ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಡಾ.ಜಿ.ಎಲ್. ಹೆಗಡೆ ಮಣಕಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರೊ.ಎಂ.ಎ. ಹೆಗಡೆ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ,ಒಂಬತ್ತು ತಿಂಗಳಿಂದ ಖಾಲಿಯಿತ್ತು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮಣಕಿಯ ಜಿ.ಎಲ್. ಹೆಗಡೆ ಅವರು, ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಕೊಡುಗೆ ನೀಡಿದ್ದಾರೆ. ಅವರು ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿರುವ ಅವರು, ‘ಅಂಧಕಾಸುರ ವಧೆ’ ಮತ್ತು ‘ಭಾಗವತ ಪಾರಮ್ಯ’ ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ.
ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ, ನಿರ್ದೇಶಿಸಿದ್ದಾರೆ. ಕಲಾವಿದರೂ ಆಗಿರುವ ಅವರು, 50 ವರ್ಷಗಳಿಂದ ಬಯಲಾಟ ಮೇಳಗಳಲ್ಲಿ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದಾರೆ. ಕೌರವ, ಭೀಮ, ಜರಾಸಂಧ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಳಮದ್ದಳೆ ಅರ್ಥದಾರಿಯೂ ಆಗಿದ್ದಾರೆ. ಯಕ್ಷಗಾನ ಕಲೆಗೆ ಸಂಬಂಧಿಸಿದಂತೆ ಸಂಶೋಧನೆ, ಮಾರ್ಗದರ್ಶನವನ್ನೂ ನೀಡಿದ್ದಾರೆ. ‘ಶೇಣಿ ರಾಮಾಯಣ’ ಸೇರಿದಂತೆ ವಿವಿಧ ಕೃತಿಗಳನ್ನು ರಚಿಸಿರುವ ಅವರು, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.