ADVERTISEMENT

ಸಿದ್ದರಾಮಯ್ಯ ವಿರುದ್ಧ ಗೋ ಬ್ಯಾಕ್ ಚಳವಳಿ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:17 IST
Last Updated 6 ನವೆಂಬರ್ 2024, 5:17 IST
   

ಮೈಸೂರು: 'ಮುಡಾ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ 'ಗೋ ಬ್ಯಾಕ್ ಮುಖ್ಯಮಂತ್ರಿ' ಚಳವಳಿ ನಡೆಸಿದರು.

ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸುತ್ತಿದ್ದಂತೆ ಅವರ ದುಪ್ಪಟ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಬಂಧಿಸಲು ಯತ್ನಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, 'ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಸಿದ್ದರಾಮಯ್ಯ ತನಿಖೆ ಎದುರಿಸುತ್ತಿರುವುದು ದುರದೃಷ್ಟಕರ. ಇದೊಂದು ಕರಾಳ ದಿನ. ಪೊಲೀಸರು ಕಾಂಗ್ರೆಸ್ ಚೇಲಾಗಳಂತೆ ವರ್ತಿಸುತ್ತಿದ್ದು, ನಮ್ಮ ಹೋರಾಟ ಹತ್ತಿಕ್ಕಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪೊಲೀಸರ ತಂಡವು ಶಾಸಕ ಟಿ.ಎಸ್. ಶ್ರೀವತ್ಸ, ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್ ನಿಂತಿದ್ದ ಪಕ್ಷದ ವಾಹನವನ್ನೇ ಸಿಎಆರ್ ಮೈದಾನಕ್ಕೆ ಕಳುಹಿಸಿದರು. ತಂಡ, ತಂಡವಾಗಿ ಬಂದ ಕಾರ್ಯಕರ್ತರನ್ನು ಪೊಲೀಸ್ ಬಸ್ ಮೂಲಕ ಕರೆದೊಯ್ಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.