ADVERTISEMENT

ದಾವಣಗೆರೆ: ಚಾಲಕನ ಮಗಳಿಗೆ ಚಿನ್ನದ ಪದಕ

ಮುಂದೆ ಓದೋದು ಕಷ್ಟ, ಉದ್ಯೋಗದತ್ತ ದೃಷ್ಟಿ: ಅಕ್ಷತಾ

ಬಾಲಕೃಷ್ಣ ಪಿ.ಎಚ್‌
Published 30 ಸೆಪ್ಟೆಂಬರ್ 2020, 19:31 IST
Last Updated 30 ಸೆಪ್ಟೆಂಬರ್ 2020, 19:31 IST
ಅಕ್ಷತಾ ಜಿ.ವಿ.
ಅಕ್ಷತಾ ಜಿ.ವಿ.   

ದಾವಣಗೆರೆ: ಬಸ್‌ ಚಾಲಕ–ಅಂಗನವಾಡಿ ಕಾರ್ಯಕರ್ತೆ ದಂಪತಿಯ ಮಗಳು ಬಿ.ಎ. ಪದವಿಯಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಸ್ನಾತಕೋತ್ತರ ಪದವಿಗೆ ಸೇರುವ ಬದಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಜಂಬುಲಿಂಗನಹಳ್ಳಿಯ ವೆಂಕಟೇಶ್‌–ವಿಜಯಲಕ್ಷ್ಮೀ ದಂಪತಿ ಮಗಳು ಅಕ್ಷತಾ ಜಿ.ವಿ. ಅವರು ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬುಧವಾರ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

‘ನಾವು ನಾಲ್ವರೂ ಹೆಣ್ಣುಮಕ್ಕಳು. ನಾನೇ ದೊಡ್ಡವಳು. ಅಪ್ಪ–ಅಮ್ಮನಿಗೆ ಓದಿಸಲು ಕಷ್ಟವಾಗುತ್ತಿದೆ. ಹೀಗಾಗಿ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆ ಬಿಟ್ಟಿದ್ದೇನೆ. ಸದ್ಯಕ್ಕೆ ಪಿಎಸ್‌ಐ ಮತ್ತು ಕೆಎಎಸ್‌ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದೇನೆ. ಹೇಗಾದರೂ ಒಂದು ಉದ್ಯೋಗ ಹಿಡಿದು ಅಪ್ಪ–ಅಮ್ಮನಿಗೆ ಮತ್ತು ತಂಗಿಯರಿಗೆ ನೆರವಾಗಬೇಕು’ ಎಂದು ಅಕ್ಷತಾ ಅವರು ‘ಪ್ರಜಾವಾಣಿ’ಯೊಂದಿಗೆ ಪದಕದ ಸಾಧನೆಯ ಸಂತಸದ ಜೊತೆಯಲ್ಲೇ ಬಡತನದ ಸಂಕಟವನ್ನೂ ಹಂಚಿಕೊಂಡರು.

ADVERTISEMENT

‘ನಾನು ಬಸ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಚನ್ನಗಿರಿ–ಭದ್ರಾವತಿ ನಡುವೆ ಬಸ್‌ ಓಡುತ್ತಿತ್ತು. ಕೊರೊನಾ ಬಂದಿದ್ದರಿಂದ ಅದೂ ಇಲ್ಲ. ನಾಳೆಯಿಂದ ಬಸ್‌ ಓಡಾಟ ಪ್ರಾರಂಭಿಸುತ್ತೇವೆ ಎಂದು ಮಾಲೀಕರು ತಿಳಿಸಿದ್ದಾರೆ. ಮಗಳಿಗೆ ಹೆಚ್ಚಿಗೆ ಓದಬೇಕು ಎಂಬ ಆಸೆ ಇದೆ. ನಮ್ಮಿಂದ ಓದಿಸಲು ಆಗುತ್ತಿಲ್ಲ’ ಎಂದು ವೆಂಕಟೇಶ್‌ ಅಸಹಾಯಕತೆ ಹೇಳಿಕೊಂಡರು.

‘ನಾಲ್ಕು ಮಕ್ಕಳೂ ಓದುವುದರಲ್ಲಿ ಚುರುಕು. ಅಕ್ಷತಾಳಿಗೆ ಚಿನ್ನದ ಪದಕ ಸಿಕ್ಕಿರುವುದು ಖುಷಿಯಾಗಿದೆ. ನಮಗೆ ಹೊಲ, ಜಮೀನು ಏನಿಲ್ಲ. ದುಡಿದು ಬದುಕಬೇಕು. ಹೀಗಾಗಿ ಅವಳಿಗೆ ಒಂದು ಉದ್ಯೋಗ ಸಿಕ್ಕರೆ ಸಾಕು’ ಎನ್ನುತ್ತಾರೆ ತಾಯಿ ವಿಜಯಲಕ್ಷ್ಮೀ.

ಅಕ್ಷತಾ ಅವರ ಸಹೋದರಿಯರು ಕ್ರಮವಾಗಿ ಅಂತಿಮ ಬಿ.ಎ., ದ್ವಿತೀಯ ಪಿಯು ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಸಿಗಬೇಕು ಎಂಬುದು ಹೆತ್ತವರ ಆಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.