ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 240 ಕಿಲೋ ಚಿನ್ನದಿಂದ ₹ 15 ಕೋಟಿ ಅಂದಾಜು ವೆಚ್ಚದಲ್ಲಿ ರಥ ನಿರ್ಮಿಸಿ, ಅರ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ 2005ರ ಆಗಸ್ಟ್ ತಿಂಗಳಲ್ಲೇ ಅನುಮೋದನೆ ನೀಡಿತ್ತು’ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಯೋಜನೆಗೆ ದೇವಾಲಯದಲ್ಲಿ ಲಭ್ಯವಿದ್ದ ಚಿನ್ನ ಬಳಸಿಕೊಂಡು ಉಳಿದ ಚಿನ್ನವನ್ನು ಬ್ಯಾಂಕಿನ ಮೂಲಕ ಖರೀದಿಸಲು ಅಂದು ಸರ್ಕಾರ ಅನುಮೋದನೆ ನೀಡಿತ್ತು. ಅಲ್ಲದೆ, ಸರ್ಕಾರದ ಅನುದಾನ ಬಳಸದೆ, ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲಗಳಿಂದಲೇ ರಥ ನಿರ್ಮಾಣ ವೆಚ್ಚ ಭರಿಸುವಂತೆಯೂ ತಿಳಿಸಲಾಗಿತ್ತು.
ರಥ ನಿರ್ಮಾಣಕ್ಕೆ ಚಿನ್ನ ಮತ್ತು ಬೆಳ್ಳಿಯನ್ನು ಹೊರತುಪಡಿಸಿ 2005ರ ಅಕ್ಟೋಬರ್‌ನಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ಲಕ್ಷ್ಮಿ ನಾರಾಯಣ ಆಚಾರ್ಯ ಅವರು ಸಲ್ಲಿಸಿದ್ದ ತಾಂತ್ರಿಕ್ ಬಿಡ್ ಮೊತ್ತಕ್ಕೆ (₹ 78,20,571) ಟೆಂಡರ್ ಅನುಮೋದಿಸಲು ಕಾರ್ಯನಿರ್ವಹಣಾಧಿಕಾರಿಗೆ ಪ್ರಸ್ತಾವವನ್ನೂ ಸಲ್ಲಿಸಲಾಗಿತ್ತು. ಅದರ ಅನ್ವಯ ಅನುಮೋದನೆಯನ್ನೂ ನೀಡಲಾಗಿತ್ತು. ಆದರೆ, ನಂತರ ಈ ಯೋಜನೆ ನನೆಗುದಿಗೆ ಬಿದ್ದಿತ್ತು.
ದೇವಸ್ಥಾನದ ಭಕ್ತರು ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಹಿಂದಿನ ಸರ್ಕಾರಿ ಆದೇಶಗಳನ್ನು ಹಾಜರುಪಡಿಸಿ, ಯೋಜನೆಗೆ ಮತ್ತೆ ಚಾಲನೆ ನೀಡುವಂತೆ ಮನವಿ ಮಾಡಿ
ದ್ದರು. ಹೀಗಾಗಿ, ಈಗಿನ ಮಾರುಕಟ್ಟೆ ದರದಲ್ಲಿ ಚಿನ್ನದ ದರ, ನಿರ್ಮಾಣ ವೆಚ್ಚ ಎಲ್ಲ ಅಂದಾಜುಗಳನ್ನೂ ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.