ADVERTISEMENT

‘ಗೊಂಡ’ರಿಗೆ ಜಾತಿ ಸಿಂಧುತ್ವ ನೀಡದಿದ್ದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:50 IST
Last Updated 6 ಅಕ್ಟೋಬರ್ 2021, 16:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಗೊಂಡ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡದೆ ಸರ್ಕಾರ ದುರುದ್ದೇಶದಿಂದ ಸತಾಯಿಸುತ್ತಿದೆ. ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್‌. ಶಿವಣ್ಣ ತಿಳಿಸಿದ್ದಾರೆ.

‘ಬೀದರ್‌, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಗೊಂಡ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಹಿಂದಿನಿಂದಲೂ ನೀಡಲಾಗುತ್ತಿದೆ. ಈಗ ಈ ಸಮುದಾಯವನ್ನು ಮೀಸಲಾತಿಯಿಂದಲೇ ವಂಚಿಸುವ ಕುತಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರಿ ಹುದ್ದೆಗೆ ಆಯ್ಕೆಯಾದರೂ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡದಿದ ಕಾರಣಕ್ಕೆ ‘ಗೊಂಡ’ ಸಮುದಾಯದ ಅಭ್ಯರ್ಥಿಗಳು ಅತಂತ್ರರಾಗಿದ್ದಾರೆ’ ಎಂದು ಹೇಳಿದ್ದಾರೆ.

‘ಗೊಂಡ ಸಮುದಾಯದಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಬೇಕು. ಇಲ್ಲದಿದ್ದರೆ ಮುಂದಿನ 20 ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ADVERTISEMENT

ಜಾತಿ ಸಿಂಧುತ್ವ ಪ್ರಮಾಣ ಪತ್ರ ಸಿಗದಿದ್ದರಿಂದ ‘ಗೊಂಡ’ ಸಮುದಾಯದ ಅಭ್ಯರ್ಥಿಗಳು ಅತಂತ್ರರಾಗಿರುವ ಬಗ್ಗೆ ‘ಪ್ರಜಾವಾಣಿ’ ಬುಧವಾರ ವರದಿ ಪ್ರಕಟಿಸಿತ್ತು.

‘ಆದ್ಯತೆ ಮೇರೆಗೆ ವಿತರಣೆ ಮಾಡಿ’

‘ಸರ್ಕಾರಿ ನೌಕರಿಗೆ ಆಯ್ಕೆಯಾಗಿ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಪ್ರಮಾಣ ಪತ್ರ ವಿತರಣೆ ಮಾಡಬೇಕು’ ಎಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಎ.ಆರ್.ಗೋವಿಂದಸ್ವಾಮಿ ಒತ್ತಾಯಿಸಿದ್ದಾರೆ.

ಭಿಕ್ಷೆ ಬೇಡುವ ಅಲೆಮಾರಿ, ಬುಡಕಟ್ಟು ತಬ್ಬಲಿಗಳಂತಿರುವ ಸಮುದಾಯಗಳು ಜಾತಿ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ವಿದ್ಯಾರ್ಥಿ ವೇತನಕ್ಕೆ, ಜಾತಿ ಸಿಂಧುತ್ವಕ್ಕೆ ಪರಿತಪಿಸುವುದು ತಪ್ಪಿಲ್ಲ ಎಂದಿದ್ದಾರೆ.

‘ಕರಡಿ ಆಡಿಸುವ, ಹಾವಾಡಿಸುವ, ಕಾಡಿನ ಫಸಲು ಮಾರಾಟ ಮಾಡಿ ಬದುಕುತ್ತಿರುವ ಸಮುದಾಯಗಳು ಹೊಟ್ಟೆಪಾಡಿಗೆ ಮತ್ತು ತಮಗೆ ಅರಿವಿಲ್ಲದೆ ಪಡೆದ ಜಾತಿ ಪ್ರಮಾಣ ಪತ್ರಗಳು ಈಗ ಗೊಂದಲದ ಗೂಡಾಗಿವೆ. ಅಲೆಮಾರಿ ಮತ್ತು ಬುಡಕಟ್ಟು ಜಾತಿ ಸಮಸ್ಯೆ ಪರಿಹಾರಕ್ಕಾಗಿ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.