ಹುಬ್ಬಳ್ಳಿ: ಕೇಂದ್ರ ಸಚಿವ ಅನಂತಕುಮಾರ್ ಜೊತೆ ಆತ್ಮೀಯ ಒಡನಾಡಿಯಾಗಿದ್ದ ಬಾಲ್ಯದ ಸ್ನೇಹಿತ ಸಂಸದ ಪ್ರಹ್ಲಾದ ಜೋಶಿ ಅವರು ‘ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ’ ಎಂದು ಕಣ್ಣೀರಾದರು. ಅನಂತಕುಮಾರ್ ಜೊತೆ ಕಳೆದ ಬಾಲ್ಯದ ನೆನಪುಗಳನ್ನು ಜೋಶಿ ಮೆಲುಕು ಹಾಕಿದರು.
ಅಳುತ್ತಲೇ ನೆನಪುಗಳನ್ನು ಹಂಚಿಕೊಂಡ ಅವರು ನಮ್ಮ ತಂದೆ ಹಾಗೂ ಅವರ ತಂದೆ ಇಬ್ಬರೂ ರೈಲ್ವೆ ಇಲಾಖೆಯಲ್ಲಿದ್ದರು. ಹೀಗಾಗಿ 8ನೇ ತರಗತಿಯಿಂದಲೇ ಆತ್ಮೀಯರಾದೆವು. ನಾನು ಈ ಸ್ಥಾನಕ್ಕೆ ಬರಲು ಅವರೇ ಕಾರಣ. ಧಾರವಾಡಕ್ಕೆ ಐಐಟಿ ಬರಲು ಅವರ ಶ್ರಮ ಕಾರಣ. ಇತ್ತೀಚಿನ ವರ್ಷಗಳಲ್ಲಂತೂ ಅವರು ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೊತೆ ಅತ್ಯಂತ ಪ್ರಬುದ್ಧರಾಗಿ ವರ್ತಿಸುತ್ತಿದ್ದರು. ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಒಲವು ಹೊಂದಿದ್ದರು ಎಂದರು.
ಪಕ್ಷ ಸಂಘಟನೆಯಾಗಿ, ಎಬಿವಿಪಿ ಚಟುವಟಿಕೆಗಳ ಸಲುವಾಗಿ ಅನಂತಕುಮಾರ್ ಸಾಕಷ್ಟು ಸಲ ಸೈಕಲ್ ಮೇಲೆ ನನ್ನನ್ನು ಕೂಡಿಸಿಕೊಂಡು ಕರೆದೊಯ್ದಿದ್ದಿದ್ದಾರೆ. ಹಲವು ಬಾರಿ ಬಸ್ ಸ್ಟ್ಯಾಂಡ್‌ನಲ್ಲಿಯೇ ಮಲಗಿ ದಿನ ಕಳೆದಿದ್ದಾರೆ ಎಂದು ಕಣ್ಣೀರಾದರು.
ಇದನ್ನೂ ಓದಿ...ಕೇಂದ್ರ ಸಚಿವ ಅನಂತಕುಮಾರ್ ನಿಧನ
ಅನಂತ ಕುಮಾರ್ ಮೊದಲಿನಿಂದಲೂ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಆದರೆ, ಯಾಕೆ ಹೀಗಾಯಿತು ಎನ್ನುವುದು ಗೊತ್ತೇ ಆಗುತ್ತಿಲ್ಲ. ದೇಶದಲ್ಲಿ ಹಾಗೂ ವಿದೇಶಕ್ಕೆ ಪ್ರಯಾಣಿಸುವಾಗ ‘ವಿಮಾನದಲ್ಲಿ ಮತ್ತು ಹೋಟೆಲ್‌ಗಳಲ್ಲಿ ಜಾಸ್ತಿ ಊಟ ಮಾಡಬೇಡ. ನಾನು ಮನೆಯಿಂದಲೇ ಊಟ ತರುತ್ತೇನೆ’ ಎಂದು ಹೇಳುತ್ತಿದ್ದರು. ನನ್ನ ಆರೋಗ್ಯದ ಬಗ್ಗೆಯೂ ಅವರು ಅಪಾರ ಕಾಳಜಿ ವಹಿಸುತ್ತಿದ್ದರು ಎಂದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದರೂ ಎಲ್ಲ ಸಚಿವರನ್ನೂ ಭೇಟಿಯಾಗಿ ಕರ್ನಾಟಕಕ್ಕೆ ಆಗಬೇಕಾದ ಕೆಲಸಗಳನ್ನು ಸುಲಭವಾಗಿ ಮಾಡಿಸಿಕೊಂಡು ಬರುತ್ತಿದ್ದರು. ಸಹಾಯ ಬೇಡಿ ಬಂದ ಯಾರನ್ನೂ ಅವರು ವಾಪಸ್ ಕಳುಹಿಸುತ್ತಿರಲಿಲ್ಲ. ಅವರಂಥ ಹೃದಯ ವೈಶಾಲ್ಯತೆ ಇನ್ನೊಬ್ಬರಿಗೆ ಬರಲು ಸಾಧ್ಯವಿಲ್ಲ. ಅವರದು ಅನುಕರಣೀಯ ವ್ಯಕ್ತಿತ್ವ ಎಂದರು.
ಪದವಿ ಪರೀಕ್ಷೆ ಮುಂದೂಡಿಕೆ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಇಂದು (ಸೋಮವಾರ) ನಡೆಯಬೇಕಿದ್ದ ಪರೀಕ್ಷೆಯನ್ನು ಅನಂತಕುಮಾರ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಇದನ್ನೂ ಓದಿ...ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ಕುಮಾರ್ ಇನ್ನಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.