ಕರ್ನಾಟಕದ ನಾಟಕ ಪ್ರಪಂಚಕ್ಕೆ ಹೊಸ ತಿರುವು ನೀಡಿದವರು ಕೈಲಾಸಂ ಮತ್ತು ಶ್ರೀರಂಗ. 60ರ ದಶಕದ ವರೆಗೂ ಈ ಇಬ್ಬರು ನಾಟಕಕಾರರ ಜಾಡಿನಲ್ಲಿ ನಾಡಿನ ರಂಗ ಜಗತ್ತು ಚಲಿಸುತ್ತಿತ್ತು. ಅಲ್ಲಿಯವರೆಗೆ ಗಿರೀಶ ಕಾರ್ನಾಡರು ಒಂದೆರಡು ಏಕಾಂಕ ನಾಟಕ ಬರೆದಿದ್ದರು ಅನಿಸುತ್ತದೆ. ‘ಯಯಾತಿ’ ಅವರ ಮೊದಲ ನಾಟಕ. ಆ ಬಳಿಕ ಶುರುವಾದ ಅವರ ಸೆಕೆಂಡ್ ಗ್ರೇಟ್ ಪ್ಲೇ ‘ತುಘಲಕ್’, ರಂಗಭೂಮಿ ಕುರಿತಾದ ನಮ್ಮ ಚಿಂತನೆ ಮತ್ತು ನೋಟವನ್ನೇ ಬದಲಾಯಿಸಿತು.
ಕನ್ನಡ ನಾಟಕ ಪರಂಪರೆಯ ಹೊಸ ಕ್ರಾಂತಿಗೆ ನಾಂದಿ ಹಾಡಿದ ನಾಟಕ ಇದು. ನಾವು ಅಲ್ಲಿಯವರೆಗೆ ಕಾಲೇಜು, ಸ್ಕೂಲ್‌ನಲ್ಲಿ ಆಡುತ್ತಿದ್ದ ನಾಟಕಗಳನ್ನು ಮನಸ್ಸಿನಿಂದ ಕಿತ್ತುಹಾಕಿ ಕಾರ್ನಾಡರು, ಕಂಬಾರರು, ಲಂಕೇಶ್ ರಚನೆಯ ನಾಟಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಇದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು ಕಾರ್ನಾಡರು.
ಇದನ್ನೂ ಓದಿ:ಕಾರ್ನಾಡರ ಜತೆಗಿನ ‘ಆ ದಿನಗಳು’
ನಾಟಕದಷ್ಟೇ ಮುಖ್ಯವಾದದ್ದು ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆ. ‘ಅನ್‌ಪ್ಯಾಪುಲರ್’ ಆಗುವುದು ಯಾವುದೇ ದೊಡ್ಡ ಮನುಷ್ಯನ ಚಿಹ್ನೆ. ತಾನು ಮಾತನಾಡಿದ್ದು ಜನಪ್ರಿಯತೆ ಎಂದು ಬಗೆದರೆ ಎಲ್ಲರಿಗೂ ಪ್ರಿಯವಾಗಬೇಕಾಗುತ್ತದೆ. ಅದೇ ಜಾಡಿನಲ್ಲಿ ಸಾಗಬೇಕಾಗುತ್ತದೆ. ಕಾರ್ನಾಡರು ಯಾವುದು ತನ್ನ ಮನಸ್ಸು, ದೇಶ, ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಕಾಳಜಿಯಿಂದ ಯಾರ ಹತ್ತಿರ ಮಾತನಾಡುತ್ತಿದ್ದೇನೆ ಎನ್ನುವ ಪರಿವೆಯೇ ಇಲ್ಲದೆ ನೇರವಾಗಿ ಮಾತನಾಡುತ್ತಿದ್ದರು.
ಇದನ್ನೂ ಓದಿ:ಗಿರೀಶ ಕಾರ್ನಾಡ: ಮುಗಿದ ಪಯಣ, ಉಳಿದ ಕನಸು
ನನಗಿನ್ನೂ ನೆನಪಿದೆ. ಅದು ಬಾಬ್ರಿ ಮಸೀದಿ ಧ್ವಂಸಗೊಂಡ ಸಂದರ್ಭ. ಕಾರ್ನಾಡರು ಸೇರಿದಂತೆ ನಾನು, ಡಾ.ಕೆ. ಮರುಳಸಿದ್ದಪ್ಪ, ವಾಸುದೇವ್ ಅಯೋಧ್ಯೆಗೆ ಹೋಗಿದ್ದೆವು. ಅಲ್ಲಿ ಅವರ ನಾಯಕತ್ವ, ತೋರಿಸಿದ ಜಾಗಗಳು, ಅವರು ಹೇಳಿದ ಮಾತುಗಳು ನನಗಿನ್ನೂ ಜ್ಞಾಪಕದಲ್ಲಿವೆ. ವಾಪಸ್ ಬಂದ ಬಳಿಕ ನಮ್ಮ ಚಿಂತನಾ ಲಹರಿಯೇ ಬದಲಾಯಿತು. ‘ಅನ್‌ಪ್ಯಾಪುಲರ್’ ಆಗುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಕೆಲವರಿಗಷ್ಟೇ ಇರುತ್ತದೆ. ಅಂತಹವರಲ್ಲಿ ಕಾರ್ನಾಡರು ಒಬ್ಬರು.
ಇದನ್ನೂ ಓದಿ:ಕಾರ್ನಾಡರ ಜತೆಗಿನ ‘ಆ ದಿನಗಳು’
ಕಾರ್ನಾಡರು ಪಿಎಚ್.ಡಿ ಪದವಿ ಪಡೆದರು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಬಂತು. ಆದರೆ, ಒಂದು ಪದವಿಯನ್ನೂ ತಮ್ಮ ಹೆಸರಿನೊಟ್ಟಿಗೆ ಸೇರಿಸಿಕೊಳ್ಳಲಿಲ್ಲ. ಯಾವುದೇ ಗೌರವ, ಸನ್ಮಾನಕ್ಕೆ ಅಪೇಕ್ಷೆ ಪಡುತ್ತಿರಲಿಲ್ಲ. ಒಮ್ಮೆ ಸಂಘ– ಸಂಸ್ಥೆಯವರು ಸನ್ಮಾನ ಮಾಡುತ್ತೇವೆಂದು ಅವರ ಮನೆಗೆ ಬಂದರು. ‘ಎಲ್ಲರಿಗೂ ಆಗುವಂತೆ ನನಗೂ ವಯಸ್ಸಾಗುತ್ತದೆ. ಇದನ್ನು ಸಂಭ್ರಮಿಸುವುದು ಸರಿಯಲ್ಲ. ವಯಸ್ಸಾದ ಮೇಲೆ ಸನ್ಮಾನ ಏಕೆ’ ಎಂದು ಪ್ರಶ್ನಿಸಿದ್ದೂ ಉಂಟು.
ಇದನ್ನೂ ಓದಿ:ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ
ಕಾರ್ನಾಡರು ಎಂದಿಗೂ ಆಟೊಗ್ರಾಫ್ ಕೊಡುತ್ತಿರಲಿಲ್ಲ. ಅವರು ಎಲ್ಲಿಗೆ ಹೋದರೂ ಹುಡುಗರು, ಹುಡುಗಿಯರು ಆಟೊಗ್ರಾಫ್‌ಗಾಗಿ ಮುಗಿಬೀಳುತ್ತಿದ್ದರು. ‘ನನ್ನ ಆಟೊಗ್ರಾಫ್ ಕಟ್ಟಿಕೊಂಡು ಏನು ಮಾಡುತ್ತೀರಿ?’ ಎನ್ನುತ್ತಿದ್ದರು. ಅದೇ ಅವರು ಸಮಾಜಕ್ಕೆ ಬಿಟ್ಟುಹೋಗಿರುವ ನಾಯಕತ್ವ ಮತ್ತು ಹಿರಿತನ.
ವೈಎನ್ಕೆ ನನ್ನ ದೂರದ ಸಂಬಂಧಿ. ಅವರ ಮೂಲಕವೇ ನನಗೆ ಕಾರ್ನಾಡರ ಪರಿಚಯವಾಯಿತು. ‘ತುಘಲಕ್’ ನಾಟಕ ಪ್ರದರ್ಶನದ ಅನುಮತಿ ಕೋರಿ ಎರಡು ಪತ್ರ ಬರೆದಿದ್ದೆ. ಅಗಾಗ್ಗೆ ಅವರ ಮನೆ ಹೋಗುತ್ತಿದ್ದೆ.
1964–65ರ ಸಮಯ. ‘ತುಘಲಕ್’ ನಾಟಕದ ಪುಸ್ತಕ ಬಿಡುಗಡೆ ನಡೆದಿದ್ದು ಧಾರವಾಡದಲ್ಲಿ. ಆಗ ಕಾರ್ನಾಡರು ಇಂಗ್ಲೆಂಡ್‌ನಲ್ಲಿದ್ದರು. ಮನೋಹರ ಗ್ರಂಥಮಾಲಾದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಾನು ಸಾಗರದಿಂದಹೋಗಿದ್ದೆ. ಅಧ್ಯಕ್ಷತೆ ಗೋಪಾಲಕೃಷ್ಣ ಅಡಿಗರದು. ವರಕವಿ ದ.ರಾ. ಬೇಂದ್ರೆ ಅವರು ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಟೇಬಲ್ ಮೇಲಿಂದ ಪುಸ್ತಕವೊಂದನ್ನು ಕೈಗೆತ್ತಿಕೊಂಡರು. ‘ಈ ಪುಸ್ತಕದಾಗ ಏನಿದೆ ಅಂತಾ ನೋಡ್ರೀ... ನಮ್ ಗಿರೀಶ ಕಾರ್ನಾಡ ಏನ್ ಅರ್ಥ ಮಾಡಿಕೊಂಡಾನ ನೋಡ್ರೀ... ಎಷ್ಟು ಚಲೊ ಇದೆ ಅವ್ನ ಮೈಂಡ್’ ಎಂದು ಹೊಗಳಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.
1968–69ರ ವೇಳೆ ನಾನು ಶಿವಮೊಗ್ಗ ಜಿಲ್ಲೆಯ ಸಾಗರದ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದೆ. ಕರ್ನಾಟಕದಲ್ಲಿ ‘ತುಘಲಕ್’ ನಾಟಕದ ಪ್ರಥಮ ಪ್ರದರ್ಶನ ಕೊಟ್ಟಿದ್ದು ನಾನೇ. ಬಳಿಕ ಅದು ಹಿಂದಿಗೆ ಭಾಷಾಂತರಗೊಂಡು ಯಶಸ್ವಿ ಪ್ರದರ್ಶನ ಕಂಡಿತು. ಈ ನಾಟಕಕ್ಕೆ ಜನರು ಬರುತ್ತಾರೋ ಇಲ್ಲವೋ, ಸಂಸಾರದ ನಾಟಕ, ಹಾಸ್ಯವಿಲ್ಲ ಎನ್ನುವ ಆತಂಕವಿತ್ತು.
ಅದು ವಿಷಾದ ನಾಟಕ. ದುರಂತ ನಾಟಕದ ಒಂದು ಮುಖ್ಯ ಅಂಶವೆಂದರೆ ಆಳದಲ್ಲಿ ವಿಷಾದ ಇರುತ್ತದೆ. ಅದು ದುಃಖವಲ್ಲ. ತುಘಲಕ್‌ನ ವಿಷಾದ ಇಡೀ ಸಮಾಜದ ವಿಷಾದ. ಕಾರ್ನಾಡರು ನಕ್ಕು, ನಗಿಸುವ ನಾಟಕಗಳನ್ನೂ ಬರೆದಿದ್ದಾರೆ. ಕಾಮಿಕ್ ಸೆನ್ಸ್ ಕೂಡ ಸುಂದರವಾಗಿದೆ. ಪೌರಾಣಿಕ, ಐತಿಹಾಸಿಕ, ಜಾನಪದ ವಸ್ತು ಆಧಾರಿತ ನಾಟಕಗಳೂ ಖ್ಯಾತಿ ಪಡೆದಿವೆ.
ಜಾನಪದ ಸೊಗಡು ಮೇಳೈಸಿದ ‘ನಾಗಮಂಡಲ’ ಕಥೆಯನ್ನೇ ನೋಡಿ. ಓದುತ್ತಾ ಹೋದಂತೆ ನಮಗೆ ಹತ್ತಿರವಾಗುತ್ತದೆ. ಹಿಂದಿನ ಕಥೆ ತೆಗೆದುಕೊಂಡು, ಇಂದಿನ ಕಥೆಯೊಟ್ಟಿಗೆ ಬೆಸೆಯುವುದೇ ಸೊಗಸು. ಈಗ ಹೇಗೆಪ್ರಸ್ತುತವಾಗುತ್ತದೆ ಎನ್ನುವುದನ್ನು ತೋರಿಸಿದ್ದಾರೆ. ಅವರು ನಿರ್ದೇಶಿಸಿದ ‘ಕಾಡು’, ‘ಕಾನೂರು ಹೆಗ್ಗಡಿತಿ’ ಚಿತ್ರಗಳಲ್ಲೂ ನಟಿಸಿದ್ದೇನೆ.
ಸ್ವಾತಂತ್ರ್ಯೋತ್ತರ ಭಾರತಕ್ಕೆ ಅವರು ನೀಡಿದ ಹೊಸ ನೋಟ, ಹೊಸ ಧೈರ್ಯ, ಹೊಸ ನಂಬಿಕೆ, ಹೊಸ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜ್ಞಾನಪೀಠ ಪ್ರಶಸ್ತಿಯಂತಹ ಗೌರವ ಬಂದರೂ ಹಲವು ಚಿತ್ರಗಳಲ್ಲಿ ನಟಿಸಿದರೂ ತಾನೊಬ್ಬ ಸ್ಟಾರ್ ಎನ್ನುವ ಅಹಮಿಕೆ ಅವರಿಗೆ ಇರಲಿಲ್ಲ.
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.