ಮಂಗಳೂರು: ‘ಹೊಸ ಶಿಕ್ಷಣ ನೀತಿ’ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಬಂಟ್ವಾಳದ ಪ್ರಕಾಶ್ ಅಂಚನ್ ಮತ್ತು ಬೆಂಗಳೂರಿನ ಅನಿಲ್ ಶೆಟ್ಟಿ ಆರಂಭಿಸಿರುವ ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆಂದೋಲನ ಬೆಂಬಲಿಸಿ 9 ದಿನಗಳಲ್ಲಿ 1.15 ಲಕ್ಷ ‘ಮಿಸ್ಡ್ ಕಾಲ್’ ದಾಖಲಾಗಿದೆ.
ಪ್ರಕಾಶ್ ಸಾರಥ್ಯದ ಬಂಟ್ವಾಳದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸಂಘಟನೆ 2015ರಲ್ಲಿ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ಶಾಲೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. 3 ವರ್ಷಗಳ ಹಿಂದೆ 30 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇಂದು 500 ಮಕ್ಕಳಿದ್ದಾರೆ. ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ಅವುಗಳನ್ನು ಉಳಿಸುವ ಬಗ್ಗೆಪ್ರಕಾಶ್ ಯೋಚಿಸುತ್ತಿದ್ದಾಗ ಅವರಿಗೆ ಜತೆಯಾದವರು ಬೆಂಗಳೂರಿನ ಉದ್ಯಮಿ ಅನಿಲ್ ಶೆಟ್ಟಿ.
‘ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 50 ಲಕ್ಷ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಬನ್ನಿ, ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಕೈಜೋಡಿಸಿ' ಎಂಬ ಘೋಷಣೆಯೊಂದಿಗೆ ಜುಲೈ 18ರಂದು ಈ ಆಂದೋಲನಕ್ಕೆ ದಡ್ಡಲ ಕಾಡು ಸರ್ಕಾರಿ ಶಾಲೆಯಲ್ಲಿಯೇ ಚಾಲನೆ ನೀಡಲಾಗಿದೆ. ಬಳಿಕ ಮಕ್ಕಳು ಕಡಿಮೆಯಿರುವ ಸರ್ಕಾರಿ ಶಾಲೆಗಳಿಗೆ ಆಯೋಜಕರು ತೆರಳಿ ಹೋರಾಟದ ಉದ್ದೇಶ ತಿಳಿಸುತ್ತಿದ್ದಾರೆ.
ಇದನ್ನು ಬೆಂಬಲಿಸುವವರು 76764 44225 ನಂಬರ್‌ಗೆ ಮಿಸ್ಡ್ ಕಾಲ್ ನೀಡುವಂತೆ ಸಾರ್ವಜನಿಕರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
**
ರಾಜ್ಯದ ಒಟ್ಟು ಬಜೆಟ್‌ನ ಶೇ 12ರಷ್ಟು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಖರ್ಚು ಮಾಡುತ್ತಿದೆ. ಅದು ಸಮರ್ಪಕವಾಗಿ ವಿನಿಯೋಗವಾಗುವುದು ಬೇಡವೇ?
-ಅನಿಲ್ ಶೆಟ್ಟಿ, ಆಂದೋಲನದ ರೂವಾರಿ
**
ಕೆಲ ಸಾಹಿತಿಗಳು ಹೊಸ ಶಿಕ್ಷಣ ನೀತಿ ವಿರೋಧಿಸಬಹುದು. ಆದರೆ, ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಿಕೊಳ್ಳಲಿ.
-ಪ್ರಕಾಶ್ ಅಂಚನ್,ಆಂದೋಲನದ ರೂವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.