ್ರದೇಶ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸದವರ ದೇಶನಿಷ್ಠೆಯ ಬಗ್ಗೆ ಸಂದೇಹಪಡುವಂತಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.