ADVERTISEMENT

ಬಿಜೆಪಿ ಟಿಕೆಟ್ ಕೊಡಿಸುವ ಆಮಿಷ: ಗೋಪಾಲ್ ಜೋಶಿ ಹತ್ತು ದಿನ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 0:09 IST
Last Updated 22 ಅಕ್ಟೋಬರ್ 2024, 0:09 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರಿಂದ ₹ 2 ಕೋಟಿ ಸುಲಿಗೆ ಮಾಡಿದ್ದ ಆರೋಪದಡಿ ಬಂಧಿತರಾಗಿರುವ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರ ಅಣ್ಣ ಗೋಪಾಲ ಜೋಶಿ ಅವರನ್ನು ಹತ್ತು ದಿನ ಪೊಲೀಸ್ ವಶಕ್ಕೆ ನ್ಯಾಯಾಲಯ ಒಪ್ಪಿಸಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ್‌ ಜೋಶಿ ಅವರನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಸವೇಶ್ವರ ನಗರ ಠಾಣೆಯ ವಿಶೇಷ ಪೊಲೀಸ್ ತಂಡ ಶನಿವಾರ ಬಂಧಿಸಿತ್ತು.

ADVERTISEMENT

ಗೋಪಾಲ್ ಜೋಶಿ ಮತ್ತು ಅವರ ಪುತ್ರ ಅಜಯ್ ಜೋಶಿ ಅವರನ್ನು ಪುಣೆಯಲ್ಲಿ ವಿಚಾರಣೆ ನಡೆಸಿ, ಬೆಂಗಳೂರಿಗೆ ಸೋಮವಾರ ಕರೆತರಲಾಯಿತು. ವೈದ್ಯಕೀಯ ಪರೀಕ್ಷೆ ಒಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಥಣಿಯ ಎಂಜಿನಿಯರ್ ಸೋಮಶೇಖರ್ ಹಾಗೂ ಬೆಂಗಳೂರಿನ ಬಸವೇಶ್ವರ ನಗರ ನಿವಾಸಿ ವಿಜಯಕುಮಾರಿ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ನ್ಯಾಯಂಗ ಬಂಧನಕ್ಕೆ ಒಪ್ಪಿಸಿತ್ತು. 

ಈ ನಡುವೆ ವಿಜಯ ಕುಮಾರಿ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಬಿಎಂಆರ್‌ಸಿಎಲ್ ಹಾಗೂ ಬಿಡಿಎಗೆ ಸಂಬಂಧಿಸಿ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.