ಬೆಂಗಳೂರು: ‘ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಎಡಿಜಿಪಿ ರಾಘವೇಂದ್ರ ಔರಾದಕರ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರಲಾಗುವುದು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಪೊಲೀಸ್ ಸಂಸ್ಮರಣಾ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪೊಲೀಸರ ವೇತನ ತುಂಬಾ ಕಡಿಮೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರಿಗೆ ಆರ್ಥಿಕ ನ್ಯಾಯ ಒದಗಿಸಲು ನಾವು ಬದ್ಧರಿದ್ದೇವೆ’ ಎಂದು ಹೇಳಿದರು.
‘ಔರಾದಕರ ಸಮಿತಿ ಏಳು ರಾಜ್ಯಗಳ ಪೊಲೀಸರ ವೇತನ, ಭತ್ಯೆ ಹಾಗೂ ಕಾರ್ಯವೈಖರಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಅದರ ಅನುಷ್ಠಾನದ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ತಿಳಿಸಿದರು.
‘ಕೆಟ್ಟ ಶಕ್ತಿಗಳ ಮಟ್ಟ ಹಾಕಿ’
‘ಸಮಾಜದ ನೆಮ್ಮದಿ ಹಾಳು ಮಾಡಲೆಂದೇ ಹಲವು ವರ್ಗಗಳು ಹುಟ್ಟಿಕೊಂಡಿವೆ. ಅವು ಜಾತಿ–ಧರ್ಮಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸುತ್ತಿವೆ. ರಾಜಿ, ಅಂಜಿಕೆ ಇಲ್ಲದೇ ಅಂಥ ಕೆಟ್ಟ ಶಕ್ತಿಗಳನ್ನು ಮಟ್ಟಹಾಕಿ’ ಎಂದು ಕುಮಾರಸ್ವಾಮಿ ಕರೆ ನೀಡಿದರು.
‘ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಡ್ರಗ್ಸ್ ಜಾಲಗಳ ಬೇರುಗಳನ್ನು ಬುಡಸಮೇತ ಕಿತ್ತುಹಾಕಿ’ ಎಂದು ಅವರು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.