ಬೆಂಗಳೂರು: ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಧ್ಯಕ್ಷರಾಗಿರುವ ‘ವೈಎಎನ್ ಚಾರಿಟ ಬಲ್ ಟ್ರಸ್ಟ್’ಗೆ ರಾಜ್ಯ ಸರ್ಕಾರವು ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಸರ್ವೆ ಸಂಖ್ಯೆ 21ರಲ್ಲಿ 4 ಎಕರೆ 24 ಗುಂಟೆ ಗೋಮಾಳ ಜಮೀನನ್ನು ಅಗ್ಗದ ಬೆಲೆಗೆ 2021ರ ನ.20ರಂದು ಮಂಜೂರು ಮಾಡಿದೆ.
ಹೊಸಹಳ್ಳಿ ಗ್ರಾಮದಲ್ಲಿ ಎಕರೆಗೆ ಮಾರುಕಟ್ಟೆ ದರ ₹6 ಕೋಟಿಗಳಷ್ಟು ಇದೆ. ಆದರೆ, ಎಕರೆಗೆ ₹ 25 ಲಕ್ಷದಂತೆ ಜಾಗ ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಹೊಸಹಳ್ಳಿ ಗ್ರಾಮದಲ್ಲಿ 10 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಟ್ರಸ್ಟ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. 1969ರ ಕರ್ನಾಟಕ ಭೂಮಂಜೂರಾತಿ ನಿಯಮ 27ರ ಅಧಿಕಾರ ಚಲಾಯಿಸಿ, ನಿಯಮ 10 (2) ಅನ್ನು ಸಡಿಲಿಸಿ ಗ್ರಾಮದ ಸರ್ವೆ ನಂಬರ್ 21ರಲ್ಲಿ 4 ಎಕರೆ 24 ಗುಂಟೆ ಜಮೀನನ್ನು ಆಗಿನ ಮಾರ್ಗಸೂಚಿ ದರದ ಶೇ 50ರಷ್ಟು ದರವನ್ನು ವಿಧಿಸಿ ಮಂಜೂರು ಮಾಡಲು 2012ರ ಜ. 30ರಂದು ಸಚಿವ ಸಂಪುಟ ತೀರ್ಮಾನಿಸಿತ್ತು. ಇದಕ್ಕೆ ಟ್ರಸ್ಟ್ ₹ 57.50 ಲಕ್ಷವನ್ನು 2012ರ ನ.30ರಂದು ಸರ್ಕಾರಕ್ಕೆ ಪಾವತಿಸಿತ್ತು. ಆ ಪ್ರಕಾರ, 2013ರ ಜ.7ರಂದು ಜಮೀನು ಮಂಜೂರು ಮಾಡಿತ್ತು. ಈ ಜಮೀನು ಯಲಹಂಕ ರೈಲ್ವೆ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿ, ಬಿಬಿಎಂಪಿ ಸರಹದ್ದಿಗಿಂತ ಒಂದೂವರೆ ಕಿ.ಮೀ ದೂರದಲ್ಲಿತ್ತು.
ಟ್ರಸ್ಟ್‌ಗೆ ಮಂಜೂರಾದ ಜಮೀನಿ ನಲ್ಲಿ 4 ಎಕರೆಗಳಷ್ಟು ಜಮೀನನ್ನು ಅಬ್ದುಲ್ ಸುಬಾನ್ ಎಂಬುವರಿಗೆ ಕಂದಾಯ ಇಲಾಖೆ ಈ ಹಿಂದೆಯೇ ಮಂಜೂರು ಮಾಡಿತ್ತು. ಅಬ್ದುಲ್ ಸುಬಾನ್ ಅವರಿಂದ 1964ರಲ್ಲಿ ತಿಮ್ಮಪ್ಪ ಅವರು ಕ್ರಯಪತ್ರದ ಮೂಲಕ ಜಮೀನು ಖರೀದಿಸಿದ್ದರು. ಹಾಗಾಗಿ, ಸರ್ಕಾರ ಇದೇ ಸರ್ವೆ ನಂಬರ್‌ನಲ್ಲಿ ಚೆಕ್ಕು ಬಂದಿಗಳನ್ನು ಪರಿಷ್ಕರಿಸಿ ಟ್ರಸ್ಟ್‌ಗೆ 4 ಎಕರೆ 24 ಗುಂಟೆಯಷ್ಟು ಪರ್ಯಾಯ ಜಾಗವನ್ನು 2021ರಲ್ಲಿ ಮಂಜೂರು ಮಾಡಿದೆ. ಕರ್ನಾಟಕ ಭೂ ಮಂಜೂರಾತಿ ಕಾಯ್ದೆಯ ಪ್ರಕಾರ, ನಗರ ಪ್ರದೇಶದಲ್ಲಿ ಗೋಮಾಳ ಜಾಗವನ್ನು ಸಂಘ–ಸಂಸ್ಥೆ, ವ್ಯಕ್ತಿಗಳಿಗೆ ಮಂಜೂರು ಮಾಡುವಂತಿಲ್ಲ. ಇಲ್ಲಿ ಗೋಮಾಳ ಜಮೀನನ್ನು ಟ್ರಸ್ಟ್‌ಗೆ ಮಂಜೂರು ಮಾಡಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ಸಿಎಜಿ ಆಕ್ಷೇಪ
ಕರ್ನಾಟಕ ಭೂಮಂಜೂರಾತಿ ಕಾಯ್ದೆಯ ನಿಯಮ 21 (ii) (ಎ) ಪ್ರಕಾರ, ಮಾರುಕಟ್ಟೆ ಮೌಲ್ಯ ಅಥವಾ ಮಾರ್ಗಸೂಚಿ ದರದಲ್ಲಿ ಯಾವುದು ಹೆಚ್ಚು ಮೌಲ್ಯವನ್ನು ಹೊಂದಿರುತ್ತದೆಯೋ ಆ ಮೌಲ್ಯದ ಶೇ 50ರಷ್ಟು ಮೊತ್ತವನ್ನು ಕಟ್ಟಿಸಿ ಕೊಂಡು ಜಮೀನು ಮಂಜೂರು ಮಾಡಬಹುದು. ಆದರೆ, ಆದೇಶ ಹೊರಡಿಸುವ ಸಮಯದಲ್ಲಿ ಹೊಸಹಳ್ಳಿ ಗ್ರಾಮದಲ್ಲಿದ್ದ 1 ಎಕರೆ ಜಮೀನಿನ ಮಾರ್ಗಸೂಚಿ ದರ ₹ 25 ಲಕ್ಷ ಹಾಗೂ ಮಾರುಕಟ್ಟೆ ದರ ₹ 1 ಕೋಟಿ ಇತ್ತು. ಟ್ರಸ್ಟ್‌ಗೆ 10 ವರ್ಷಗಳ ಹಿಂದೆ ಜಮೀನು ಮಂಜೂರು ಮಾಡುವಾಗ ಮಾರುಕಟ್ಟೆ ದರದ ಅರ್ಧದಷ್ಟು ಮೊತ್ತವನ್ನು ವೈಎಎನ್ ಟ್ರಸ್ಟ್‌ನಿಂದ ವಸೂಲಿ ಮಾಡಬೇಕಿತ್ತು. ಅದರ ಬದಲು ಅಲ್ಲಿ ಮಾರ್ಗಸೂಚಿ ದರವನ್ನು ಪರಿಗಣಿಸಿ ಟ್ರಸ್ಟ್‌ನಿಂದ ಕೇವಲ ₹ 57.50 ಲಕ್ಷ ಮಾತ್ರ ಕಟ್ಟಿಸಿಕೊಂಡಿದ್ದು ಸರಿಯಲ್ಲ ಎಂದು ಮಹಾಲೇಖಪಾಲರು (ಸಿಎಜಿ) ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
‘ಅಕ್ರಮವಾಗಿ ಜಮೀನು ಪಡೆದಿಲ್ಲ’
ವೈಎಎನ್ ಟ್ರಸ್ಟ್‌ಗೆ ಸರ್ಕಾರಿ ಜಾಗ ಹಂಚಿಕೆ ಮಾಡುವುದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅನ್ಯ ಟ್ರಸ್ಟ್‌ಗಳಿಗೆ, ಶಾಲೆ–ಕಾಲೇಜು ನಡೆಸುವವರಿಗೆ, ಮಠ ಮಾನ್ಯಗಳಿಗೆ ಜಾಗ ಕೊಟ್ಟಂತೆಯೇ ನಮ್ಮ ಟ್ರಸ್ಟ್‌ಗೂ ನೀಡಲಾಗಿದೆ. ದುಡ್ಡು ಕಟ್ಟಿ 8 ವರ್ಷವಾದರೂ ಜಮೀನು ಕೊಟ್ಟಿರಲಿಲ್ಲ. ಇತ್ತೀಚೆಗಷ್ಟೇ ಜಾಗ ಕೊಟ್ಟಿದ್ದಾರೆ. ಅಲ್ಲಿ ಶಾಲೆ ನಿರ್ಮಿಸಲಿದ್ದೇವೆ.
ನಿಗದಿತ ಪ್ರಮಾಣದಲ್ಲಿ ದುಡ್ಡು ಕಟ್ಟಿಸಿಕೊಳ್ಳದ ಬಗ್ಗೆ ಸಿಎಜಿ ವರದಿಯಲ್ಲಿ ಅನೇಕ ಟ್ರಸ್ಟ್‌ಗಳ ಹೆಸರು ಪ್ರಸ್ತಾಪವಾಗಿದೆ. ಸರ್ಕಾರ ನಿಗದಿಪಡಿಸಿದಷ್ಟು ದುಡ್ಡನ್ನು ನಾವು ಕಟ್ಟಿದ್ದೇವೆ. ನಾನು ಉನ್ನತ ಶಿಕ್ಷಣ ಪಡೆದು ಪಿಎಚ್.ಡಿ ಅಧ್ಯಯನ ಮಾಡಿದವ. ಭೂಕಬಳಿಕೆ ಮಾಡುವ ವ್ಯಕ್ತಿ ನಾನಲ್ಲ.
-ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.