ADVERTISEMENT

ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇಗುಲ ಹಸ್ತಾಂತರಿಸಿದ್ದು ಅಕ್ರಮ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 20:26 IST
Last Updated 10 ಆಗಸ್ಟ್ 2018, 20:26 IST
   

ಬೆಂಗಳೂರು: ‘ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದಗೋಕರ್ಣದ ಮಹಾಬಲೇಶ್ವರ ದೇಗುಲವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದು ಕಾನೂನುಬಾಹಿರ’ ಎಂದು ತೀರ್ಪು ನೀಡಿರುವ ಹೈಕೋರ್ಟ್‌ ಪೀಠ, ದೇಗುಲವನ್ನು ಸರ್ಕಾರದ ವಶಕ್ಕೆ ಒಪ್ಪಿಸಿದೆ. ಧಾರ್ಮಿಕ ಕೈಂಕರ್ಯವನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಸಲಹಾ ಸಮಿತಿಗೆ ನೀಡಿದೆ.

ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಮಠ ಪ್ರತಿಪಾದಿಸಿದೆ. ಈ ವಿಷಯದಲ್ಲಿ ಸರ್ಕಾರ ಏನು ಮಾಡಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತೆ ಶೈಲಜಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗೋಕರ್ಣ ದೇವಾಲಯದ ಹಸ್ತಾಂತರ ವ್ಯಾಜ್ಯದ ತೀರ್ಪನ್ನು ಶುಕ್ರವಾರ ಪ‍್ರಕಟಿಸಿತು.

ADVERTISEMENT

ಪ್ರಕರಣವೇನು: 2005ರಲ್ಲಿ ಮುಜರಾಯಿ ಇಲಾಖೆ ಏಕರೂಪ ಶಾಸನ ಜಾರಿಗೆ ತಂದಿತು. ಇದರ ಅನ್ವಯ ಮಠಗಳು ಮತ್ತು ಅದಕ್ಕೆ ಸಂಬಂಧಿಸಿದ ದೇವಸ್ಥಾನಗಳನ್ನು ಬಿಟ್ಟು ಉಳಿದವುಗಳನ್ನು ತನ್ನ ವಶಕ್ಕೆ ಪಡೆದಿತ್ತು. ಇದರ ಬೆನ್ನಲ್ಲೇ ರಾಮಚಂದ್ರಾಪುರ ಮಠವು 2008ರ ಏಪ್ರಿಲ್‌ನಲ್ಲಿ ರಾಜ್ಯಪಾಲರಿಗೆ ಕೋರಿಕೆ (ಆಗ ರಾಜ್ಯಪಾಲರ ಆಡಳಿತವಿತ್ತು) ಸಲ್ಲಿಸಿತು.

‘ದೇಗುಲವು ನಮ್ಮ ಮಠದ ಅಧೀನದಲ್ಲಿದೆ. ಆದ್ದರಿಂದ ಇದರ ಆಡಳಿತದ ಸುಪರ್ದಿಯನ್ನು ನಮಗೆ ನೀಡಬೇಕು’ ಎಂದು ಕೇಳಿತ್ತು. ಈ ಮನವಿಗೆ ಪ್ರತ್ಯುತ್ತರವಾಗಿ ರಾಜ್ಯಪಾಲರ ಅಧೀನ ಕಾರ್ಯದರ್ಶಿ, ‘ಇಂತಹ ಪ್ರಸ್ತಾ
ವನೆ ತರಬೇಡಿ’ ಎಂದು ತಿಳಿಸಿದ್ದರು.

ತದನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಮಠವು ಈ ಕುರಿತು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿತು. ಇದನ್ನು ಮಾನ್ಯ ಮಾಡಿದ ಸರ್ಕಾರ, ದೇಗುಲವನ್ನು 2008ರ ಆಗಸ್ಟ್‌ 12ರಂದು ಮುಜರಾಯಿ ಇಲಾಖೆ
ಯಿಂದ ಕೈಬಿಟ್ಟು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು.

ಪಿಐಎಲ್‌ ಸಲ್ಲಿಕೆ: ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಗೋಕರ್ಣದ ವಿದ್ವಾನ್‌ ಸಾಂಬ ದೀಕ್ಷಿತ್, ನಾಗಭೂಷಣ ಉಪಾಧ್ಯಾಯ, ಬೆಂಗಳೂರಿನ ಎಂ.ಎಸ್‌.ಮುರಳೀಧರ, ರಮೇಶ್ ಮತ್ತು ಧಾರವಾಡದ ವಕೀಲ ಎಲ್‌.ಪಿ.ಮುತಗುಪ್ಪಿ 2008ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಮಾನ್ಯ ಮಾಡಿರುವ ನ್ಯಾಯಪೀಠ, ‘ಮಠಕ್ಕೆ ಸಹಾಯ ಮಾಡುವ ಉದ್ದೇಶದಿಂದಲೇ ಡಿನೋಟಿಫೈ ಮಾಡಲಾಗಿದೆ. ದೇಗುಲ ನಮಗೆ ಸೇರಿದ್ದು ಎಂಬ ಮಠದ ವಾದವನ್ನು ಪುರಸ್ಕರಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಡಿನೋಟಿಫೈ ಕ್ರಮ ಕಳಂಕಿತ ನಡೆ’ ಎಂದು ತಿಳಿಸಿದೆ.

15 ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಯು ದೇಗುಲಕ್ಕೆ ಸಂಬಂಧಿಸಿದ ಸ್ಥಿರ ಮತ್ತು ಚರಾಸ್ತಿಗಳ ಲೆಕ್ಕಪತ್ರ ನೀಡುವಂತೆ ಆದೇಶಿಸಿದೆ.

ಸೆ.10ರಿಂದ ದೇಖರೇಖಿ ಸಮಿತಿ ಕಾರ್ಯಾರಂಭ

‘ದೇಖರೇಖಿ ಸಮಿತಿಯು 2018ರ ಸೆಪ್ಟೆಂಬರ್ 10ರಿಂದ ದೇಗುಲವನ್ನು ತನ್ನ ವಶಕ್ಕೆ ಪಡೆದು ಕಾರ್ಯ ನಿರ್ವಹಿಸಬೇಕು’ ಎಂದು ಆದೇಶಿಸಲಾಗಿದೆ.

ನ್ಯಾಯಮೂರ್ತಿ ಬಿ.ಎನ್.ಕೃಷ್ಣ ನೇತೃತ್ವದ ಸಲಹಾ ಸಮಿತಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ.

ಕುಮಟಾ ಉಪ ವಿಭಾಗಾಧಿಕಾರಿ ಹಾಗೂ ಇಬ್ಬರು ಪ್ರಖ್ಯಾತ ಪಂಡಿತರು ಸಮಿತಿಯ ಸದಸ್ಯರಾಗಿರುತ್ತಾರೆ. ಇವರನ್ನು ರಾಜ್ಯ ಸರ್ಕಾರವೇ ನೇಮಿಸಬೇಕು.

ಉತ್ತರ ಕನ್ನಡ ಜಿಲ್ಲಾಧಿಕಾರಿಯು ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಗೋಕರ್ಣ ದೇಗುಲದ ಇಬ್ಬರು ಉಪಾಧಿವಂತರನ್ನೂ ಸದಸ್ಯರನ್ನಾಗಿ ಸಮಿತಿಗೆ ನೇಮಕ ಮಾಡುವಂತೆ ನಿರ್ದೇಶಿಸಲಾಗಿದೆ.

ತೀರ್ಪು ಜಾರಿಗೆ ತಡೆ ಕೋರಿದ ರಾಮಚಂದ್ರಾಪುರ ಮಠ

ಕಾಯ್ದಿರಿಸಿದ್ದ ಆದೇಶವನ್ನು ತೆರೆದ ನ್ಯಾಯಾಲಯದಲ್ಲಿ ಮಧ್ಯಾಹ್ನ ಪ್ರಕಟಿಸುತ್ತಿದ್ದಂತೆಯೇ, ಪ್ರತಿವಾದಿ ಮಠದ ಪರ ಹಾಜರಿದ್ದ ಹಿರಿಯ ವಕೀಲ ಎ.ಜಿ.ಹೊಳ್ಳ, ‘ದೇಖರೇಖಿ ಸಮಿತಿಯು ತಕ್ಷಣದಿಂದಲೇ ದೇಗುಲದ ಉಸ್ತುವಾರಿ ವಹಿಸಿಕೊಳ್ಳಬೇಕು ಎಂಬ ನಿರ್ದೇಶನಕ್ಕೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಸುಬ್ರಹ್ಮಣ್ಯ ಜೋಯಿಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅರ್ಜಿದಾರರ ಪರ ಹಾಜರಿದ್ದ ಮತ್ತೊಬ್ಬ ವಕೀಲ ರಮಾನಂದ ಅವರು, ‘ದೇಖರೇಖಿ ಸಮಿತಿ ಸೆ.10ರವರೆಗೂ ವಶಕ್ಕೆ ಪಡೆಯುವ ತನಕ ಕಾಯಲು ಆಗುವುದಿಲ್ಲ. ಅಷ್ಟರೊಳಗೆ ಮಠದವರು ಬ್ಯಾಂಕ್‌ ಖಾತೆಗಳು, ಹುಂಡಿ ಹಣ, ದೇಣಿಗೆ ಹಾಗೂ ಆದಾಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಆರೋಪಿಸಿದರು.

ಇದಕ್ಕೆ ಕಿಡಿಕಾರಿದ ಮಠದ ಪರ ಹಾಜರಿದ್ದ ಹಿರಿಯ ವಕೀಲ ಕೆ.ಜಿ.ರಾಘವನ್‌, ‘ಸ್ವಾಮಿ ನಾವು ಪೈಸೆ ಪೈಸೆಗೂ ಲೆಕ್ಕ ಇಟ್ಟಿದ್ದೇವೆ. ಎಲ್ಲವೂ ಪಾರದರ್ಶಕವಾಗಿದೆ. ನಮ್ಮ ಆಡಳಿತದಲ್ಲಿ ದೇಗುಲ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಬೇಕಿದ್ದರೆ ಕೋರ್ಟ್‌ಗೆ ನಾವು ಎಲ್ಲವನ್ನೂ ವಿಶದಪಡಿಸಲು ಸದಾ ಸಿದ್ಧರಿದ್ದೇವೆ’ ಎಂದು ಪ್ರತಿಪಾದಿಸಿದರು.

ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠ ದೇಖರೇಖಿ ಸಮಿತಿ ಕಾರ್ಯಾರಂಭ ಮಾಡುವತನಕ ಉತ್ತರ ಕನ್ನಡ ಜಿಲ್ಲಾಧಿಕಾರಿಯು ದೇಗುಲಕ್ಕೆ ಸಂಬಂಧಿಸಿದ ಸ್ಥಿರ ಮತ್ತು ಚರಾಸ್ತಿಗಳ ಲೆಕ್ಕಪತ್ರ ನೀಡುವಂತೆ ಆದೇಶಿಸಿದೆ.

ಗೋಕರ್ಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿರುವುದಕ್ಕೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.

‘ಶಂಕರಾಚಾರ್ಯರ ಕಾಲದಿಂದಲೂ ಈ ದೇವಸ್ಥಾನ ಸಾರ್ವಜನಿಕವಾಗಿಯೇ ಇತ್ತು. ರಾಮಚಂದ್ರಾಪುರ ಮಠವು ಸುಳ್ಳು ದಾಖಲೆ ಸೃಷ್ಟಿಸಿ, ದೇವಸ್ಥಾನ ತಮ್ಮದೆಂದು ಬಿಜೆಪಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ದೇವಾಲಯವನ್ನು ಹಸ್ತಾಂತರಿಸಿಕೊಂಡಿತ್ತು. ಹಸ್ತಾಂತರ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿರುವುದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವೇದಮೂರ್ತಿ ಬಾಲಚಂದ್ರ ದೀಕ್ಷಿತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ಸುದೀರ್ಘ 10 ವರ್ಷಗಳವರೆಗೆ ನಡೆದ ಈ ವ್ಯಾಜ್ಯವು ಸಾರ್ವಜನಿಕರ ಪರವಾಗಿ ಬಂದಿದ್ದು, ಬಹುತೇಕರಿಗೆ ಸಂತೋಷವನ್ನು ಉಂಟುಮಾಡಿದೆ. ಗೋಕರ್ಣ ದೇವಸ್ಥಾನ ಈ ಹಿಂದಿನಿಂದಲೂ ಯಾವುದೇ ಜಾತಿ, ಮತ, ಪಂಗಡಕ್ಕೆ ಸೇರದೇ ಸ್ವತಂತ್ರವಾಗಿತ್ತು. ಈಗ ನ್ಯಾಯಾಲಯವು ಅದನ್ನೇ ಮಾನ್ಯ ಮಾಡಿದೆ’ ಎಂದು ಶ್ರೀಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿಯ ಅಧ್ಯಕ್ಷ ಗಣಪತಿ ಗಜಾನನ ಹಿರೇ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.