ಬೆಂಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸುವ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ
ಎಂದು ಆರೋಪಿಸಿ ಸಾರಿಗೆ ನಿಗಮಗಳ ನೌಕರರ ಸಮಾನಮನಸ್ಕರ ವೇದಿಕೆ ನೇತೃತ್ವದಲ್ಲಿ ಸಾರಿಗೆ ನೌಕರರು ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಯಲಿದೆ. ಪ್ರತಿಭಟನೆಯಲ್ಲಿ ನಾಲ್ಕೂ ನಿಗಮಗಳ ನೌಕರರು ಭಾಗವಹಿಸಲಿದ್ದಾರೆ. ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಇರಲಿದ್ದು ಸರ್ಕಾರದ ನಿರ್ಧಾರ ನೋಡಿಕೊಂಡು ಬಸ್ ಸಂಚಾರ ಸ್ಥಗಿತದ ಬಗ್ಗೆ ತೀರ್ಮಾನಿಸಲಾಗುವುದು
ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.
‘ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗ ಅಂದಿನ ಸಾರಿಗೆ ಸಚಿವರು ಸಂಧಾನ ನಡೆಸಿದ್ದರು. 6ನೇ ವೇತನದ ಆಯೋಗದ ಮಾದರಿಯಲ್ಲೇ ಸಾರಿಗೆನೌಕರರಿಗೂ ವೇತನ ನೀಡಲಾಗುವುದು. ಇದನ್ನು ಮೂರು ತಿಂಗಳ ಒಳಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದು ಈಡೇರದ ಕಾರಣಕ್ಕೆ ಮತ್ತೆ ಪ್ರತಿಭಟನೆ ನಡೆಸಲಾಗಿತ್ತು. ಆಗ ಸರ್ಕಾರವು ನೌಕರರ ವಜಾ, ವರ್ಗಾವಣೆ, ಅಮಾನತು ಮಾಡಿತ್ತು.
ಜತೆಗೆ, ನೌಕರರ ಹಾಗೂ ಅವರ ಕುಟುಂಬದವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು’ಎಂದು ತಿಳಿಸಿದರು.
‘ಸಾರಿಗೆ ನೌಕರರನ್ನು 7ನೇ ವೇತನ ಆಯೋಗಕ್ಕೆ ಸೇರ್ಪಡೆ ಮಾಡುವುದು ನನ್ನ ಜವಾಬ್ದಾರಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದರು.ಆದರೆ, ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪವನ್ನೇ ಮಾಡಿಲ್ಲ’ ಎಂದು ದೂರಿದರು.
‘ಸಾರಿಗೆ ಸಂಸ್ಥೆಯ ಖಾಸಗೀಕರಣ ಮಾಡುವ ಯೋಜನೆ ಕೈಬಿಡಬೇಕು. ಸರ್ಕಾರಿ ನೌಕರರಿ ಸಮಾನ ವೇತನ ನೀಡಬೇಕು. ಕಾರ್ಮಿಕ ಸಂಘಗಳ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.