ನವದೆಹಲಿ: ವನ್ಯಜೀವಿಧಾಮಕ್ಕೆ ಹಾನಿಯಾಗುತ್ತದೆ ಎಂಬ ನೆಪವೊಡ್ಡಿ ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಗೋವಾ ಸರ್ಕಾರವು ಕರ್ನಾಟಕದ ಕಾಡಿನೊಳಗೇ ಹೆಚ್ಚುವರಿ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ.
ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ಕರ್ನಾಟಕದ ಪಶ್ಚಿಮಘಟ್ಟಗಳ ಮೂಲಕ ವಿದ್ಯುತ್ ಮಾರ್ಗ ನಿರ್ಮಿಸುವ ಯೋಜನೆಗೆ 455 ಎಕರೆ ಅರಣ್ಯ ಬಳಸಲು ಒಪ್ಪಿಗೆ ನೀಡುವಂತೆ ಕೋರಿ ಗೋವಾವು ಮತ್ತೆ ಪ್ರಸ್ತಾವನೆ ಸಲ್ಲಿಸಿದೆ.
ಉದ್ದೇಶಿತ ವಿದ್ಯುತ್ ಮಾರ್ಗವು ದಾಂಡೇಲಿ ಆನೆ ಕಾರಿಡಾರ್, ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ. ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗುವ ಯೋಜನೆಗೆ ಕರ್ನಾಟಕ ಸರ್ಕಾರದಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ.
ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ಸಂಸ್ಥೆಯು ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವಂತೆ ಕೋರಿದೆ. ಈ ಯೋಜನೆಗಾಗಿ ಧಾರವಾಡ ವಿಭಾಗದ 7.75 ಹೆಕ್ಟೇರ್, ಬೆಳಗಾವಿ ವಿಭಾಗದ 70 ಹೆಕ್ಟೇರ್, ಹಳಿಯಾಳ ವಿಭಾಗದ 68 ಹೆಕ್ಟೇರ್ ಹಾಗೂ ದಾಂಡೇಲಿ ವಿಭಾಗದ 35 ಹೆಕ್ಟೇರ್ ಅರಣ್ಯ ಬಳಸಲು ಉದ್ದೇಶಿಸಲಾಗಿದೆ.
ಗೋವಾ ರಾಜ್ಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಉದ್ದೇಶಿಸಿರುವ 400 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಅನುಮತಿ ನೀಡುವಂತೆ ಸಂಸ್ಥೆಯು ಕರ್ನಾಟಕದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿತ್ತು. ಮೂಲ ಪ್ರಸ್ತಾವನೆಯಲ್ಲಿ 445 ಎಕರೆ ಕಾಡು ಬಳಸಲು ಪ್ರಸ್ತಾಪಿಸಲಾಗಿತ್ತು. ಅಂದಾಜು ₹265.57 ಕೋಟಿ ವೆಚ್ಚದ ಯೋಜನೆ ಇದಾಗಿದೆ.
‘ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಈ ಮಾರ್ಗ ಹಾದು ಹೋಗಲಿದೆ. ಈ ಯೋಜನೆಯಿಂದ ಹುಲಿ ಆವಾಸಸ್ಥಾನದ ಮೇಲೂ ಪರಿಣಾಮ ಬೀರಲಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕು’ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿಫಾರಸು ಮಾಡಿದ್ದರು.
ಇನ್ನೊಂದೆಡೆ, ಈ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಗೋವಾ ಫೌಂಡೇಷನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವರದಿ ನೀಡುವಂತೆ ಸಿಇಸಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ‘ಈ ಮಾರ್ಗದಲ್ಲಿ ಈಗಾಗಲೇ 220 ಕೆ.ವಿ.ಮಾರ್ಗ ಇದೆ. ಹೊಸಮಾರ್ಗ ನಿರ್ಮಾಣಕ್ಕೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಅದರ ಬದಲು ಈಗಿರುವ ಮಾರ್ಗ ಬಳಸುವುದು ಉತ್ತಮ. ಅಲ್ಲದೆ, ಕರ್ನಾಟಕ ಸರ್ಕಾರದ ಅನುಮತಿ ಪಡೆದೇ ಮುಂದುವರಿಯಬೇಕು’ ಎಂದು ಸಿಇಸಿ ಶಿಫಾರಸು ಮಾಡಿತ್ತು. ಇದೀಗ ಸಂಸ್ಥೆಯು ಹೊಸ ಪ್ರಸ್ತಾವನೆ ಸಲ್ಲಿಸಿದ್ದು, ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ 10 ಎಕರೆಯಷ್ಟು (177 ಹೆಕ್ಟೇರ್ ಬದಲು 181 ಹೆಕ್ಟೇರ್) ಕಾಡು ಬೇಕಾಗುತ್ತದೆ ಎಂದು ಹೇಳಿದೆ.
‘ಪರಿಸರದ ನೆಪವೊಡ್ಡಿ ಮಹದಾಯಿ ಯೋಜನೆಗೆ ಗೋವಾ ಅಡ್ಡಗಾಲು ಹಾಕಿದೆ. ಇದೀಗ ತನ್ನದೇ ಯೋಜನೆಗೆ ವಿದ್ಯುತ್ ಒದಗಿಸಲು ಪಶ್ಚಿಮಘಟ್ಟಗಳ ಮೂಲಕ ಯೋಜನೆ ಅನುಷ್ಠಾನಕ್ಕೆ ಇನ್ನಿಲ್ಲದಂತೆ ಪ್ರಯತ್ನ ನಡೆಸಿದೆ. ಇದು ಗೋವಾದ ದ್ವಂದ್ವ ನಿಲುವಿಗೆ ಕೈಗನ್ನಡಿ. ಇಷ್ಟದರೂ ಕರ್ನಾಟಕದ ಯಾವುದೇ ರಾಜಕಾರಣಿ ಧ್ವನಿ ಎತ್ತಿಲ್ಲ’ ಎಂದು ಪರಿಸರ ಕಾರ್ಯಕರ್ತ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.