ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಮಾಣವನ್ನು ಶೇ 10 ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ಪದವಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಿ ಶೇಕಡಾವಾರು ಜಿ.ಇ.ಆರ್ (ಗ್ರಾಸ್ ಎನ್‌ರೋಲ್‌ಮೆಂಟ್ ರೇಷಿಯೋ) ಪದವಿ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಿಸುವುದು ಸರ್ಕಾರದ ನೀತಿ. ಆದ್ದರಿಂದ, ಗ್ರಾಮೀಣ ಪ್ರದೇಶ ಮತ್ತು ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಪ್ರವೇಶಾತಿ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕಾಗಿ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ದಿನದಿಂದಲೇ ಪದವಿ ಪ್ರವೇಶಾವಕಾಶ ಬಯಸಿ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಅರ್ಜಿ ವಿತರಿಸಬೇಕು. ಅಗತ್ಯ ದಾಖಲಾತಿಗಳನ್ನು ಪಡೆದು, ಪರಿಶೀಲಿಸಿ, ನಿಯಮಾನುಸಾರ ಪ್ರವೇಶ ನೀಡಬೇಕು.
ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸು/ ಕಾಂಬಿನೇಷನ್‌ಗಳ ವಿವರ, ಶುಲ್ಕಗಳ ವಿವರ ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕಾಲೇಜಿನ ವೆಬ್‌ಸೈಟ್ ಮತ್ತು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.
ಮುಖ್ಯವಾಗಿ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ವಿವಿಧ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಸೌಲಭ್ಯಗಳು, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಇರುವ ಶುಲ್ಕ ವಿನಾಯಿತಿ ಸೌಲಭ್ಯಗಳು, ಪದವಿ ನಂತರದ ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ನೀಡುತ್ತಿರುವ ಬಗ್ಗೆ, ಉದ್ಯೋಗ ಮೇಳಗಳ ಆಯೋಜನೆ, ಕೌಶಲ್ಯ ತರಬೇತಿ, ಗ್ರಂಥಾಲಯ ಸೌಲಭ್ಯ, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸಸ್ ಇತ್ಯಾದಿಗಳ ಮಾಹಿತಿ ನೀಡಬೇಕು.
ಪ್ರವೇಶ ಹೆಚ್ಚಿಸಲು ನೆರೆಹೊರೆ ಸಂಪರ್ಕ:ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರತಿಯೊಬ್ಬ ಅಧ್ಯಾಪಕರು ವೈಯಕ್ತಿಕವಾಗಿ ಗಮನಹರಿಸಿ ಪ್ರವೇಶಾತಿ ಹೆಚ್ಚಳಕ್ಕಾಗಿ ನೆರೆಹೊರೆಯ ಪಿ.ಯು ಕಾಲೇಜುಗಳನ್ನು ಸಂಪರ್ಕಿಸಿ, ಸಂಬಂಧಿಸಿದ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್/ ಕಾಂಬಿನೇಷನ್‌ಗಳು ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಸೂಚನೆ ನೀಡಲಾಗಿದೆ.
ಸುತ್ತಮುತ್ತಲಿನ ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯ
ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅರಿವು ಮೂಡಿಸಬೇಕು.
ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ 200 ಕ್ಕಿಂತ ಕಡಿಮೆ ಪ್ರವೇಶಾತಿಯಾದ ಕಾಲೇಜುಗಳ ಪ್ರಾಂಶುಪಾಲರು ಈ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅನುಸರಿಸಬೇಕು. ಅಲ್ಲದೆ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪ್ರೇರೇಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.